Advertisement

Success: ಬಾಲಕ ಏಕಾಂಗಿಯಾಗಿ ಕೊರೆದ ಬಾವಿಯಲ್ಲಿ ನೀರು!

01:15 AM Apr 12, 2023 | Team Udayavani |

ಬಂಟ್ವಾಳ: ಪಂಚಾಯತ್‌ನಿಂದ ಅಳವಡಿಸಿ ರುವ ನಳ್ಳಿಯಲ್ಲಿ ಸಮರ್ಪಕ ನೀರು ಬರುವುದಿಲ್ಲ ಎಂಬ ವಿಚಾರವನ್ನೇ ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಯೋರ್ವ ಏಕಾಂಗಿಯಾಗಿ ಭಗೀರಥ ಪ್ರಯತ್ನ ಮಾಡಿ ಬಾವಿಯೊಂದನ್ನು ಕೊರೆದು ಒಳ್ಳೆಯ ನೀರು ಪಡೆದು ಇದೀಗ ಮನೆ ಮಂದಿಯ ಜತೆಗೆ ಊರಿನ ನಾಗರಿಕರ ಪ್ರಸಂಸೆಗೂ ಪಾತ್ರನಾಗಿದ್ದಾನೆ.

Advertisement

ಬಂಟ್ವಾಳದ ನರಿಕೊಂಬು ಗ್ರಾಮದ ನಾಯಿಲ-ಕಾಪಿಕ್ಕಾಡ್‌ ನಿವಾಸಿ ಲೋಕನಾಥ- ಮೋಹಿನಿ ದಂಪತಿಯ ಪುತ್ರ, ಪಿಯುಸಿ ವಿದ್ಯಾರ್ಥಿ ಸೃಜನ್‌ ಬಾವಿ ಕೊರೆದ ವಿದ್ಯಾರ್ಥಿ. ಯಾರೊಬ್ಬರ ನೆರವನ್ನೂ ಪಡೆಯದೆ ಆಳದ ಮಣ್ಣನ್ನೂ ತಾನೊಬ್ಬನೇ ತೆಗೆದು ಸುಮಾರು 30 ಅಡಿ ಆಳದಲ್ಲಿ ಈ ಬಿರು ಬೇಸಗೆಯಲ್ಲೂ 3 ಅಡಿಯಷ್ಟು ನೀರನ್ನು ಪಡೆದಿದ್ದಾರೆ.

ಪರೀಕ್ಷೆ ಮುಗಿಸಿ ಛಲ ಬಿಡದ ಕಾರ್ಯ

ಬಿ.ಮೂಡ ಸರಕಾರಿ ಪ.ಪೂ.ಕಾಲೇಜಿನ ವಿದ್ಯಾರ್ಥಿ ಸೃಜನ್‌ ದ್ವಿತೀಯ ಪಿಯುಗೆ ತೇರ್ಗಡೆ ಹೊಂದಿದ್ದಾರೆ. ಮನೆ ಮಂದಿ ನೀರಿಗಾಗಿ ಬವಣೆ ಪಡೆಯುವುದನ್ನು ಕಂಡು ಸೃಜನ್‌ ಕೆಲವು ಸಮಯಗಳ ಹಿಂದೆಯೇ ಬಾವಿ ಕೊರೆಯಬೇಕು ಎಂದು ಹೇಳುತ್ತಿದ್ದ. ಮನೆಮಂದಿ ಈತನ ಮಾತಿಗೆ ಸುಮ್ಮನಾಗಿದ್ದರು. ಆದರೆ ಛಲ ಬಿಡದ ಸೃಜನ್‌ ಕೆಲ ಸಮಯಗಳ ಹಿಂದೆಯೇ ಬಾವಿಗಾಗಿ ಸಣ್ಣದಾದ ಹೊಂಡ ತೆಗೆದು ಸುಮ್ಮನಾಗಿದ್ದನು. ಪಿಯುಸಿ ಪರೀಕ್ಷೆ ಮುಗಿದ ತತ್‌ಕ್ಷಣ ಅದೇ ಹೊಂಡವನ್ನು ಮುಂದುವರಿಸಿ ಆಳ ಮಾಡುತ್ತಲೇ ಹೋಗಿದ್ದಾನೆ. ಹೀಗೆ ಆಳವಾಗುತ್ತ ಹೋಗಿ ಸುಮಾರು 25 ಅಡಿ ಆಳದಲ್ಲಿ ನೀರು ಲಭಿಸಿದ್ದು ಬಾವಿಯಲ್ಲಿ ಬಹಳಷ್ಟು ನೀರು ತುಂಬಿಕೊಂಡಿದೆ.

ಬಾವಿಯ ನೀರನ್ನು ಕಂಡು ಮನೆ ಮಂದಿಯ ಸಂತೋಷಕ್ಕೆ ಪಾರವೇ ಇಲ್ಲದಾಗಿದ್ದು, ಮಗನ ಸಾಧನೆ ಯನ್ನು ಮೆಚ್ಚಿ ಆನಂದ ಬಾಷ್ಪ ಹಾಕುತ್ತಿದ್ದಾರೆ. ಊರ ಮಂದಿಯೂ ಸೃಜನ್‌ ಸಾಹಸಕ್ಕೆ ಪ್ರೋತ್ಸಾಹಿಸುತ್ತ ಬಂದಿದ್ದು, ಬೆನ್ನು ತಟ್ಟಿ ಭೇಷ್‌ ಎನ್ನುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next