ರಾಮದುರ್ಗ: ತಾಲೂಕಿನ ತೊಂಡಿಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ಬುದ್ನಿಖುರ್ದ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ. ನೀರು ಸಂಗ್ರಹಣೆಗೆ ಮಹಿಳೆಯರು, ಮಕ್ಕಳು ದಿನವಿಡೀ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಲವರು ಒಂದೂವರೆ ಕಿ.ಮೀ. ದೂರ ನಡೆದು ನೀರು ತರಬೇಕಿದೆ.
ತೊಂಡಿಕಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷೆ ಗಂಗವ್ವ ಹೊಸಮನಿ ಮತ್ತು ಉಪಾಧ್ಯಕ್ಷೆ ಲಕ್ಷ್ಮೀ ರಂಗನಾಥ ನಾಯಿಕ ಅವರ ಸ್ವಗ್ರಾಮ ಬುದ್ನಿಖುದ್‌ರ್ ಗ್ರಾಮದಲ್ಲಿಯೇ ನೀರಿಗೆ ತಾತ್ವಾರ ಎದುರಾಗಿರುವುದು ಅಚ್ಚರಿ ಮೂಡಿಸಿದೆ. ನೀರಿನ ಅಭಾವ ಕಡಿಮೆಗೊಳಿಸಲು ಪಂಚಾಯತ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆ ಇದೇ ವರ್ಷ ಗ್ರಾಮದಲ್ಲಿ ಒಟ್ಟು 4 ಕೊಳವೆ ಬಾವಿಗಳನ್ನು ಕೊರೆಯಿಸಿದರೂ ನೀರು ಲಭ್ಯವಾಗದೇ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಪಿಡಿಒ ಮಾತ್ರ ಗ್ರಾಮದಲ್ಲಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಘಟಪ್ರಭಾ ಎಡದಂಡೆ ಕಾಲುವೆಯಿಂದ ಕೆರೆ ತುಂಬಿಸಲು ಪೈಪ್‌ಲೈನ್ ಅಳವಡಿಸಲಾಗಿದೆ. ಆದರೂ ಒಮ್ಮೆಯೂ ಕಾಲುವೆಯಿಂದ ಒಂದು ಹನಿಯೂ ನೀರು ಬಿದ್ದಿಲ್ಲ. ಕಳೆದ ಮೂರ್ನಾಲ್ಕು ವರ್ಷಳಿಂದಲೂ ಬುದ್ನಿಖುರ್ದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದರೂ ಅಧಿಕಾರಿಗಳು ಕೊಳವೆಬಾವಿ ಕೊರೆಯಿಸುತ್ತಲೇ ಇದ್ದಾರೆ. ನೀರಿನ ಲಭ್ಯತೆ ಇಲ್ಲದೇ ಸೋತು ಕುಳಿತ್ತಿದ್ದಾರೆ. ಕುಡಿಯುವ ನೀರಿನ ಪೂರೈಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಪ್ಲಾಟ್ (ನವಗ್ರಾಮ)ಗಳಲ್ಲಿ ವಾಸಿಸುವ ಪರಿಶಿಷ್ಟರಿಗಂತೂ ನೀರು ತರುವುದೊಂದೆ ಮುಖ್ಯ ಕೆಲಸವಾಗಿದೆ. ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಅವರು ಅಲ್ಲಿಂದ ನೀರು ಸಾಗಿಸುವ ಸೈಕಲ್ಗಳನ್ನು ಬಳಸಿಕೊಂಡು ನೀರು ತೆಗೆದುಕೊಂಡು ಹೋಗಬೇಕಿದೆ. ದುಡಿದು ತಿನ್ನುವ ಬಡವರು ಹೊಟ್ಟೆಗೆ ಹಿಟ್ಟಿಲ್ಲ ಎಂದರೂ ಕುಡಿಯುವ ನೀರಿಗಾಗಿ ಉದ್ಯೋಗ ಬಿಟ್ಟು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ತೊಂಡಿಕಟ್ಟಿ ಗ್ರಾಮದ ತಿರುವಿಗೆ ಒಂದು ಕೊಳವೆ ಬಾವಿ ಕೊರೆಸಿದ್ದರೂ ನೀರು ಲಭ್ಯವಾಗುತ್ತಿಲ್ಲ. ಘಟಪ್ರಭಾ ಎಡದಂಡೆ ಕಾಲುವೆಯಿಂದ ಕೆರೆ ತುಂಬಿಸುವ ಪ್ರಯತ್ನ ಸಹ ನಡೆದಿದೆ. ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಅಧಿಕಾರಿಗಳೊಂದಿಗೆ ಕೂಡಲೇ ಚರ್ಚಿಸಲಾಗುವುದು.
•ರಮೇಶ ದೇಶಪಾಂಡೆ, ಜಿಪಂ ಸದಸ್ಯ
ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೊಳವೆಬಾವಿಗೆ ನೀರು ಲಭ್ಯವಾಗದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳು ಹಾಗೂ ಸರಕಾರ ಮುಂದಾಗಬೇಕಿದೆ.
•ಶಂಕರ ಬನಪ್ಪನವರ, ಗ್ರಾಮಸ್ಥ