ಹುಬ್ಬಳ್ಳಿ: ಮಲಪ್ರಭಾ ಜಲಾಶಯದಿಂದ ಹೆಚ್ಚುವರಿ 40 ಎಂಎಲ್‌ಡಿ ನೀರು ಪೂರೈಕೆ ಯೋಜನೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು, ಮುಂದಿನ ಒಂದು ತಿಂಗಳಲ್ಲಿ ನಗರದಲ್ಲಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಹೇಳಿದರು.
ಈದ್ಗಾ ಮೈದಾನದಲ್ಲಿ 71ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಳೆದ ವರ್ಷ ಉತ್ತಮ ಮಳೆಯಾಗಿರುವುದರಿಂದ ಮಲಪ್ರಭಾ ಹಾಗೂ ನೀರಸಾಗರ ಜಲಾಶಯ ಭರ್ತಿಯಾಗಿ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ. 40 ಎಂಎಲ್‌ಡಿ ಹೆಚ್ಚುವರಿ ನೀರು ಪಡೆಯುವ ಯೋಜನೆ ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ. ಇದರಿಂದ ಐದು ದಿನಗಳ ಬದಲು ಮೂರು ದಿನಕ್ಕೊಮ್ಮೆ ನೀರು ದೊರೆಯಲಿದೆ ಎಂದರು.
ಮಹಾನಗರದ ಎಲ್ಲ ವಾರ್ಡ್‌ಗಳಿಗೆ 24/7 ನೀರು ಸರಬರಾಜು ಯೋಜನೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿಶ್ವಸಂಸ್ಥೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಮಹಾನಗರದಲ್ಲಿ ವಿವಿಧ ಅನುದಾನಗಳಲ್ಲಿ 176 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಗೆ 120 ಕೋಟಿ ರೂ. ಮಂಜೂರು ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಕಟ್ಟಡ ತ್ಯಾಜ್ಯ ನಿರ್ವಹಣಗಾಗಿ ಸುಸಜ್ಜಿತ ಘಟಕ ಏಪ್ರೀಲ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಮಹಾಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 365 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. 325 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಇನ್ನೂ ಸುಮಾರು 300 ಕೋಟಿ ರೂ. ಟೆಂಡರ್ ಕರೆಯಬೇಕಾಗಿದೆ. 2 ವರ್ಷದಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಕೇಂದ್ರ ರಸ್ತೆ ನಿಧಿ ಯೋಜನೆಯಲ್ಲಿ ನಗರದ ಪ್ರಮುಖ 6 ರಸ್ತೆಗಳಲ್ಲಿ ಮೂರು ರಸ್ತೆಗಳು ಕಾಂಕ್ರೀಟಿಕರಣವಾಗಿದ್ದು, ಉಳಿದ ರಸ್ತೆಗಳ ಕಾಮಗಾರಿ ನಡೆಯುತ್ತಿದೆ ಎಂದರು.
ಮಹಾನಗರದಲ್ಲಿ ಶೇ.30 ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇದಕ್ಕಾಗಿ ಸುಮಾರು 430 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗಿದೆ. ಹಿಂದೆ ಆಗಿರುವ ಸಂಪರ್ಕ ಜಾಲದಲ್ಲಿ ಹಲವು ನ್ಯೂನತೆಗಳು ಕಂಡು ಬಂದಿದ್ದು, ಅವುಗಳನ್ನು ಸರಿಪಡಿಸುವ ಕೆಲಸ ಆಗಲಿದೆ ಎಂದು ಹೇಳಿದರು.
ಮಾಜಿ ಮಹಾಪೌರರಾದ ಡಿ.ಕೆ. ಚವ್ಹಾಣ, ಸುಧೀರ ಸರಾಫ್, ಮಾಜಿ ಸದಸ್ಯ ರಾಜಣ್ಣ ಕೊರವಿ, ಅಧಿಕಾರಿಗಳಾದ ಪಿ.ಡಿ. ಗಾಳೆಮ್ಮನವರ, ಎಸ್.ಸಿ.ಬೇವೂರು, ಎಸ್.ಎಚ್. ನರೇಗಲ್ಲ ಇನ್ನಿತರರಿದ್ದರು.