Advertisement

Water; ಮುಂಗಾರಿಗೆ ಮನೆ, ಮನೆಗೆ ಎತ್ತಿನಹೊಳೆ ನೀರು? ಪೈಪ್‌ಲೈನ್‌ಗಳ ಅಳವಡಿಕೆಗೆ ಸಿದ್ಧತೆ

11:46 PM Sep 08, 2024 | Team Udayavani |

ಬೆಂಗಳೂರು: ಪಶ್ಚಿಮಘಟ್ಟದ ಮಡಿಲಿನಿಂದ ನೀರು ಎತ್ತುವಲ್ಲಿ ಸರಕಾರ ಭಾಗಶಃ ಯಶಸ್ವಿಯಂತೂ ಆಗಿದೆ. ಈ ಯೋಜನೆ 2027ರ ಒಳಗೆ ಪೂರ್ಣಗೊಳಿಸುವ “ಗ್ಯಾರಂಟಿ’ ಕೂಡ ಸಿಕ್ಕಿದೆ. ಅದಕ್ಕೂ ಮೊದಲೇ ಎತ್ತಿನಹೊಳೆ ನೀರು ಬರದ ನಾಡಿನ ಮನೆಗಳ ನಲ್ಲಿಗಳಲ್ಲಿ ಹರಿಯುವ ಸಾಧ್ಯತೆ ಇದೆ !

Advertisement

ಹೌದು, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಂತ-1ರಲ್ಲಿ ಏತ ಕಾಮಗಾರಿಗಳು ಮತ್ತು ವಿದ್ಯುತ್‌ ಪೂರೈಕೆ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಗುರುತ್ವ ಕಾಲುವೆ ಮೂಲಕ ನೀರು ಹರಿಸಿದ ಬೆನ್ನಲ್ಲೇ ಹೀಗೆ ಎತ್ತಿದ ನೀರನ್ನು ದಶಕಗಳಿಂದ ಎದುರು ನೋಡುತ್ತಿರುವ ಜನರ ಮನೆಬಾಗಿಲಿಗೆ ಹರಿಸಲು ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆಗಳು ನಡೆದಿದ್ದು ಅಂದುಕೊಂಡಂತೆ ನಡೆದರೆ, ಒಂದೂವರೆ ವರ್ಷದಲ್ಲಿ ಈ ನಿಟ್ಟಿನಲ್ಲಿ ಪ್ರಯೋಗ ಕೂಡ ನಡೆಯಲಿದೆ.

ನೀರೆತ್ತುವ ಕಾಮಗಾರಿಗಳಿಗೆ ಪರ್ಯಾಯವಾಗಿ ಎತ್ತಿನಹೊಳೆ ಯೋಜನೆ ಅಡಿ ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಉದ್ದೇಶಿತ ಯೋಜನೆ ಅಡಿ ಹರಿದ ನೀರನ್ನು ಕುಡಿಯಲಿಕ್ಕಾಗಿಯೇ ಸಂಗ್ರಹಿಸಲು ಪ್ರತ್ಯೇಕ ಕೆರೆ ಅಥವಾ ಬಂಡುಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆಯು ತುಮಕೂರಿನ ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲಿನ ಕೆರೆಗಳನ್ನು ತುಂಬಿಸಲು ಅಗತ್ಯವಿರುವ ಪೈಪ್‌ಲೈನ್‌ಗಳ ಅಳವಡಿಕೆಗೆ ಟೆಂಡರ್‌ ಆಹ್ವಾನಿಸಲಾಗಿದೆ.

ಬೆನ್ನಲ್ಲೇ ತಿಪಟೂರು, ಚಿಕ್ಕನಾಯಕನಹಳ್ಳಿ, ಹಾಸನದ ಅರಸೀಕೆರೆಯಲ್ಲಿ ಈ ಸಂಬಂಧ ಸಿದ್ಧತೆಗಳು ನಡೆದಿವೆ. ಇದಕ್ಕೆ ಪೂರಕವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯು ಕೆರೆಗಳಿಂದ ಮನೆಗಳಿಗೆ ನೀರು ಕೊಂಡೊಯ್ಯಲು ಅಗತ್ಯ ಪೈಪ್‌ಗ್ಳ ಅಳವಡಿಕೆಗೆ ಪೂರಕವಾಗಿ ಸಮಗ್ರ ಯೋಜನ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದೆ.

ಎತ್ತಿನಹೊಳೆ ಯೋಜನೆ ಅಡಿ ಕುಡಿಯಲು ಮತ್ತು ಅಂತರ್ಜಲ ಮರುಪೂರಣ ಸೇರಿ ಎರಡು ಉದ್ದೇಶಗಳಿಗೆ ಕೆರೆಗಳಲ್ಲಿ ನೀರು ಸಂಗ್ರಹವಾಗಲಿದೆ. ಈ ಪೈಕಿ ಕುಡಿಯಲಿಕ್ಕಾಗಿಯೇ ಪ್ರತ್ಯೇಕ ಕೆರೆಗಳನ್ನು ನಿರ್ಮಿಸಿ, ಅಲ್ಲಿ ಸಂಗ್ರಹಿಸಲಾಗುವುದು. ಯೋಜನೆ ಫ‌ಲಾನುಭವಿ ಹಳ್ಳಿಗಳನ್ನು “ಟೆಕ್ನೋ ಎಕನಾಮಿಕ್‌ ಸ್ಟಡಿ’ ಮೂಲಕ ಮ್ಯಾಪಿಂಗ್‌ ಮಾಡಿ, ಜನಸಂಖ್ಯೆ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಇಂತಿಷ್ಟು ಹಳ್ಳಿಗಳಿಗೆ ಒಂದು ಕೆರೆ ಮತ್ತು ಪೈಪ್‌ ಗಳನ್ನು ಅಳವಡಿಸಲಾಗುವುದು. ಮುಂದಿನ 3 ತಿಂಗಳಲ್ಲಿ ಪೈಪ್‌ಲೈನ್‌ಗಳ ಅಂದಾಜು ಸಿದ್ಧಗೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿ’ಗೆ ತಿಳಿಸಿದರು.

Advertisement

ಮುಂದಿನ ಮುಂಗಾರಿಗೆ
ತುಮಕೂರಿಗೆ ನೀರು?
ಸ್ವತಃ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದಂತೆ ಮುಂದಿನ 4 ತಿಂಗಳಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಆಗ ತುಮಕೂರಿಗೆ ನೀರು ಹರಿಸುವ ಕಾರ್ಯ ಸುಗಮವಾಗಲಿದೆ. ಅಂದಾಜು ಮುಂದಿನ ಮುಂಗಾರು ಹೊತ್ತಿಗೆ ಯೋಜನೆ ಅಡಿ ತುಮಕೂರಿಗೆ ನೀರು ಹರಿಸಲು ಸಾಧ್ಯವಾಗಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ವಿಜೆಎನ್‌ಎಲ್‌) ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮಾಹಿತಿ ನೀಡಿದರು.

ಯೋಜನೆಯಡಿ ಮೊದಲು ತುಮಕೂರಿನ ವಿವಿಧ ಹಳ್ಳಿಗಳಿಗೆ ನೀರು ಹರಿಯಲಿದೆ. ಇದಕ್ಕಾಗಿ ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 35-40 ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಅನಂತರದಲ್ಲಿ ಇತರ ಪ್ರದೇಶಗಳಲ್ಲೂ ಹಂತ-ಹಂತವಾಗಿ ಟೆಂಡರ್‌ ಕರೆಯಲಾಗುವುದು. ಯೋಜನೆ ಪ್ರಗತಿಗೆ ಅನುಗುಣವಾಗಿ ಇತ್ತ ನೀರನ್ನು ಮನೆಬಾಗಿಲಿಗೆ ಕೊಂಡೊಯ್ಯುವ ಕಾರ್ಯ ನಡೆಯಲಿದೆ. ಅದನ್ನು ಆಯಾ ಸ್ಥಳೀಯ ಸಂಸ್ಥೆಗಳು ಅಥವಾ ಸಣ್ಣ ನೀರಾವರಿ ಅಥವಾ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜವಾಬ್ದಾರಿ ವಹಿಸಿಕೊಂಡಿವೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಹಿರಿಯ ಎಂಜಿನಿಯರೊಬ್ಬರು ಸ್ಪಷ್ಟಪಡಿಸಿದರು.

ಹಂತ-1ರಲ್ಲಿ ಆಗಿದ್ದೇನು?
ಏತ ಕಾಮಗಾರಿಗಳು ಮತ್ತು ವಿದ್ಯುತ್‌ ಪೂರೈಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ (ವಿಯರ್‌-3ರ ವಿದ್ಯುತ್‌ ಕಾಮಗಾರಿ ಹೊರತುಪಡಿಸಿ)
ಹಂತ-2ರಲ್ಲಿ ಸ್ಥಿತಿಗತಿ
-ಒಟ್ಟು ಕಾಲುವೆ ಉದ್ದ 252.61 ಕಿ.ಮೀ.
– ಪೂರ್ಣಗೊಂಡಿದ್ದು 164.47 ಕಿ.ಮೀ.
– ಪ್ರಗತಿಯಲ್ಲಿರುವುದು 25.87 ಕಿ.ಮೀ.

ಯೋಜನೆಯ ಅಂಕಿ-ಅಂಶ
– 24.01 ಟಿಎಂಸಿ ಯೋಜನೆ ಅಡಿ ದೊರೆಯಲಿರುವ ನೀರು
– 14.05 ಟಿಎಂಸಿ ಕುಡಿಯುವ ಉದ್ದೇಶಕ್ಕೆ
-9.95 ಟಿಎಂಸಿ ಕೆರೆಗಳನ್ನು ತುಂಬಿಸುವುದು (ಶೇ. 50ರಷ್ಟು ಮಾತ್ರ)

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next