ಹೊನ್ನಾವರ: ಶಿವಮೊಗ್ಗಾ ಜಿಲ್ಲೆಯ ಅಂಬುತೀರ್ಥದಲ್ಲಿ ರಾಮನ ಬಾಣಕ್ಕೆ ಜನಿಸಿದ ತಾಯಿ ಶರಾವತಿ 130ಕಿಮೀ ಚಲಿಸಿ ಹೊನ್ನಾವರದಲ್ಲಿ ಸಮುದ್ರ ಸೇರುವ ಮಾರ್ಗದಲ್ಲಿ ವಿದ್ಯುತ್, ಜಲಪಾತ, ಲಕ್ಷಾಂತರ ಎಕರೆಗೆ ನೀರುಣ್ಣಿಸುತ್ತ ಬಂದಿದ್ದಾಳೆ. ಈ ಬೇಸಿಗೆಯಲ್ಲಿ ಶರಾವತಿಯ ಪ್ರವಾಹ ಅಲ್ಲಲ್ಲಿ ಭಗ್ನವಾಗಿದೆ. ಸ್ಥಳೀಯ ಒರತೆಗಳನ್ನು ಸೇರಿಕೊಂಡು ಹಾಗೋ ಹೀಗೋ ತೆವಳಿಕೊಂಡು ಸಾಗಿದೆ. ಮುಂದೇನು?
ಕಳೆದ ವರ್ಷ ಭರ್ಜರಿ ಮಳೆ ಬಂದು ಹಲವು ಬಾರಿ ಲಿಂಗನಮಕ್ಕಿ ಅಣೆಕಟ್ಟು ತುಂಬಿ ಟೇಲರೀಸ್ ಅಣೆಕಟ್ಟಿನ ಮುಖಾಂತರ ನೀರು ಬಿಡಲಾಗಿತ್ತು. ಶರಾವತಿ ಪಾತಳಿ ಮೀರಿ ಗದ್ದೆ, ಮನೆ, ತೋಟವನ್ನು ಆವರಿಸಿತ್ತು. ಈಗ ಲಿಂಗನಮಕ್ಕಿಯಲ್ಲಿ ನೀರು ಸಾಕಷ್ಟಿದೆ. ವಿದ್ಯುತ್ ಉತ್ಪಾದಿಸಿ ಬಿಟ್ಟ ನೀರು ಟೇಲರೀಸ್ ಅಣೆಕಟ್ಟಿಗೆ ಬಂದು ಸೇರಿಕೊಳ್ಳುತ್ತದೆ. ರಾಜ್ಯದ ವಿದ್ಯುತ್ ಬೇಡಿಕೆಯನ್ನು ಆಧರಿಸಿ ಟೇಲರೀಸ್‌ನಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದ್ದ ಜಲಮಟ್ಟ 51.6ಅಡಿ ಇದೆ. ಎಲ್ಲ ಜನರೇಟರ್‌ಗಳನ್ನು ಆರಂಭಿಸಿದರೆ 5500 ಕ್ಯುಸೆಕ್ ನೀರು ಹೊರಬರುತ್ತದೆ. ಆ ನೀರು ಈಗ ಗೇರಸೊಪ್ಪಾ ಭಾಗದ ಜೀವಜಲ. ಎಲ್ಲ ಜನರೇಟರ್ ಆರಂಭಿಸಿ, ಗೇಟ್ ತೆರೆದು ನೀರು ಬಿಟ್ಟಾಗ ಸೇತುವೆಯ ಮೇಲಿಂದ ನೀರು ಹರಿದು ಹೋಗುತ್ತಿತ್ತು. ಈಗ ಸೇತುವೆಯ ಅಡಿ ಜುಳುಜುಳು ಹರಿಯುತ್ತಿದೆ. ನದಿಯ ಪಾತಳಿಯ ತಗ್ಗು ಪ್ರದೇಶದಲ್ಲಿ ದನ ಮೇಯುತ್ತಿದೆ. ಎಡಬಲ ದಂಡೆಯ ಮಾತ್ರವಲ್ಲ ಒಳಭಾಗದ ಅಂತರ್ಜಲವನ್ನು ಹೆಚ್ಚಿಸಲು ನಿಧಾನವಾಗಿ 35ಕಿಮೀ ಕೊಳ್ಳದಲ್ಲಿ ಸಾಗುತ್ತಿದ್ದ ಶರಾವತಿ ಸೊರಗಿದ ಕಾರಣ ತಾಲೂಕಿನ ಹಳ್ಳಗಳು ಮಾತ್ರವಲ್ಲ ಬಾವಿಗಳು ತಳ ಕಂಡಿವೆ.
ನಿರಂತರ ಅರಣ್ಯ ನಾಶ, ನೀರಿನ ದುರ್ಬಳಕೆ, ಕೊಳವೆ ಬಾವಿಗಳ ಹಾವಳಿ ಪ್ರಕೃತಿಯಲ್ಲಿ ಅಸಮತೋಲನ ಉಂಟುಮಾಡಿದೆ. ಅಣೆಕಟ್ಟಿನ ತಗ್ಗು ಪ್ರದೇಶದಲ್ಲಿ ಇಷ್ಟು ಕಡಿಮೆ ನೀರು ಇದ್ದರೆ ಗೇರುಸೊಪ್ಪಾದಿಂದ ಹೊನ್ನಾವರಕ್ಕೆ ಬರುವ 300ಕೋಟಿ ರೂಪಾಯಿ ವೆಚ್ಚದ ಬಹುಗ್ರಾಮ ನೀರಿನ ಯೋಜನೆ ಗತಿಯೇನು? ಅಣೆಕಟ್ಟಿನಿಂದಲೇ ಬೆಂಗಳೂರಿಗೆ ಕುಡಿಯುವ ನೀರು ಒಯ್ಯುವ ಯೋಜನೆ ಜಾರಿಗೆ ಬಂದರೆ ಏನಾದೀತು? ಬಹುಕಾಲ ನಿರ್ಲಕ್ಷಿಸಿ ರೋಗ ಉಲ್ಭಣವಾಗಿದೆ ಅನ್ನುವಾಗ ಸರಿಯಾಗಲು ಬಹುಕಾಲ ಚಿಕಿತ್ಸೆ ಬೇಕು. ಶರಾವತಿ ಮತ್ತೆ ಸುಧಾರಿಸಬಹುದೇ?
Advertisement
ರಾಜ್ಯದ ಜಲ ವಿದ್ಯುತ್ತಿನಲ್ಲಿ ಶೇ. 30ರಷ್ಟನ್ನು ಅತೀ ಅಗ್ಗದಲ್ಲಿ ಯುನಿಟ್‌ಗೆ 20 ಪೈಸೆಯಂತೆ ಒದಗಿಸುವ, ಜೋಗ ಜಲಪಾತ ಸೃಷ್ಠಿಸಿರುವ ಶರಾವತಿಯ ಪ್ರವಾಹ ಸೊರಗಿದೆ. ಈವರೆಗೆ ಇಂತಹ ಪರಿಸ್ಥಿತಿಯನ್ನು ಕಂಡಿರಲಿಲ್ಲ ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಲಿಂಗನಮಕ್ಕಿಯಲ್ಲಿ ನೀರು ಸಾಕಷ್ಟಿದೆ. ವಿದ್ಯುತ್ ಉತ್ಪಾದಿಸಿ ಬಿಟ್ಟ ನೀರು ಟೇಲರೀಸ್ ಅಣೆಕಟ್ಟಿಗೆ ಬಂದು ಸೇರಿಕೊಳ್ಳುತ್ತದೆ. ರಾಜ್ಯದ ವಿದ್ಯುತ್ ಬೇಡಿಕೆಯನ್ನು ಆಧರಿಸಿ ಟೇಲರೀಸ್‌ನಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದ್ದ ಜಲಮಟ್ಟ 51.6ಅಡಿ ಇದೆ.
•ಜೀಯು, ಹೊನ್ನಾವರ