Advertisement

ಖಾಸಗಿ ಕಾರ್ಯಕ್ರಮಕ್ಕೆ ಪುರಸಭೆಯಿಂದ ನೀರು!

12:22 AM Jan 24, 2020 | Team Udayavani |

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ. ಎಂತಹ ಬೇಸಗೆಯೇ ಇರಲಿ ಇಲ್ಲಿಯಂತೂ ಕುಡಿಯಲು ಧಾರಾಳ ನೀರಿರುತ್ತದೆ. ಇನ್ನು ಮುಂದೆಯಂತೂ 24 ತಾಸು ನೀರು ನೀಡಲು 35.5 ಕೋ.ರೂ.ಗಳ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಆದರೆ ಕುಡಿಯಲು ಕೊಡುವ ನೀರು ದುರ್ಬಳಕೆ ಯಾಗಬಾರದು ತಾನೆ? ಅದಕ್ಕಾಗಿ ಪುರಸಭೆ ಒಂದು ಪರಿಹಾರೋಪಾಯ ಕಂಡುಕೊಂಡಿದೆ. ಕುಡಿಯುವ ನೀರಿನ ಮಿತಿಮೀರಿದ ಖರ್ಚಿಗೆ ಕಡಿವಾಣ ಹಾಕುವ ಸಲುವಾಗಿ ಹೆಚ್ಚುವರಿ ನೀರು ಬೇಕಾಗುವವರಿಗೆ ಟ್ಯಾಂಕರ್‌ನಲ್ಲಿ ನೀರು ನೀಡಲು ನಿರ್ಧರಿಸಿದೆ.

Advertisement

ಜಪ್ತಿಯಿಂದ ನೀರು
ಪುರಸಭೆಗೆ ಜಪ್ತಿಯಿಂದ ಜಂಬೂ ನದಿಯಿಂದ ಶುದ್ಧೀಕರಿಸಿದ ಕುಡಿಯುವ ನೀರು ಪೈಪ್‌ಲೈನ್‌ ಮೂಲಕ ಬರುತ್ತದೆ. ಹಾಗೆ ನೀರು ತರುವಾಗ ಪೈಪ್‌ಲೈನ್‌ ಹಾದು ಹೋಗುವ ಗ್ರಾ.ಪಂ.ಗಳ ಜನರಿಗೂ ನೀರು ವಿತರಿಸಲಾಗುತ್ತದೆ. ಪುರಸಭೆ ವ್ಯಾಪ್ತಿಯ ಜನರಿಗೂ ಈ ನೀರೇ ಸಾಕಾಗುತ್ತದೆ. ಪ್ರಸ್ತುತ ಪುರಸಭೆ ವ್ಯಾಪ್ತಿಯಲ್ಲಿ 3 ಸಾವಿರ ನೀರಿನ ಸಂಪರ್ಕಗಳಿವೆ. ಇನ್ನು ಇದು ದುಪ್ಪಟ್ಟು ಆಗಲಿದ್ದು ದಿನವಿಡೀ ನೀರು ಒದಗಿಸಲು ಹೊಸ ಯೋಜನೆ ಕಾಮಗಾರಿ ನಡೆಯುತ್ತಿದೆ. 3,153 ನೀರಿನ ಹೊಸ ಸಂಪರ್ಕದ ಗುರಿಯಲ್ಲಿ 2,650 ಹೊಸ ಸಂಪರ್ಕಗಳಿಗೆ ಮೀಟರ್‌ ಅಳವಡಿಸಿ ಆಗಿದೆ.

5 ಬಾವಿಗಳು
ಪುರಸಭೆ ವ್ಯಾಪ್ತಿಯಲ್ಲಿ ಆನೇಕ ಬಾವಿಗಳು ಇದ್ದು ಹೆಚ್ಚಿನವು ನಿರುಪಯುಕ್ತವಾಗಿವೆ. ಪಾಳುಬಾವಿಗಳಾಗುತ್ತಿವೆ. ಈ ಪೈಕಿ ಧಾರಾಳ ನೀರಿರುವ 5 ಬಾವಿಗಳನ್ನು ಸ್ವತ್ಛಗೊಳಿಸಿ ನೀರನ್ನು ಕುಡಿಯಲು ಯೋಗ್ಯವಾಗಿಸಲಾಗಿದೆ. ಎಲ್ಲ ಬಾವಿಗಳಿಗೂ ಪಂಪ್‌ ಅಳವಡಿಸಲಾಗಿದೆ. ನಾನಾಸಾಹೇಬ್‌ ವಾರ್ಡ್‌, ದತ್ತಾತ್ರೇಯ ಫ್ಲಾಟ್‌ ಬಳಿ, ಪೊಲೀಸ್‌ ಕ್ವಾರ್ಟರ್ಸ್‌ ಬಳಿ ಮೊದಲಾದೆಡೆ ಬಾವಿಗಳಿವೆ. ಈ ಎಲ್ಲವುಗಳಿಂದ ನೀರು ಪಡೆಯಬಹುದು. ಇದು ಸ್ವತ್ಛ ಕುಂದಾಪುರ ಸುಂದರ ಕುಂದಾಪುರ ಕನಸಿಗೂ ಪೂರಕವಾಗಿ ಮಾಡಲಾಗಿದೆ. ಸ್ವತ್ಛತೆಗೆ ಆದ್ಯತೆ ನೀಡಿ, ಸಮಾರಂಭಗಳಲ್ಲಿ ಶುಚಿತ್ವ ಕಾಪಾಡಲು ಈ ನೀರು ಬಳಸಬಹುದು ಎನ್ನುವುದು ಯೋಚನೆ.

ಸಮಾರಂಭಗಳಿಗೆ
ನೂರಿನ್ನೂರು ಜನ ಸೇರುವ ಸಮಾರಂಭಗಳಿಗೆ ನೀರಿನ ಅವಶ್ಯಕತೆಯಿದ್ದಾಗ ನಿರ್ದಿಷ್ಟ ಕನಿಷ್ಟ ಮೊತ್ತ ಪಾವತಿಸಿ ನೀರು ಪಡೆಯಬಹುದು. ಇದಕ್ಕಾಗಿ ಟ್ಯಾಂಕರ್‌ಗಳನ್ನು ಗೊತ್ತುಪಡಿಸಲಾಗಿದ್ದು ಆ ಟ್ಯಾಂಕರ್‌ನ ಬಾಡಿಗೆ ಹಾಗೂ ವಿದ್ಯುತ್‌ ಬಿಲ್‌ ಬಾಬ್ತು ಪುರಸಭೆಗೆ ಪಾವತಿಸಿ ನೀರು ಪಡೆಯುವ ವ್ಯವಸ್ಥೆ ಮಾಡಲಾಗಿದೆ.

ಅಗ್ನಿ ಶಾಮಕ ದಳಕ್ಕೆ
ನೀರಿನ ಪೈಪ್‌ಲೈನ್‌ನಲ್ಲಿ ಎರಡು ಕಡೆ ಪಾಯಿಂಟ್‌ಗಳನ್ನು ಮಾಡಿ ಅಗ್ನಿಶಾಮಕ ದಳಕ್ಕೆ ಬಿಟ್ಟುಕೊಡಲು ಚಿಂತಿಸಲಾಗಿದೆ. 24 ತಾಸು ಕೂಡಾ ಇದರಲ್ಲಿ ನೀರು ಇರಲಿದ್ದು ಅಗ್ನಿಶಾಮಕ ದಳದವರು ಯಾವಾಗ ಬೇಕಾದರೂ ಈ ಪಾಯಿಂಟ್‌ಗಳಲ್ಲಿ ನೀರು ತುಂಬಿಸಿಕೊಳ್ಳಬಹುದು. ಅಷ್ಟಲ್ಲದೇ 5 ಬಾವಿಗಳ ಪೈಕಿ ಒಂದು ಬಾವಿಯನ್ನು ಪೂರ್ಣಪ್ರಮಾಣದಲ್ಲಿ ಅಗ್ನಿಶಾಮಕ ದಳದ ಉಪಯೋಗಕ್ಕೆ ಮೀಸಲಿರಿಸುವ ಯೋಜನೆಯೂ ಇದೆ. ಪುರಸಭೆ ವ್ಯಾಪ್ತಿಗಷ್ಟೇ ಅಲ್ಲ; ಅಗ್ನಿ ಶಾಮಕ ದಳದವರು ಅಗ್ನಿ ಅನಾಹುತಕ್ಕೆ ಈ ಬಾವಿಯ ನೀರನ್ನು ಬಳಸಿಕೊಳ್ಳಲು ಅನುವಾಗುವಂತೆ ಅದಕ್ಕೆ ಪಂಪ್‌ ಅಳವಡಿಸಲಾಗಿದೆ.

Advertisement

ಪಂಪ್‌ ಅಳವಡಿಸಲಾಗಿದೆ
ನಗರದ ಐದು ಬಾವಿಗಳನ್ನು ಸ್ವತ್ಛಗೊಳಿಸಿ ಅವುಗಳಿಗೆ ಪಂಪ್‌ ಅಳವಡಿಸಲಾಗಿದೆ. ನಗರದ ಜನತೆಯ ಖಾಸಗಿ ಕಾರ್ಯಕ್ರಮ ಗಳಿಗೆ ಅಗತ್ಯವಿದ್ದರೆ ಟ್ಯಾಂಕರ್‌ ಮೂಲಕ ನೀರು ಕೊಂಡೊಯ್ಯಬಹುದು. ಹೆಚ್ಚುವರಿ ನೀರು ಬೇಕಾದಾಗ ಕುಡಿಯುವ ನೀರಿನ ದುರ್ಬಳಕೆ ಆಗುವುದೂ ತಪ್ಪುತ್ತದೆ. ಸ್ವತ್ಛತೆಗೆ ಆದ್ಯತೆಯಾಗಿ ನೀರು ನೀಡಿದಂತೆಯೂ ಆಗುತ್ತದೆ. ಬಾವಿಗಳು ಪಾಳುಬೀಳುವುದನ್ನು ತಪ್ಪಿಸಿದಂತೆಯೂ ಆಗುತ್ತದೆ. ಇಷ್ಟಲ್ಲದೇ ಅಗ್ನಿಶಾಮಕ ದಳಕ್ಕೂ ನೀರು ನೀಡಲು ಉದ್ದೇಶಿಸಲಾಗಿದೆ.
-ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next