Advertisement
ತುಂಗಭದ್ರಾ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿರುವುದರಿಂದ 75 ಟಿಎಂಸಿ ನೀರು ಸಂಗ್ರಹವಾಗುವ ಸಾಧ್ಯತೆ ಇದೆ. ಅದರಲ್ಲಿ ರಾಜ್ಯದ ಪಾಲು 42.850 ಟಿಎಂಸಿ. ರೈತರ ಬೆಳೆಗಳಿಗೆ 33 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಮಳೆಯ ಪರಿಸ್ಥಿತಿ ನೋಡಿಕೊಂಡು ಬಳಕೆ ಮಾಡಿಕೊಳ್ಳಲಾಗುವುದು. ಸದ್ಯಕ್ಕೆ ಎಡದಂಡೆ ಹಾಗೂ ಬಲದಂಡೆ ಕಾಲುವೆ ಮೂಲಕ ಮೂರು ಜಿಲ್ಲೆಗಳ ರೈತರ ಜಮೀನುಗಳಿಗೆ 24 ಟಿಎಂಸಿ ನೀರು ಹರಿಸಲು ನಿರ್ಧರಿಸಲಾಗಿದೆ. ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೂಲಕ ಸೆಪ್ಟಂಬರ್ 1 ರಿಂದ 30ರ ವರೆಗೆ ಪ್ರತಿದಿನ 2800 ಕ್ಯೂಸೆಕ್ಸ್ ನೀರು ಹರಿಸಲಾಗುವುದು. ಉಳಿದ 16.740 ಟಿಎಂಸಿ ನೀರನ್ನು ಪ್ರತಿ ದಿನ 3800 ಕ್ಯೂಸೆಕ್ಸ್ ನಂತರ ನವೆಂಬರ್ 20ರವರೆಗೂ ರೈತರಿಗೆ ನೀಡಲಾಗುವುದು ಎಂದರು.
Related Articles
ಕುಡಿಯುವ ನೀರಿಗೆ 12 ಟಿಎಂಸಿ ನೀರು ಉಳಿಸಿಕೊಳ್ಳ ಬೇಕಿದೆ. ಅಲ್ಲದೆ, ಬಿಸಿಲಿಗೆ ಸುಮಾರು 5 ಟಿಎಂಸಿ ನೀರು ಆವಿಯಾಗಿ ಹೋಗುವ ಸಾಧ್ಯತೆ ಇರುವುದರಿಂದ ರೈತರು ಆದಷ್ಟು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವಂತೆ ಸೂಚಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರೈತರಿಗೆ ಭತ್ತ ಬೆಳೆಯದಂತೆ ಮನವಿ ಮಾಡಿಕೊಂಡಿದ್ದಾರೆ ಎಂದರು. ಮೂರು ಜಿಲ್ಲೆಗಳಲ್ಲಿ ಸುಮಾರು 6.5 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ ಎಂದು
ಸಂತೋಷ್ ಲಾಡ್ ಹೇಳಿದರು. ತುಂಗಭದ್ರಾ ಎಡದಂಡೆ ಕಾಲುವೆಯಡಿ ಬರುವ ವಿತರಣಾ ಕಾಲುವೆಗಳಿಗೂ ಪೊಲೀಸ್ ಬಂದೋಬಸ್ತ್ ಒದಗಿಸಲು ಕಲುಬುರಗಿ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಲಾಗಿದ್ದು, ಅನಧಿಕೃತ ಪಂಪ್‌ಸೆಟ್‌ಗಳನ್ನು ತಕ್ಷಣ ತೆರವುಗೊಳಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ನದಿ ಮೂಲಕವೇ ನೀರು ಹರಿಸಲು ತುಂಗಭದ್ರಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಲಾಡ್ ತಿಳಿಸಿದರು.
Advertisement
ನಾವೀಗಾಗಲೇ ಸಸಿ ಮಾಡಿ ಇಟ್ಟುಕೊಂಡಿದ್ದೇವೆ. ನಾಟಿ ಮಾಡೋದಕ್ಕೆ ಈಗಾಗಲೇ 15 ದಿನ ತಡವಾಗಿದೆ. ಈಗ ಭತ್ತ ನಾಟಿ ಮಾಡಲೇಬೇಕು. ಬೆಳೆ ಒಣಗಿದರೆ ರೈತರೇ ಹೊಣೆ ಎಂದು ಸರ್ಕಾರ ನಮ್ಮ ಮೇಲೆ ಹಾಕುತ್ತದೆ. ಈಗ ನಾಲೆಗಳಿಗೆ ನೀರು ಬಿಡಲು ಒಪ್ಪಿಕೊಂಡಿರುವುದರಿಂದ ನಮಗೆ ಭತ್ತ ನಾಟಿ ಮಾಡಲು ಅನುಕೂಲ ಆಗಿದೆ. ವೀರೇಶ್ ಗಂಗಾವತಿ, ತುಂಗಭದ್ರಾ ರೈತ ಸಂಘ, ಪ್ರಧಾನ ಕಾರ್ಯದರ್ಶಿ