Advertisement

ಎರಡನೇ ಬೆಳೆಗೆ ನೀರು ಸಿಗೋದು ಡೌಟು

04:04 PM Nov 18, 2018 | Team Udayavani |

ಸಿಂಧನೂರು: ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿನ ಎಲ್ಲ ರೈತರಿಗೆ ಒಂದು ಬೆಳೆಗೆ ಸಂಪೂರ್ಣ ನೀರು ಕೊಡುವುದು. ಜೊತೆಗೆ ಈಗ ಬೆಳೆದು ನಿಂತಿರುವ ಬೆಳೆ ರಕ್ಷಣೆ ಮೊದಲ ಆದ್ಯತೆಯಾಗಿದೆ ಎಂದು ಐಸಿಸಿ ಅಧ್ಯಕ್ಷ, ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

ನಗರದ ಸರ್ಕ್ನೂಟ್‌ ಹೌಸ್‌ನಲ್ಲಿ ಐಸಿಸಿ ಸಭೆ ಪೂರ್ವಭಾವಿಯಾಗಿ ಶನಿವಾರ ಕರೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ವರ್ಷ ಜಲಾಶಯಕ್ಕೆ 351 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಜಲಾಶಯ ತುಂಬಿ 197 ಟಿಎಂಸಿ ಅಡಿ ನೀರು ನದಿಗೆ ಹರಿದಿದೆ. 151 ಟಿಎಂಸಿ ನೀರಿನಲ್ಲಿ 98.99 ಟಿಎಂಸಿ ಅಡಿ ನೀರು ಕರ್ನಾಟಕದ ಪಾಲು. ನ.30ರವರೆಗೆ 76.5 ಟಿಎಂಸಿ ನೀರು ಬಳಕೆಯಾಗುತ್ತದೆ.

ಉಳಿದ 22.5 ಟಿಎಂಸಿ ನೀರಿನಲ್ಲಿ 11.5 ಟಿಎಂಸಿ ನೀರು ಡೆಡ್‌ ಸ್ಟೋರೇಜ್‌, ಆವಿಯಾಗಲಿದೆ. ಜೊತೆಗೆ ಬಲದಂಡೆ ಕೆಳಭಾಗದ ಕಾಲುವೆಗೆ 2.847 ಟಿಎಂಸಿ, ಮೇಲ್ಮಟ್ಟದ ಕಾಲುವೆಗೆ 3.147 ಟಿಎಂಸಿ, ರಾಯ ಬಸವ ಕಾಲುವೆಗೆ 1.81 ಟಿಎಂಸಿ, ನದಿಗೆ 0.94 ಟಿಎಂಸಿ, ಡಿಸೆಂಬರ್‌ ಅಂತ್ಯದವರೆಗೆ ಎಡದಂಡೆ ನಾಲೆಗೆ 3000 ಕ್ಯುಸೆಕ್‌ನಂತೆ ನೀರು ಕೊಟ್ಟರೆ 8 ಟಿಎಂಸಿ ನೀರು ಮಾತ್ರ ಉಳಿಯಲಿದೆ. ಕಳೆದ ವರ್ಷ 53,760 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿಯಾಗಿದ್ದರೆ, ಪ್ರಸಕ್ತ ವರ್ಷ 75,806 ಹೆಕ್ಟೇರ್‌ ನಾಟಿಯಾಗಿದೆ. ಜೊತೆಗೆ ಕಳೆದ 36 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮಳೆಯಾಗಿದೆ ಎಂದು ಸಭೆ ಪ್ರಾರಂಭವಾಗುತ್ತಿದ್ದಂತೆ ಸಚಿವರು ಅಂಕಿ ಅಂಶಗಳನ್ನು ನೀಡಿದರು.

ರೈತ ಖಾಜಾಸಾಬ್‌ ಸಾಲಗುಂದಾ ಮಾತನಾಡಿ, ಮಳೆ ಕೊರತೆಯಿಂದ ಸೆ. 25ರವರೆಗೆ ಭತ್ತ ನಾಟಿ ಮಾಡಲಾಗಿದೆ. ಬೆಳೆ ಬರಬೇಕಾದರೆ ಡಿ.25ರವರೆಗೆ ನೀರು ಕೊಡಬೇಕು ಎಂದರು. ರೈತ ಸಂಘದ ಮುಖಂಡ ಅಮೀನಪಾಷಾ ದಿದ್ದಿಗಿ ಮಾತನಾಡಿ, ಕೆಳ ಭಾಗದ ರೈತರು ಜೋಳ ಹಾಗೂ ಕಡಲೆ ಬಿತ್ತನೆ ಮಾಡಿದ್ದಾರೆ. ಅವರಿಗೆ ಡಿಸೆಂಬರ್‌ ಅಂತ್ಯದವರೆಗೆ ನೀರು ಕೊಟ್ಟರೆ ಮಾತ್ರ ಬೆಳೆ ಉಳಿಸಲು ಸಾಧ್ಯ. ಅಕ್ರಮ ನೀರಾವರಿಗೆ ಕಡಿವಾಣ ಹಾಕಲು ಸಚಿವರು ಭರವಸೆ ನೀಡಿದ್ದರೂ ಅದು ಸಾಧ್ಯವಾಗಿಲ್ಲ ವೇಕೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ವೆಂಕಟರಾವ್‌ ನಾಡಗೌಡ, ಅಕ್ರಮ ನೀರಾವರಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕ್ರಮ ಕೈಗೊಳ್ಳುವ ವೇಳೆಗೆ ಭತ್ತ ನಾಟಿ ಮಾಡಿದ್ದರಿಂದ, ಜೊತೆಗೆ ಜನಪ್ರತಿನಿಧಿ ಗಳ ಒತ್ತಡದಿಂದ ಇದೊಂದು ಬೆಳೆಗೆ ಕೈಬಿಡಲಾಗಿದೆ. ಐಸಿಸಿ ಸಭೆಯಲ್ಲಿ ಅಕ್ರಮ ನೀರಾವರಿಗೆ ಸಂಪೂರ್ಣ ಕಡಿವಾಣ ಹಾಕಲು ನಿರ್ಧಾರ ಕೈಗೊಳ್ಳಲಾಗುವುದು. ಎಡದಂಡೆ ವ್ಯಾಪ್ತಿಯಲ್ಲಿ ಎಡಭಾಗಕ್ಕೆ ಸುಮಾರು 10 ಅಡಿ ಕಾಂಕ್ರಿಟ್‌ ಗೋಡೆ ನಿರ್ಮಾಣಕ್ಕಾಗಿ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ವಿವಿಧ ಕಂಪನಿಗಳಿಗೆ ನೋಟಿಸ್‌ ನೀಡಿ, ನೀರು ಸಹ ಬಂದ್‌ ಮಾಡಲಾಗಿದೆ ಎಂದರು.

Advertisement

ಸಭೆಯಲ್ಲಿ ಕೆಲ ರೈತರು ಎರಡನೇ ಬೆಳೆಗೆ ಸಂಪೂರ್ಣವಾಗಿ ನೀರು ಕೊಡಲು ಸಾಧ್ಯವಾದರೆ ಮಾತ್ರ ಕಾಲುವೆಗೆ ನೀರು ಬಿಡಬೇಕು. ಇಲ್ಲದಿದ್ದರೆ ಫೆಬ್ರವರಿಯಲ್ಲಿ ಹೊರ ಬೆಳೆಗೆ ನೀರು ಬಿಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
 
ತಾಂತ್ರಿಕ ಮುಖ್ಯ ಅಭಿಯಂತರ ಜಾನೇಕರ್‌ ನೀರು ಲಭ್ಯತೆ ಕುರಿತು ಮಾಹಿತಿ ನೀಡಿದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಖಾಸೀಮ್‌ ನಾಯಕ, ಸದಸ್ಯ ದುರುಗಪ್ಪ ಗುಡಗಲದಿನ್ನಿ, ಮುಖಂಡರಾದ ಜಿ.ಸತ್ಯನಾರಾಯಣ, ಲಿಂಗಪ್ಪ ದಡೇಸ್ಗೂರು, ಧರ್ಮನಗೌಡ ಮಲ್ಕಾಪುರ, ಶ್ಯಾಮಸುಂದರ್‌ ಕೀರ್ತಿ, ಬಸವರಾಜ ಹಂಚಿನಾಳ, ಬಸವರಾಜ ನಾಡಗೌಡ, ಮಲ್ಲೇಶಗೌಡ ಬಸಾಪುರ, ನೀಲಕಂಠರಾವ್‌ ಜಾಹಗೀರದಾರ, ಗೌಡಪ್ಪಗೌಡ ಗುಂಜಳ್ಳಿ, ರಾಮರಾವ್‌, ಉದಯಕುಮಾರ, ಕೆ.ಹನುಮೇಶ, ಆದಿಮನಿ ಪರಮೇಶ, ನಾಗೇಶ ಹಂಚಿನಾಳ ಕ್ಯಾಂಪ್‌ ಸೇರಿ ನೂರಾರು ರೈತರು ಭಾಗವಹಿಸಿದ್ದರು. 

ಅಮಾನತಿಗೆ ಸೂಚನೆ
ನೀರಾವರಿ ಇಲಾಖೆಯಲ್ಲಿ ಅ ಧಿಕಾರಿಗಳ ಕೊರತೆಯಿಂದ ಸರಿಯಾದ ನಿರ್ವಹಣೆ ಸಾಧ್ಯವಾಗಿಲ್ಲ. 4 ಜನ ಕಾರ್ಯನಿರ್ವಾಹಕ ಅಭಿಯಂತರರು, 20 ಜನ ಎಇಇ, 10 ಜನ ಜೆಇಗಳನ್ನು ಹಾಕಲಾಗಿತ್ತು. ಆದರೂ ಯಾವ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲು ಸೂಚಿಸಲಾಗಿದೆ ಎಂದು ಸಚಿವ ವೆಂಕಟರಾವ್‌ ನಾಡಗೌಡರ ರೈತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರೈತರ ಹಿತ ಕಾಯುವುದು ನಮ್ಮ ಕರ್ತವ್ಯ. ಕಳೆದ ಬೇಸಿಗೆ ಬೆಳೆಗೆ ಜಲಾಶಯದಲ್ಲಿ 29 ಟಿಎಂಸಿ ಅಡಿ ನೀರು ಇದ್ದಿದ್ದರಿಂದ ತಾವು ಹೋರಾಟ ಮಾಡಿದ್ದು, ಈ ಬಾರಿ ಕೇವಲ 8 ರಿಂದ 10 ಟಿಎಂಸಿ ಅಡಿ ಮಾತ್ರ ನೀರು ಉಳಿಯಲಿದ್ದು, ಐಸಿಸಿ ಸಭೆಯಲ್ಲಿ ಎಲ್ಲರ ಸಲಹೆ ಪಡೆದು ನೀರು ಸಹ ಪೋಲಾಗದಂತೆ ನಿರ್ಧಾರ ಕೈಗೊಳ್ಳಲಾಗುವುದು.
 ವೆಂಕಟರಾವ್‌ ನಾಡಗೌಡ ಜಿಲ್ಲಾ ಉಸ್ತುವಾರಿ ಸಚಿವರು, ಐಸಿಸಿ ಸಭೆ ಅಧ್ಯಕ್ಷರು  

Advertisement

Udayavani is now on Telegram. Click here to join our channel and stay updated with the latest news.

Next