ಮೈಸೂರು/ಮಂಡ್ಯ: ತಮಿಳುನಾಡಿಗೆ ಐದು ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶಗಳಾದ ಮೈಸೂರು, ಮಂಡ್ಯ, ರಾಮನಗರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರೈತ ಸಂಘಟನೆ, ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ರೈತರು ಹೆದ್ದಾರಿ ತಡೆದು, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಾವೇರಿ ನೀರು ನಿಯಂತ್ರಣ ಸಮಿತಿ ತೀರ್ಮಾನ ವಿರೋಧಿಸಿ ಮೈಸೂರಿನಲ್ಲಿ ಮಂಗಳವಾರ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯಿತು. ಕಾಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ರೈತ ಹೋರಾಟಗಾರರು, ತಮಿಳುನಾಡಿಗೆ ನೀರು ಹರಿಸದಿರುವ ತೀರ್ಮಾನ ಕೈಗೊಂಡು ಕಾನೂನು ಹೋರಾಟಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು, ಹೆದ್ದಾರಿ ತಡೆ ಮೂಲಕ ಪ್ರತಿಭಟನೆ ನಡೆಸಿದರು. ಪಟ್ಟಣದ ಕುವೆಂಪು ವೃತ್ತದ ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರೊಂದಿಗೆ ಕೈ ಜೋಡಿಸಿದ ವಿವಿಧ ಕನ್ನಡ ಪರ, ಪ್ರಗತಿಪರ ಸಂಘಟನೆಗಳ ಮುಖಂಡರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ತಮಿಳುನಾಡಿಗೆ ನೀರು ಬಿಡದಂತೆ ಸರಕಾರವನ್ನು ಒತ್ತಾಯಿಸಿದರು. ಅರ್ಧ ಗಂಟೆಗೂ ಅಧಿಕ ಸಮಯ ಹೆದ್ದಾರಿ ತಡೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಕೆಆರ್‌ಎಸ್ ಜಲಾಶಯದ ಬಳಿ ನೂರಾರು ರೈತರು ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು. ಮದ್ದೂರು ತಾ|ನ ಭಾರತೀನಗರದ ಹಲಗೂರು ವೃತ್ತದ ಬಳಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಮಳೆ ಬಂದಿದ್ದರೆ ನಾವು ಕೇಳುವ ಹಾಗೇ ಇಲ್ಲ. ಕಾವೇರಿ ನೀರು ಅದೇ ಹರಿದು ಹೋಗುತ್ತದೆ. ಮಳೆ ಇಲ್ಲದ ಸಂದರ್ಭದಲ್ಲಿ ನೀರು ಬಿಡೋಕಾಗಲ್ಲ ಎಂದು ಮಾನಿಟರಿಂಗ್ ಕಮಿಟಿಗೆ ಹೇಳಬೇಕಾಗುತ್ತದೆ. ಈ ಮಾನಿಟರಿಂಗ್ ಕಮಿಟಿ ಮಾಡಿದ್ಯಾರು? ಕೋರ್ಟ್ ಆದೇಶದ ಮೇಲೆ ಕೇಂದ್ರ ಸರಕಾರ ಮಾನಿಟರಿಂಗ್ ಕಮಿಟಿ ಮಾಡಿದೆ. ಏನು ಮಾಡೋದು?
– ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ
ನಮ್ಮ ವಕೀಲರು ಪ್ರಬಲ ವಾದ ಮಂಡಿಸಿದ್ದಾರೆ. ತಮಿಳುನಾಡಿನವರು 24 ಸಾವಿರ ಕ್ಯುಸೆಕ್ ನೀರು ಕೇಳಿದ್ದರು. ಅದನ್ನು ನಮ್ಮ ವಕೀಲರು ಐದು ಸಾವಿರಕ್ಕೆ ಇಳಿಸಿದ್ದಾರೆ. ನಾವು ರೈತರ ಹಿತ ಕಾಪಾಡಬೇಕಿದೆ. ಕಾನೂನನ್ನೂ ಗೌರವಿಸಬೇಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ಬೈಸಿಕೊಳ್ಳಲು ನಮಗೆ ಇಷ್ಟವಿಲ್ಲ, ನಿಮಗೆ ಇಷ್ಟ ಇದೆಯಾ?
-ಡಿ.ಕೆ. ಶಿವಕುಮಾರ್, ಡಿಸಿಎಂ