Advertisement

ಏಕಾಏಕಿ ಉಪ ಕಾಲುವೆಗಳಿಗೆ ನೀರು; ರಸ್ತೆ-ಮನೆಗಳು ಜಲಾವೃತ

12:34 PM Jul 30, 2018 | Team Udayavani |

ಸಿರವಾರ: ತುಂಗಭದ್ರಾ ಎಡದಂಡೆ ನಾಲೆಯ 91ನೇ ಉಪ ಕಾಲುವೆಗಳಿಗೆ ರವಿವಾರ ಏಕಾಏಕಿ ನೀರು ಬಿಟ್ಟಿದ್ದರಿಂದ ಮತ್ತು ಕಾಲುವೆಯಲ್ಲಿ ಕಸ ಮತ್ತು ಹೂಳು ತುಂಬಿದ್ದರಿಂದ ಪಟ್ಟಣದ ಮುಖ್ಯ ರಸ್ತೆ ಪಕ್ಕದ ಮನೆಗಳಿಗೆ ನೀರು ನುಗ್ಗಿ, ರಸ್ತೆಗಳು ಜಲಾವೃತವಾಗಿ ನಿವಾಸಿಗಳು ಪರದಾಡುವಂತಾಯಿತು.

Advertisement

91ನೇ ವಿತರಣಾ ಉಪಕಾಲುವೆಗಳ ಪಕ್ಕದಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳ ಆದೇಶದ ಮೇರೆಗೆ ವಿತರಣಾ ಕಾಲುವೆಗಳಿಗೆ ರವಿವಾರ ನೀರು ಬಿಡಲಾಗಿತ್ತು. ಪಟ್ಟಣದಲ್ಲಿ ಹಾದು ಹೋಗುವ ಉಪ ಕಾಲುವೆಯಲ್ಲಿ ಹೂಳು ತುಂಬಿದ್ದರಿಂದ ಮತ್ತು ಕಾಲುವೆಗಳಲ್ಲಿ ಬೆಳೆದ ಮುಳ್ಳಿನ ಗಿಡ, ಕಸಕಡ್ಡಿಗಳನ್ನು ತೆರವು ಮಾಡದ ಕಾರಣ ನೀರು ಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿ ಮುಖ್ಯರಸ್ತೆ ಮತ್ತು ಮನೆಗಳು ಸಂಪೂರ್ಣ ಜಲಾವೃತಗೊಂಡು ಎರಡು ಗಂಟೆಗೂ ಅಧಿಕ ಕಾಲ ಜನರು ಪರದಾಡುವಂತಾಯಿತು.

ನಂತರ ಸಾರ್ವಜನಿಕರೇ ಮುಂದೆ ನಿಂತು ನಾಲೆಯ ಪೈಪ್‌ನಲ್ಲಿ ತುಂಬಿದ್ದ ಕಸ ಮತ್ತು ಹೂಳನ್ನು ತೆಗೆದ ನಂತರ ನೀರಿನ ಪ್ರಮಾಣ ಕಡಿಮೆಯಾಯಿತು. ಇಷ್ಟಾದರೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ಜನರ ಆಕ್ರೋಶಕ್ಕೆ ಕಾರಣವಾಯಿತು.

ಕಾರ್ಮಿಕರ ಧರಣಿ: ತುಂಗಭದ್ರಾ ಎಡದಂಡೆ ನಾಲೆಯ ಹಂಗಾಮಿ ಕಾರ್ಮಿಕರು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ. ಅದಕ್ಕಾಗಿ ಕಾಲುವೆಗಳ ಕಾರ್ಯದಲ್ಲಿ ಯಾವೊಬ್ಬ ಕಾರ್ಮಿಕರಿಲ್ಲದಿರುವುದರಿಂದ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next