ಬಾಗಲಕೋಟೆ: ಮುಧೋಳ ನಗರಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆಗಾಗಿ ಕೃಷ್ಣಾ ನದಿಯಿಂದ ಮುಧೋಳಕ್ಕೆ ನೀರು ಪೂರೈಸುವ ಹೊಸ ಯೋಜನೆ ರೂಪಿಸಲಾಗುತ್ತಿದ್ದು, ತಾಂತ್ರಿಕ ಸಮಿತಿ ಪರಿಶೀಲನೆಯಲ್ಲಿದೆ. ಶೀಘ್ರವೇ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಧೋಳ ನಗರಕ್ಕೆ ಸಧ್ಯ ಕುಡಿಯುವ ನೀರಿನ ಸಮಸ್ಯೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೃಷ್ಣಾ ನದಿಯಿಂದ ನೀರು ಪೂರೈಕೆಗೆ ಡಿಪಿಆರ್ ಸಿದ್ಧಪಡಿಸಿದ್ದು, ಇದು ತಾಂತ್ರಿಕ ಇಲಾಖೆಯ ಪರಿಶೀಲನೆಯಲ್ಲಿದೆ ಎಂದರು.
ಕ್ರೆಡಿಟ್ಗಾಗಿ ಪೈಪೋ: ಮುಧೋಳ ಕ್ಷೇತ್ರದಲ್ಲಿ ನಾವು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ, ಕೆಲವರು ಕ್ರೆಡಿಟ್ಗಾಗಿ ಕೆಲಸ ಮಾಡುತ್ತಿದ್ದಾರೆ. ಮುಧೋಳ ನಗರಕ್ಕೆ ಬೈಪಾಸ್ ರಸ್ತೆ ಅಗತ್ಯವಾಗಿದೆ. ನಗರದಲ್ಲಿ ವಾಹನದಟ್ಟಣೆಯಿಂದ ನೂರಾರು ಜನರು ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಗರಕ್ಕೆ ಬೈಪಾಸ್ ರಸ್ತೆ ನಿರ್ಮಿಸಲು 2018ರ ಆಗಸ್ಟ 31ರಂದು ರಾಜ್ಯ ಸರ್ಕಾರದಿಂದ 55 ಕೋಟಿ ಮಂಜೂರು ಮಾಡಿಸಲಾಗಿದೆ. ಆಗ ನಾನು ಅಬಕಾರಿ ಸಚಿವನಾಗಿದ್ದೆ. ಭೂಸ್ವಾಧೀನ ಒಳಗೊಂಡು ಒಟ್ಟು 55 ಕೋಟಿ ಈ ಬೈಪಾಸ್ ರಸ್ತೆಗೆ ಮಂಜೂರು ಮಾಡಿಸಿದ್ದು, 38.49 ಕೋಟಿ ಅನುದಾನದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಈಗ ಟೆಂಡರ್ ಕರೆಯಲಾಗಿದೆ. ಆದರೆ, ಮುಧೋಳ ಶಾಸಕರು, ಅನುದಾನ ಮಂಜೂರಾಗದೇ 2009ರಲ್ಲೇ ಭೂಮಿಪೂಜೆ ಮಾಡಿದ್ದರು. ಈಗ ಅವರೇ ಬೈಪಾಸ್ ರಸ್ತೆಗೆ ಅನುದಾನ ಮಂಜೂರು ಮಾಡಿಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಇಂತಹ ಆಧಾರಹಿತ ಪ್ರಚಾರ ಪಡೆಯುವುದನ್ನು ಬಿಡಬೇಕು. ಕ್ಷೇತ್ರ ಜನರು ಸತ್ಯ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಮತ್ತೂಂದು ಬೈಪಾಸ್ ರಸ್ತೆಗೆ 6 ಕೋಟಿ: ಮುಧೋಳದಲ್ಲಿ ಹಾದು ಹೋಗಿರುವ ಔರಾದ-ಸದಾಶಿವಗಡ ರಾಜ್ಯ ಹೆದ್ದಾರಿ 34ರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಂಡಿವಡ್ಡರ ಪೆಟ್ರೊಲ್ ಪಂಪ್ ವರೆಗೆ, ಮಲ್ಲಮ್ಮನಗರ ಕ್ರಾಸ್‌ದಿಂದ ಯಾದವಾಡ ಕ್ರಾಸ್ ವರೆಗೆ ರಸ್ತೆ ನವೀಕರಣಕ್ಕೆ 4.45 ಕೋಟಿ ಅನುದಾನ ಮಂಜೂರಾಗಿದೆ. ಇದಕ್ಕಾಗಿ ಟೆಂಡರ್ ಕೂಡ ಕರೆಯಲಾಗಿದೆ. ನಗರಕ್ಕೆ ಮತ್ತೂಂದು ಬೈಪಾಸ್ ರಸ್ತೆ ನಿರ್ಮಾಣಕ್ಕೆ 6 ಕೋಟಿ ಅನುದಾನಕ್ಕೆ ಮಂಜೂರಾತಿ ದೊರೆತಿದೆ. ಎನ್‌ಸಿಪಿ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 2 ಕೋಟಿ, ಟಿಎಸ್‌ಪಿ ಯೋಜನೆಯಡಿ 1 ಕೋಟಿ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿವೆ ಎಂದರು.
ಕ್ಷೇತ್ರದ ಪ್ರವಾಸಿ ತಾಣಗಳಾದ ಮಂಟೂರ, ಒಂಟಗೋಡಿ, ಇಂಗಳಗಿ, ಶಿರೋಳ, ಯಡಹಳ್ಳಿ ಹಾಗೂ ಉತ್ತೂರ ಗ್ರಾಮಗಳಲ್ಲಿ ಯಾತ್ರಿ ನಿವಾಸ ನಿರ್ಮಿಸಲು ತಲಾ 25 ಲಕ್ಷ ಸೇರಿ ಒಟ್ಟು 1.50 ಕೋಟಿ ಬಿಗುಡೆಯಾಗಿದೆ. ಅಲ್ಲದೇ ಮಾಚಕನೂರ, ವಜ್ಜರಮಟ್ಟಿ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ತಲಾ 25 ಲಕ್ಷ, ವಿವಿಧ ಗ್ರಾಮೀಣ ರಸ್ತೆಗಳ ಕಾಮಗಾರಿ 5 ಕೋಟಿ, ಮುಧೋಳ ಮತಕ್ಷೇತ್ರದ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಈ ಎಲ್ಲ ಕಾಮಗಾರಿಗಳು ಕೈಗೊಂಡಿದ್ದು, ಶಾಸಕರು ಮಾತ್ರ, ಇವು ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಚಿಚಖಂಡಿ ಬ್ಯಾರೇಜ್ ಅನುದಾನ ಬಂದಿದೆಯೆ?: ಕ್ಷೇತ್ರದ ಚಿಚಖಂಡಿ ಬಳಿ ಘಟಪ್ರಭಾ ನದಿಗೆ ಬ್ಯಾರೇಜ್ ನಿರ್ಮಿಸಲು 9 ಕೋಟಿ ಅನುದಾನಕ್ಕೆ ಸಣ್ಣ ನೀರಾವರಿ ಇಲಾಖೆ ಅನುಮೋದನೆ ನೀಡಿದೆ ಎಂದು ನಿನ್ನೆಯಷ್ಟೇ ಮಾಧ್ಯಮಗಳಿಗೆ ಕಾರಜೋಳರು ಹೇಳಿಕೆ ನೀಡಿದ್ದಾರೆ. ಈ ಹಿಂದೆಯೇ ಚಿಚಖಂಡಿ ಬಳಿ ಬ್ಯಾರೇಜ್ ನಿರ್ಮಿಸಲು, ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನು ಕರೆದುಕೊಂಡು ಭೂಮಿಪೂಜೆ ಮಾಡಿದ್ದಾರೆ. ಈಗ ಮತ್ತೆ ಅನುದಾನ ಎಲ್ಲಿಂದ ಬಂತು, ಹಿಂದೆ ಭೂಮಿಪೂಜೆ ಮಾಡಿದ ಬ್ಯಾರೇಜ್ ಕಾಮಗಾರಿ ಎಲ್ಲಿಗೆ ಬಂತು ಎಂಬುದು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.
ಮುಧೋಳದಲ್ಲಿ ಕ್ರೀಡಾ ಇಲಾಖೆಯಿಂದ ಈಜುಕೊಳ ಮತ್ತು ಇತರೆ ಕಾಮಗಾರಿ ಕೈಗೊಳ್ಳಲು 3 ಕೋಟಿ ಅನುದಾನ ಮಂಜೂರಾಗಿದೆ. ನಾನು ಅಬಕಾರಿ ಸಚಿವನಾಗಿದ್ದಾಗ ಮುಧೋಳದ ನಾಗರಿಕ ಹಿತರಕ್ಷಣಾ ಸಮಿತಿಯವರು ಹೋರಾಟ ನಡೆಸಿ, ಹಲವು ಬೇಡಿಕೆ ಇಟ್ಟಿದ್ದರು. ಎರಡು ಬೇಡಿಕೆ ಹೊರತುಪಡಿಸಿ, ಉಳಿದೆಲ್ಲ ಬೇಡಿಕೆ ಈಡೇರಿಸಲಾಗಿದೆ. ಆದರೆ, ಶಾಸಕ ಕಾರಜೋಳರು, ನಾನು ಮಾಡಿದ ಕೆಲಸಗಳನ್ನು ತಾವು ಮಾಡಿದ್ದಾಗಿ ಸುಳ್ಳು ಹೇಳಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ ತಿಮ್ಮಾಪುರ, ಪ್ರಮುಖರಾದ ಉದಯ ಪಡತಾರೆ, ಗೋವಿಂದಪ್ಪ ಕವಲಗಿ, ಸತ್ಯಪ್ಪ ತೇಲಿ ಮುಂತಾದವರು ಉಪಸ್ಥಿತರಿದ್ದರು.