Advertisement

ಕೃಷ್ಣೆಗೆ ನೀರು: ಜನರ ಮೊಗದಲ್ಲಿ ಮಂದಹಾಸ

12:27 PM Jun 29, 2019 | Team Udayavani |

ತೇರದಾಳ: ಕಳೆದ ಮೂರು ತಿಂಗಳಿಂದ ಬತ್ತಿ ಬರಿದಾಗಿ ಹೋಗಿದ್ದ ಕೃಷ್ಣಾ ನದಿಯಲ್ಲಿ ಈಗ ನೀರು ಬಂದಿದೆ. ಇದರಿಂದ ರೈತರು ಸೇರಿದಂತೆ ಜನತೆಯ ಮೊಗದಲ್ಲಿ ಮಂದಹಾಸ ಮೂಡಿದೆ.

Advertisement

ನದಿಯಲ್ಲಿ ನೀರು ಬರುತ್ತಿದ್ದಂತೆ ರೈತರ ಪಂಪಸೆಟ್‌ಗಳು ನದಿ ತೀರದಲ್ಲಿ ಅಬ್ಬರಿಸಲು ಪ್ರಾರಂಭಿಸಿವೆ. ಮಳೆಯೂ ಇಲ್ಲ. ಬಾವಿ-ಕೊಳವೆ ಬಾವಿಗಳಿಗೂ ನೀರಿಲ್ಲ. ಇದರಿಂದ ಹಾಳಾಗಿ ಹೋಗುತ್ತಿರುವ ಬಿತ್ತನೆ ಮಾಡಿದ ಬೆಳೆಗಳಿಗೆ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ರೈತರು ನದಿಯಲ್ಲಿ ನೀರು ಬರುತ್ತಿದ್ದಂತೆ ಪಂಪ್‌ಸೆಟ್‌ಗಳನ್ನು ಮತ್ತೆ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ಕೃಷ್ಣಾ ನದಿಯ ನೀರನ್ನೇ ಪುರಸಭೆಯವರು ನಗರದಲ್ಲಿ ಪೂರೈಕೆ ಮಾಡುತ್ತಾರೆ. ಆದರೆ ನದಿಯಲ್ಲಿ ನೀರು ಖಾಲಿ ಆದಾಗಿನಿಂದ ನಲ್ಲಿಯು ಒಂದು ಹನಿ ನೀರನ್ನು ಕಂಡಿಲ್ಲ. ನದಿಯಲ್ಲಿ ನೀರು ಬಂದಿದೆ ಎಂದು ಗೊತ್ತಾಗುತ್ತಿದ್ದಂತೆ ಸಾರ್ವಜನಿಕರು ನೀರಿಗಾಗಿ ಕಾಯುತ್ತ ಕುಳಿತಿದ್ದಾರೆ. ಆದರೆ ಪುರಸಭೆಯವರು ಮಾತ್ರ ಇನ್ನು ನೀರು ಪೂರೈಕೆ ಪ್ರಾರಂಭಗೊಳಿಸಿಲ್ಲ. ಬೇಗನೆ ಮೋಟಾರ್‌ ಅಳವಡಿಸಿ ನೀರು ಪೂರೈಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ 3ತಿಂಗಳಿಂದ ನಲ್ಲಿ ನೀರು ಸ್ಥಗಿತಗೊಂಡಿದೆ. ಪರ್ಯಾಯ ವ್ಯವಸ್ಥೆ ಇಲ್ಲದ್ದರಿಂದ ದುಬಾರಿ ಹಣ ತೆತ್ತು ಟ್ಯಾಂಕರ್‌ ಮೂಲಕ ನೀರು ಹಾಕಿಸಿಕೊಳ್ಳಲಾಗಿದೆ. ಪುರಸಭೆಗೆ ನಳದ ಬಿಲ್ಲು ತುಂಬಿಯೂ 10-12ಸಾವಿರ ಖರ್ಚು ಮಾಡಿ ನೀರು ಹಾಕಿಸಿಕೊಂಡಿದ್ದೇವೆ. ಈಗ ನದಿಗೆ ನೀರು ಬಂದಿದೆ. ನದಿಗೆ ನೀರು ಬರುತ್ತಿರುವ ಸುದ್ದಿ ಕಳೆದ 4-6ದಿನಗಳಿಂದ ಬಂದಿದೆ. ಆದರೆ ಪುರಸಭೆ ಅಧಿಕಾರಿಗಳು ಕೂಡಲೇ ನೀರು ಪೂರೈಕೆ ಪ್ರಾರಂಭಿಸಲು ಮುಂಚಿತವಾಗಿಯೇ ಮೋಟಾರ್‌ದ ಸ್ಥಿತಿಗತಿ ನೋಡಿಲ್ಲ. ನದಿಗೆ ನೀರು ಬಂದಿದ್ದರೂ ಸಹ ಇಂದು ನಾವು ಟ್ಯಾಂಕರ್‌ ಮೂಲಕ ನೀರು ಹಾಕಿಸಿಕೊಳ್ಳುವ ಸ್ಥಿತಿ ಬಂದಿದೆ. ಇನ್ನಾದರು ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಕಾಲೋನಿ ಸೇರಿದಂತೆ ಎಲ್ಲೆಡೆ ನೀರು ಪೂರೈಕೆಗೆ ಮುಂದಾಗಲಿ ಎಂದು ಶಿಕ್ಷಕ ಕಾಲೋನಿಯ ಆರ್‌.ಟಿ. ನಡುವಿನಮನಿ, ಎಂ. ಸಿ. ಕುಂಚಗನೂರ, ಎಸ್‌.ಆರ್‌. ರಾವಳ. ಎಂ.ಡಿ. ಓಗಿ, ಕೆ.ಐ. ಪತ್ತಾರ ಮುಂತಾದವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next