ಮೈಸೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯ ಭರ್ತಿಯಾದರೆ ವ್ಯವಸಾಯಕ್ಕೆ ನೀರು ಕೊಡುತ್ತೇವೆಂದು ಮಂಡ್ಯದಲ್ಲಿ ಹೇಳಿದ್ದೆ. ಕೆಆರ್‌ಎಸ್ ನಲ್ಲಿ 104 ಅಡಿ ನೀರು ಇರುವ ಕಾರಣ 15 ದಿನ ಕಾಲ ಕಟ್ಟು ಪದ್ಧತಿಯಲ್ಲಿ ನೀರು ಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಇಷ್ಟ ಬಂದ ಬೆಳೆ ತೆಗೆಯಲಿ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದೆ. ಬಿಜೆಪಿ ಆರೋಪದಲ್ಲಿ ಹುರುಳಿಲ್ಲ ಎಂದರು.
ಜೆಡಿಎಸ್ ಜತೆಗೆ ಸಮಾಲೋಚನೆ: ಬಿಬಿಎಂಪಿ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಜೆಡಿಎಸ್ ರಾಜಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೇಳಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ನಾನು ಯಾರ ಜತೆಯೂ ಮಾತನಾಡಿಲ್ಲ. ಯಾರೂ ನಮ್ಮೊಂದಿಗೆ ಮಾತುಕತೆಗೆ ಬಂದಿಲ್ಲ. ಜೆಡಿಎಸ್ ನಾಯಕರೊಂದಿಗೆ ಸಮಾಲೋಚನೆ ಮಾಡುತ್ತೇವೆಂದು ಹೇಳಿದರು.
ವೇತನ ಹೆಚ್ಚಳಕ್ಕೆ ಕ್ರಮ: ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ 6ನೇ ವೇತನ ಆಯೋಗ ವರದಿ ಸಲ್ಲಿಸಿದ ನಂತರ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕೇಂದ್ರ ಸರ್ಕಾರ 10 ವರ್ಷಗಳಿಗೆ ಒಮ್ಮೆ ವೇತನ ಆಯೋಗ ರಚಿಸುತ್ತದೆ. ಆದರೆ, ರಾಜ್ಯ ಸರ್ಕಾರ 5-6 ವರ್ಷಗಳಿಗೆ ಒಮ್ಮೆ ವೇತನ ಆಯೋಗ ರಚಿಸುತ್ತಿದೆ.
ಹೀಗಿರುವಾಗ ವಿಳಂಬ ಆಗಿಲ್ಲ ಎಂದರು. ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಆರನೇ ವೇತನ ಆಯೋಗ ರಚಿಸಿದ್ದೇವೆ. ಆ ಸಮಿತಿ ಸರ್ಕಾರಕ್ಕೆ ವರದಿ ಕೊಡಬೇಕು. ಅದನ್ನು ಬಿಟ್ಟು ಸರ್ಕಾರವೇ ವರದಿ ಕೊಡಿ ಎಂದು ಸಮಿತಿಯನ್ನು ಕೇಳಲಾಗುತ್ತಾ ಎಂದು ಕೋಪಗೊಂಡರು.
“ಹಿಂದುತ್ವದ ಭಾಷಣವಾದ್ರೆ ಕೇಳ್ಬೇಡಿ’: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮಶತಾಬ್ದಿ ಹಾಗೂ ಸ್ವಾಮಿ ವಿವೇಕಾನಂದರ ಶಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗಿಯಾಗಿದ್ದ 125ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕಡ್ಡಾಯ ವೀಕ್ಷಣೆಗೆ ಯುಜಿಸಿ ಆದೇಶ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ದೀನ್‌ದಯಾಳ್ ಉಪಾಧ್ಯಾಯರ ಬಗ್ಗೆ ಭಾಷಣವಾದರೆ ಅದು ಹಿಂದುತ್ವದ ಭಾಷಣವೇ ಆಗಿರುತ್ತದೆ. ಮೋದಿ ಅವರ ಭಾಷಣ ಹಿಂದುತ್ವವಾದರೆ ಕೇಳುವ ಅಗತ್ಯವಿಲ್ಲ. ಮಾಧ್ಯಮಗಳ ಮೂಲಕ ನನಗೆ ಈ ವಿಚಾರ ತಿಳಿದಿದೆ. ಸಂಪೂರ್ಣ ಮಾಹಿತಿ ಪಡೆದು ವಿಶ್ವವಿದ್ಯಾಲಯಗಳ ಜತೆಗೆ ಮಾತನಾಡುತ್ತೇನೆ ಎಂದು ತಿಳಿಸಿದರು. ಸಂಸದ ಆರ್.ಧ್ರುವನಾರಾಯಣ್, ಶಾಸಕ ಎಂ.ಕೆ. ಸೋಮಶೇಖರ್, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಮು ಇತರರು ಇದ್ದರು.