Advertisement

ಪ್ರತಿ ಕುಟುಂಬಕ್ಕೂ ನಲ್ಲಿ ನೀರು: ಅಂಗಡಿ

11:16 AM Sep 15, 2019 | Suhan S |

ಸವದತ್ತಿ: ಹಳ್ಳಿಗಳ ರಾಷ್ಟ್ರ ಭಾರತದಲ್ಲಿರುವ ಪ್ರತಿ ಕುಟುಂಬಗಳಿಗೆ ನೀರಿನ ಕೊರತೆಯಾಗದಂತೆ ನಳಗಳ ಮೂಲಕ ನೀರಿನ ಪೂರೈಕೆ ಮಾಡುವ ಜವಾಬ್ದಾರಿ ಕೇಂದ್ರ ಸರಕಾರದ್ದು ಎಂದು ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ದಿನವೇ ಘೋಷಣೆ ಮಾಡಿದ್ದಾರೆ ಎಂದು ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ತಿಳಿಸಿದರು.

Advertisement

ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಹಾಗೂ ಸವದತ್ತಿ ತಾಲೂಕು ಆತಳಿತದಿಂದ ಶನಿವಾರ ನಡೆದ ಜಲಶಕ್ತಿ ಮೇಳ ಮತ್ತು ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರಕಾರ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ. ಸದ್ಯದ ಜನರಿಗೆ ಅಷ್ಟೇ ಅಲ್ಲದೇ ಮುಂದಿನ ಪೀಳಿಗೆಗೂ ಸಹ ಕುಡಿಯುವ ನೀರನ್ನು ಒದಗಿಸುವ ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ. ಮಳೆಯಿಂದ ಪ್ರವಾಹಕ್ಕೆ ರಾಜ್ಯದ ಸಾಕಷ್ಟು ಜನ ಬೀದಿಗೆ ಬಿದ್ದಿದ್ದಾರೆ. ಅನುದಾನ ನೀಡಿ ಎಂದು ಪ್ರಧಾನಿ ಮೋದಿ ಅವರಿಗೆ ಸಿಎಂ ಯಡಿಯೂರಪ್ಪ, ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ನಾನು ಸಹಿತ ಕೋರಿದೆವು. ಮೋದಿ ಅವರು ‘ಮಳೆ ಆದರೆ ಕೆಟ್ಟಲ್ಲ, ಮಗ ಉಂಡರೆ ತಪ್ಪಿಲ್ಲ’ ಎಂಬ ಗ್ರಾಮೀಣ ಮಾತನ್ನು ನೆನೆಪಿಸಿಕೊಟ್ಟರು ಎಂದರು.

ಶಾಸಕ ಆನಂದ ಮಾಮನಿ ಮಾತನಾಡಿ, ಜೀವ ಜಲ ಬಹಳ ಮುಖ್ಯ. ಸಕಾಲಕ್ಕೆ ಮಳೆ ಬೇಕೆಂದಲ್ಲಿ ಮೊದಲು ಅರಣ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ರಸ್ತೆ ಅಗಲೀಕರಣದಲ್ಲಿಯೂ ಕೂಡ ಗಿಡಗಳನ್ನ ರಕ್ಷಿಸಬೇಕು. ಮಳೆಗಾಲದಲ್ಲಿ ಅರಣ್ಯ ಇಲಾಖೆ ಸಸಿ ನೆಡಲು ಮುಂದಾಗಬೇಕು. ನೀರು ಸಂರಕ್ಷಣೆಗಾಗಿ ಕೇಂದ್ರ ಸಾಕಷ್ಟು ಯೋಜನೆ ನೀಡಿದೆ. ನೆಲ, ಜಲ, ಭಾಷೆ ಬಂದಲ್ಲಿ ಎಲ್ಲರೂ ಒಂದಾಗಿರಬೇಕು. ರೈತರೆಲ್ಲ ಒಂದೇ ತೆರನಾದ ಬೆಳೆ ಬೆಳೆಯುವ ಬದಲು ವಿವಿಧ ತರಹದ ಹಿಂಗಾರಿ, ಮುಂಗಾರಿ ಬೆಳೆದು ಮಣ್ಣಿನ ಫಲವತ್ತತೆ ಕಾಪಾಡುವ ಅವಶ್ಯವಿದೆ ಎಂದರು.

ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತನ ಬೆನ್ನಿಗೆ ನಿಂತಿವೆ. ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಶೂನ್ಯ ಬಡ್ಡಿ ದರದಲ್ಲಿ ಸುಮಾರು 210 ಕೋಟಿ ಸಾಲ ನೀಡಲಾಗಿದೆ. ಕಳಸಾ-ಬಂಡೂರಿ, ಮಹದಾಯಿ ಕುರಿತು ಸಾಕಷ್ಟು ಹೋರಾಟಗಳು ನಡೆದಿವೆ. ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಸರಕಾರ ಇರುವುದರಿಂದ ಮುಂಬರುವ ದಿನಗಳಲ್ಲಿ ಕೇಂದ್ರಕ್ಕೆ ಮನವಿ ಮಾಡಿ, ಆದಷ್ಟು ಶೀಘ್ರದಲ್ಲಿ ಇತ್ಯರ್ಥ ಮಾಡಲಾಗುವುದೆಂದು ಶಾಸಕ ಮಾಮನಿ ಭರವಸೆ ನೀಡಿದರು. ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ಜಿಪಂ ಸದಸ್ಯ ಫಕ್ಕೀರಪ್ಪ ಹದ್ದನ್ನವರ, ಎಂ.ಎಸ್‌. ಹೀರೆಕುಂಬಿ, ಜಿ.ಎಸ್‌. ಗಂಗಲ, ಎಪಿಎಮ್ಸಿ ಅಧ್ಯಕ್ಷ ಜಗದೀಶ ಹನಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next