Advertisement

ಜೀವಿಗಳೇ ಟೇಕ್ ಕೇರ್: ಬೇಸಗೆ ಸಮಯದಲ್ಲಿ ಜೀವಗಳಿಗೆ ನೆರವಾಗೋಣ…

02:21 PM Apr 11, 2022 | Team Udayavani |

ಮತ್ತೆ ಬೇಸಿಗೆ ಬಂದಾಗಿದೆ. ಆ ಮೂಕಪ್ರಾಣಿಗಳ ವೇದನೆಯೂ ವಸಂತದ ಬೇಗೆಯೊಂದಿಗೆ ಶುರುವಾಗಿದೆ. ಖುಷಿಯ ವಿಚಾರವೆಂದರೆ, ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ಬೆರಳೆಣಿಕೆಯ ಸಹೃದಯರು ಈ ಮೂಕಜೀವಿಗಳ ಬಾಯಾರಿಕೆ ತಣಿಸುತ್ತಿದ್ದಾರೆ. ಇಂಥ ಮಾನವೀಯ ಸೇವೆ ಎಲ್ಲರಿಗೂ ಮಾದರಿಯಾದರೆ, ಅದೆಷ್ಟು ಚೆನ್ನ! ಬಾಯಾರಿದ ಇಂಥ ಜೀವಿಗಳಿಗೆ ನಾವು ಮಾಡಬಹುದಾದ ಅಳಿಲು ಸೇವೆಗಳೇನು?

Advertisement

ಅಬ್ಬಬ್ಬಾ! ಬಿಸಿಲು. ಅದೇನ್‌ ಬಾಯಾರಿಕೆ! “ನಂಗೊಂದ್‌ ಫ‌ಲೂದಾ… ಇವ್ರಿಗೊಂದ್‌ ಗಡ್‌ಬಡ್ಡು’ ಅಂತ ಹೋಟೆಲ್‌ಗ‌ಳಲ್ಲಿ; “ಅಮ್ಮಾ… ತಣ್ಣಗೆ ಒಂದ್‌ ಲೋಟ ಮಜ್ಜಿಗೆ ಕೊಡ್ತೀಯಾ?’ ಅಂತ ಮನೆಗಳಲ್ಲಿ, ಆರ್ಡರ್ರ್ರೋ ಆರ್ಡರು ! ಇದೆಲ್ಲ ಮನುಷ್ಯರ ಕಥೆ ಆಯ್ತು. ಆದರೆ, ಮಾತೇ ಬಾರದ ಪಕ್ಷಿಗಳು, ಪ್ರಾಣಿಗಳು ಈ ಬಿರುಬೇಸಿಗೆಯಲ್ಲಿ ಆರ್ಡರ್‌ ಮಾಡೋದಾದರೂ ಯಾರಿಗೆ? ಇದು ನಿಮ್ಮೊಬ್ಬರ ಪ್ರಶ್ನೆಯಲ್ಲ; ಬೆಂಗಳೂರಿನ ಸಮಸ್ತ ರೊಳಗಿನ ಯಕ್ಷಪ್ರಶ್ನೆ. ಮೂಕಜೀವಿಗಳಿಗೆ ಬೇಸಿಗೆ ಎನ್ನುವುದೇ ಮಹಾನ್‌ ಸಂಕಟ. ಈ ಕ್ರಾಂಕ್ರೀಟ್‌ ಕಾಡಿನಲ್ಲಿ ಗುಟುಕು ನೀರಿಲ್ಲದೆ ನಿತ್ಯ ಅದೆಷ್ಟೋ ಪಕ್ಷಿಗಳು ಜೀವ ಬಿಡುತ್ತಿವೆ. ಪ್ರಾಣಿಗಳು ನಿತ್ರಾಣ ಸ್ಥಿತಿಗೆ ತಲುಪಿ, ಜೀವಕಳೆಯೇ ಇಲ್ಲದಂತೆ ಮಲಗಿರುತ್ತವೆ. ಇಷ್ಟಾದರೂ, ಮಹಾನಗರದ ಯಾರೊಬ್ಬರಿಗೂ ಈ “ಪ್ರಾಣಿ’ಸಂಕಟ ಕಣ್ಣಿಗೇ ಬೀಳುವುದಿಲ್ಲ. ಮತ್ತೆ ಬೇಸಿಗೆ ಬಂದಾಗಿದೆ. ಆ ಮೂಕಪ್ರಾಣಿಗಳ ವೇದನೆಯೂ ವಸಂತದ ಬೇಗೆಯೊಂದಿಗೆ ಶುರುವಾಗಿದೆ. ಖುಷಿಯ ವಿಚಾರವೆಂದರೆ, ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ಬೆರಳೆಣಿಕೆಯ ಸಹೃದ ಯರು ಈ ಮೂಕಜೀವಿಗಳ ಬಾಯಾರಿಕೆ ತಣಿಸುತ್ತಿ ದ್ದಾರೆ. ಇಂಥ ಮಾನವೀಯ ಸೇವೆ ಎಲ್ಲರಿಗೂ ಮಾದರಿಯಾ ದರೆ, ಅದೆಷ್ಟು ಚೆನ್ನ! ಅಷ್ಟಕ್ಕೂ ಬೇಸಿಗೆಯಲ್ಲಿ ಈ ಜೀವಿಗಳ ಮೇಲೆ ನಾವು ತೋರಬೇಕಾದ ಕನಿಷ್ಠ ಪ್ರೀತಿ- ಕಾಳಜಿಗಳೇನು? ಸಿಟಿಜನರ ಕಣ್ತೆರೆಸುವ ಮಾಹಿತಿ ಇಲ್ಲಿದೆ…

ಸಮರ್ಪಣೆ ಭಾವಕ್ಕೆ  ಸಲ್ಯೂಟ್‌ : ಅದೊಂದು ಮನೆ. ತಾರಸಿಯಲ್ಲೊಂದು ದೊಡ್ಡ ಟ್ಯಾಂಕ್‌. ಗುಟುಕು ನೀರು ಕುಡಿಯಲು ಬಂದಿದ್ದ ಹದ್ದೊಂದು, ಆ ಟ್ಯಾಂಕ್‌ ಒಳಗೆ ಬಿದ್ದು ಜೀವಬಿಟ್ಟಿತು. ಹೃದಯ ಕಲಕುವ ಈ ಪ್ರಸಂಗ ಶಿವಕುಮಾರ್‌ ಅವರ ಕಣ್ತೆರೆಸಿತು. ಪಕ್ಷಿಗಳ ದಣಿವು ನಿವಾರಿಸುವ ಸಂಕಲ್ಪ ತೊಟ್ಟು, ಕಳೆದ 15 ವರ್ಷಗಳಿಂದ ನೀರಿನ ತಟ್ಟೆ ನೀಡಲು ಆರಂಭಿಸಿ ದರು. “ಸರ್ಮಪಣಾ’ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ ಅವರು, ಪಕ್ಷಿಗಳ ದಾಹ ನೀಗಿಸುವ ಕಾಯಕ ನಡೆಸುತ್ತಿದ್ದಾರೆ. ಪ್ರತಿ ವರ್ಷ ಫೆಬ್ರವರಿ ಯಿಂದ ಉಚಿತ ಮಣ್ಣಿನ ತಟ್ಟೆಗಳನ್ನು ನೀಡುತ್ತಾ ಬಂದಿದ್ದಾರೆ. ಕುಂಬಾರನ ಕೈಚಳಕದಿಂದ ರೂಪು ತಳೆದ ಶುದ್ಧ ಮಣ್ಣಿನ ತಟ್ಟೆಯನ್ನೇ ನೀಡು ವುದು ಈ ಸಂಸ್ಥೆಯ ಇನ್ನೊಂದು ಗುರಿ. ಪ್ರತಿವರ್ಷ 50 ಸಾವಿರ ಮಣ್ಣಿನ ತಟ್ಟೆಗಳ ನ್ನು ಸಂಸ್ಥೆ ನೀಡುತ್ತಿದೆ. ಈ ವರ್ಷ ಇದುವರೆಗೆ 10 ಸಾವಿರದವರೆಗೆ ತಟ್ಟೆ ನೀಡಿದೆ.

ಮೂಕ ಪ್ರಾಣಿಗಳ ಮಾತಾದ “ವಾಟರ್‌ ಫಾರ್‌ ವಾಯ್ಸ ಲೆಸ್‌’ : ಅದೊಂದು ಚಿಕ್ಕ ಆ್ಯಕ್ಸಿಡೆಂಟ್‌ ನಿಜ. ಆದರೆ, ಕೊಟ್ಟಿದ್ದು ದೊಡ್ಡ ಟರ್ನಿಂಗ್‌ ಪಾಯಿಂಟ್‌. ಒಂದು ನಾಯಿ ಮರಿ ಜೈನ್‌ ಸನ್ನಿ ಅವರ ಕಾರ್‌ಗೆ ಡಿಕ್ಕಿಯಾಗಿ ಜೀವಬಿಟ್ಟಿತು. ಅದನ್ನು ನೋಡಿ ಜೈನ್‌ ಸನ್ನಿ ಭಾರೀ ವ್ಯಥೆಪಟ್ಟರು. ಆರು ತಿಂಗಳಾದರೂ ಆ ನೋವು ಕರಗಲಿಲ್ಲ. ಕೊನೆಗೆ, ಮೂಕ ಪ್ರಾಣಿಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದು ನಿರ್ಧರಿಸಿ, “ವಾಟರ್‌ ಫಾರ್‌ ವಾಯ್ಸ ಲೆಸ್‌’ ಎಂಬ ಸರ್ಕಾರೇತರ ಸಂಸ್ಥೆ ಕಟ್ಟಿದರು. 2015ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಮೂಲಕ ಅವರೀಗ, ಪ್ರಾಣಿ- ಪಕ್ಷಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ. ಸನ್ನಿ ಅವರ ಈ ಕಾರ್ಯಕ್ಕೆ ತುಮಕೂರು, ಬೆಂಗಳೂರಿನ ಸಹೃದಯರಲ್ಲದೆ, ಸಿವಿಲ್‌ ಕೋರ್ಟ್‌ ನ್ಯಾಯಾಧೀಶರುಗಳೂ ಸಾಥ್‌ ನೀಡುತ್ತಿದ್ದಾರೆ. ಒಟ್ಟಾರೆ ದೇಶಾದ್ಯಂತ 37 ಸಾವಿರ ಉಚಿತ ನೀರಿನ ಬುಟ್ಟಿಗಳನ್ನು ಸಂಸ್ಥೆ ನೀಡಿದೆ.

Advertisement

ಬೆಂಗಳೂರಿನ ಜಯನಗರ, ಜೆ.ಪಿ. ನಗರ, ಬಸವನಗುಡಿ, ಬನಶಂಕರಿ ಮುಂತಾದ ಏರಿಯಾಗಳಲ್ಲಿ 100 ಸ್ವಯಂಸೇವಕರು 40 ಕೇಂದ್ರಗಳ ಮೂಲಕ ಮೂಕಜೀವಿಗಳ ಬಾಯಾರಿಕೆ ತಣಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಂಸ್ಥೆಯನ್ನು ಸಂಪರ್ಕಿಸುವವರಿಗೂ ಉಚಿತವಾಗಿ ಮಣ್ಣಿನ ಬುಟ್ಟಿ ನೀಡುತ್ತಿದ್ದಾರೆ. ಮೈಸೂರು, ಕೊಯಮತ್ತೂರು, ಹೈದರಾಬಾದ್‌, ಗೋವಾ, ಚೆನ್ನೈ ಸೇರಿದಂತೆ 15 ನಗರಗಳಿಗೆ ಸಂಸ್ಥೆಯ ಸೇವೆ ವಿಸ್ತಾರವಾಗಿದೆ. ಕಾಲೇಜುಗಳಿಗೆ ತೆರಳಿ ಮಾಹಿತಿ ನೀಡಿ, ಉಚಿತ ಬುಟ್ಟಿ ನೀಡಲಾಗುತ್ತಿದೆ.

ನೀರನ್ನು  ಇಡಲು ಮಣ್ಣಿನ ಪಾತ್ರೆ ಉತ್ತಮ : ಪ್ರಾಣಿ ಪಕ್ಷಿಗಳಿಗೆ ನೀರು ಇಡುವವರು ಮಣ್ಣಿನ ಪಾತ್ರೆ, ಬುಟ್ಟಿಗಳನ್ನೇ ಬಳಸಿ. ಸ್ಟೀಲ್‌ ಪಾತ್ರೆ, ಬುಟ್ಟಿಗಳು ಬಿಸಿಲಿನ ತಾಪಕ್ಕೆ ಬಿಸಿಯಾಗಿ ಪಕ್ಷಿಗಳ ಮೂತಿಯನ್ನು, ಅಂಗಾಂಗಗಳನ್ನು ಸುಡಬಹುದು. ಬಿಸಿ ಚುರುಕ್‌ ಎಂದಾಗ, ಪಕ್ಷಿ ಗಾಬರಿ ಬಿದ್ದು, ತಟ್ಟೆಯೊಳಗೆ ಮಗುಚಿ ಬೀಳುವ ಅಪಾಯವಿರುತ್ತದೆ. ಕೆಲವು ಪಕ್ಷಿಗಳು, ಪ್ರಾಣಿಗಳು ಮತ್ತೆ ನೀರು ಕುಡಿಯಲು ಬರದೇ ಇರುವ ಸಾಧ್ಯತೆಯೂ ಇರುತ್ತದೆ.

ಸಂಯುಕ್ತ ಅಳಿಲುಸೇವೆ : ಸ್ಯಾಂಡಲ್‌ವುಡ್‌ ನಟಿಯರ ಪೈಕಿ ಸದಾ ಮಾನವೀಯ ಕೆಲಸಗಳಿಂದ ಗಮನ ಸೆಳೆಯುವ ಕಲಾವಿದೆ, ಸಂಯುಕ್ತಾ ಹೊರನಾಡು. ತಮ್ಮ ಬಾಲ್ಯದ ದಿನಗಳಿಂದಲೂ ಪರಿಸರ ಕಾಳಜಿಯ ಜತೆಗೇ ಹೆಜ್ಜೆ ಹಾಕಿದವರು. ಮನೆಯ ಗಾರ್ಡನ್‌ ನಲ್ಲಿ ವರ್ಷವಿಡೀ ಪಕ್ಷಿಗಳಿಗಾಗಿ ನೀರನ್ನು ಉಣಿಸುವುದು ಇವರ ಇನ್ನೊಂದು ಪ್ರೀತಿಯ ಕಾಯಕ. ಶಾಲಾ ದಿನಗಳಿಂದಲೂ ಇದನ್ನು ತಪಸ್ಸಿನಂತೆ ನಡೆಸಿಕೊಂಡು ಬಂದಿದ್ದಾರೆ. ಅಲ್ಲದೆ, “ಕೇರ್‌ ಮೋರ್‌’ ಎಂಬ ಫೌಂಡೇಶನ್‌ ಮೂಲಕ ಪರಿಸರ ಪರ ಅನೇಕ ಕೆಲಸಗಳನ್ನು ಪ್ರಾರಂಭಿಸಿದ್ದಾರೆ. ಎಲ್ಲ ಜೀವಿಗಳೂ ದೇವರ ಸಮಾನ ಎಂದು ಭಾವಿಸಿ, ಮಾನವೀಯತೆ ಮೆರೆಯುತ್ತಿದ್ದಾರೆ.

ಜೋಕೆ! ಕಾರ್‌ ಒಳಗೆ ನಾಯಿ ಇದೆಯೇ? : ಕಾರಿನ ಒಳಗೆ ನಿಮ್ಮ ಸಾಕು ಪ್ರಾಣಿಗಳನ್ನು ಬಿಟ್ಟು, ಹೊರಗೆ ಹೋಗಬೇಡಿ. ಜೋಕೆ! ನೀವು ಮರಳುವಷ್ಟರಲ್ಲಿ ಅವುಗಳ ಜೀವವೇ ಆಪತ್ತಿಗೆ ಸಿಲುಕೀತು. ಸಾಮಾನ್ಯ ದಿನಗಳಲ್ಲಿ, ಪಾರ್ಕಿಂಗ್‌ ಮಾಡಿದ ಕಾರಿನಲ್ಲಿ ತಾಪಮಾನ ವೇಗವಾಗಿ 21ರಿಂದ 37 ಡಿಗ್ರಿವರೆಗೂ ಏರುವ ಸಾಧ್ಯತೆ ಇರುತ್ತದೆ. ಬೇಸಿಗೆಯ ದಿನಗಳಲ್ಲಿ ಕಾರೊಳಗೆ 41 ಡಿಗ್ರಿಯ ತನಕವೂ ಉಷ್ಣಾಂಶ ಏರಬಹುದು. ಈ ಅಧಿಕ ತಾಪದಿಂದಾಗಿ ಕೆಲವೇ ನಿಮಿಷಗಳಲ್ಲಿ ನಾಯಿಯ ಮೆದುಳು ನಿಷ್ಕ್ರಿಯಗೊಂಡು, ಸಾವನ್ನಪ್ಪುವ ಅಪಾಯವಿರುತ್ತದೆ.

ಬೀದಿ ಪ್ರಾಣಿಗಳ ದಾಹ ತಣಿಸುವ ನೀರಿನ ತೊಟ್ಟಿ : ಜೀವಗಳನ್ನು ಸಮಾನರಂತೆ ಕಾಣುವುದು ಮಾನವ ಕರ್ತವ್ಯ. ಈ ಚಿಂತನೆ ಯೊಂದಿಗೆ ಮೂಕ ಪ್ರಾಣಿಗಳಿಗೆ ನೆರವಾಗುತ್ತಿರುವ ರಶ್ಮಿ ಡಿಸೋಜಾ. ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಿಗಿಸಿ ಕೊಂಡಿರುವ ರಶ್ಮಿ ಬಡ ಮಕ್ಕಳಿಗಾಗಿ ಸ್ವಂತ ಶಾಲೆ ನಡೆಸುತ್ತಿದ್ದಾರೆ. ಬನಶಂಕರಿಯಲ್ಲಿರುವ ತಮ್ಮದೇ ಶಾಲೆಯ ಮುಂಭಾಗ ಒಂದುವರೆವರೆ ಅಡಿ ಅಗಲ, 2 ಅಡಿ ಎತ್ತರದ ನೀರಿನ ತೊಟ್ಟಿಯೊಂದನ್ನು ನಿರ್ಮಿಸಿ ನಿತ್ಯ ನೀರು ತುಂಬಿಸಿ ಬೀದಿ ನಾಯಿ, ಹಸುಗಳು, ಕೊಲೆಬಸವದಂಥ ಪ್ರಾಣಿಗಳ ದಾಹ ತಣಿಸುತ್ತಿದ್ದಾರೆ. ತಮ್ಮ ಮನೆಯಲ್ಲೇ 12 ಅನಾಥ ನಾಯಿ ಗಳಿಗೆ ಆಶ್ರಯ ನೀಡಿರುವ ಈಕೆ, ನಗರದಲ್ಲಿ ಹಸು,ನಾಯಿ, ಮೇಕೆ ಶುದ್ಧ ನೀರು ಪಡೆಯಬೇಕೆಂಬ ನಿಟ್ಟಿನಲ್ಲಿ, ಹೊಸಕೆರೆ ಹಳ್ಳಿ ಸೇರಿದಂತೆ ಅನೇಕ ಜಾಗಗಳಲ್ಲಿ ಸ್ವಂತ ಖರ್ಚಿನಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸುವ ಗುರಿ ಹೊಂದಿದ್ದಾರೆ.

ನೀವೇನು ಮಾಡಬಹುದು? :

  • ಬೇಸಿಗೆ ಸಮಯದಲ್ಲಿ ಪ್ರಾಣಿಗಳಿಗಾಗಿಯೇ ನಿಮ್ಮ ಮನೆಯ ಹೊರಾಂಗಣದಲ್ಲಿ ತಂಪಾದ ಶುದ್ಧ ನೀರನ್ನು ಪೂರೈಸಿ.
  • ಮನೆಯ ತಾರಸಿ, ಬಾಲ್ಕನಿ ಅಥವಾ ಕಿಟಕಿಯ ಚಾವಣಿ- ನೀರನ್ನು ಇಡಲು ಈ ಸ್ಥಳಗಳು ಯೋಗ್ಯ. ಪ್ರತಿನಿತ್ಯ ನೀರನ್ನು ಬದಲಿಸುವುದನ್ನು ಮರೆಯದಿರಿ.
  • ಕಾಯಕಜೀವಿಗಳಾದ ಕತ್ತೆ, ಕುದುರೆ, ಎತ್ತುಗಳಿಗೆ ಆಹಾರ, ನೀರಿನ ಅಗತ್ಯ ಜಾಸ್ತಿ. ಆದ್ದರಿಂದ ಇವುಗಳನ್ನು ಸಾಕುವವರು ಆಗಾಗ್ಗೆ ನೀರು, ಉತ್ತಮ ಆಹಾರ ನೀಡುವುದು ಒಳ್ಳೆಯದು.
  • ರಸ್ತೆಯಲ್ಲಿ ಪ್ರಾಣಿ- ಪಕ್ಷಿಗಳು ಗಾಯಗೊಂಡಿದ್ದರೆ, ಪ್ರಜ್ಞೆ ತಪ್ಪಿ ಬಿದ್ದಿದ್ದರೆ, ತಕ್ಷಣ ಅವುಗಳನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಿರಿ.
  • ಪಕ್ಷಿಗಳಿಗೆ, ಪ್ರಾಣಿಗಳಿಗೆ ಬಿಸಿಲು ಅಪಾಯಕಾರಿ. ತಾಪ ಹೆಚ್ಚಿದಂತೆ ಪಾರ್ಶ್ವವಾಯು ಸಂಭವಿಸಬಹುದು. ಇಂಥ ಜೀವಿಗಳ ಮೇಲೆ ತಣ್ಣಿರು ಎರಚಿ, ಒದ್ದೆ ಬಟ್ಟೆಯಿಂದ ಮೈ ಒರೆಸಿ. ತಕ್ಷಣ ವೈದ್ಯರ ಬಳಿ ಕರೆದೊಯ್ಯಿರಿ.
  • ಮನೆಯ ಸುತ್ತ ಗಿಡ ಮರಗಳನ್ನು ಬೆಳೆಸಿ. ಅವುಗಳ ನೆರಳು, ಶುದ್ಧ ಗಾಳಿ ಪ್ರಾಣಿಗಳಿಗೆ ನೆಮ್ಮದಿ ನೀಡುತ್ತದೆ.

 

 -ವಾಣಿ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next