Advertisement

ಬೆಂಗಳೂರಿಗೆ ನೀರು; ಹೋರಾಟಕ್ಕೆ ಸಜ್ಜು

12:41 PM Jun 23, 2018 | |

ಸಾಗರ: ತಾಲೂಕಿನ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಸರಬರಾಜು ಕುರಿತಾದ ಯೋಜನೆ ಕುರಿತು ಶಿವಮೊಗ್ಗ ಜಿಲ್ಲಾದ್ಯಂತ ಜನರ ಆಕ್ರೋಶ, ಅಸಮಾಧಾನ ತೀವ್ರಗೊಳ್ಳುತ್ತಿದ್ದು, ಈ ಯೋಜನೆಯನ್ನು ವಿರೋಧಿಸಿ ಶನಿವಾರ ಸಾಗರವಲ್ಲದೆ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಕಾರ್ಗಲ್‌, ಸೊರಬ, ಶಿಕಾರಿಪುರ ಹಾಗೂ ಶಿರಾಳಕೊಪ್ಪದಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಯಲಿದೆ.

Advertisement

ಸಾಗರದಲ್ಲಿ ಬೆಳಗ್ಗೆ 11 ಘಂಟೆಗೆ ಸಾಗರ ಉಪವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗುತ್ತಿದ್ದು, ಉಳಿದೆಡೆಯೂ ಅಲ್ಲಲ್ಲಿನ ಸರ್ಕಾರದ ಪ್ರಮುಖ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ.

ಜೂ.18ರಂದು ಬೆಂಗಳೂರು ಅಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ ಪರಮೇಶ್ವರ್‌ ಯೋಜನೆ ಬಗ್ಗೆ
ಸಂಪೂರ್ಣ ವರದಿ ನೀಡಲು ತಾಕೀತು ಮಾಡಿದ ಹಿನ್ನೆಲೆಯಲ್ಲಿ ಮಲೆನಾಡಿಗರಲ್ಲಿ ಅಸಮಾಧಾನ ಸೃಷ್ಟಿಯಾಗಿದೆ.

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ 426 ಕಿಮೀ ದೂರವಿದೆ. ಜಲಾಶಯ ಸಮುದ್ರಮಟ್ಟದಿಂದ
1800 ಅಡಿ ಎತ್ತರದಲ್ಲಿದ್ದು, ಬೆಂಗಳೂರು 2800 ಅಡಿ ಎತ್ತರದಲ್ಲಿದೆ. ನೀರು ಸರಬರಾಜಿಗೆ ಅತೀವ ಪ್ರಮಾಣದ
ಶಕ್ತಿ ಬೇಕಾಗುತ್ತದೆ. ಲಿಂಗನಮಕ್ಕಿ ಜಲಾಶಯವನ್ನು ನಿರ್ಮಿಸಿರುವುದು ವಿದ್ಯುತ್‌ ಪೂರೈಕೆಗಾಗಿಯೇ ಹೊರತು ಅನ್ಯ ಉದ್ದೇಶಕ್ಕೆ ಅಲ್ಲ. 156 ಟಿಎಂಸಿ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಶೇ. 25 ಹೂಳು ತುಂಬಿಕೊಂಡಿರುವುದರಿಂದ 40 ಟಿಎಂಸಿ ನೀರಿನ ಸಂಗ್ರಹದ ಕೊರತೆ ಎದುರಿಸುತ್ತಿದೆ.  

ಈಗಾಗಲೇ ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣದಿಂದಲೇ ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವಾಗ ಮುಂದಿನ ದಿನಗಳಲ್ಲಿ ಆಣೆಕಟ್ಟು ತುಂಬದಿರುವ ವರ್ಷಗಳೇ ಹೆಚ್ಚಿ ಯೋಜನೆಗೆ ಹಾಕುವ ಸಾವಿರಾರು ಕೋಟಿ ರೂ. ವ್ಯರ್ಥವಾಗುತ್ತದೆ. ಈ ನೀರು ಸಾಗಾಟಕ್ಕೆ ಪೈಪ್‌ಲೈನ್‌ ಕಾರಿಡಾರ್‌ನಿಂದ ಅಗಾಧ ಪ್ರಮಾಣದ ಕಾಡು ನಾಶವಾಗಿ ಮಲೆನಾಡು ಅಕ್ಷರಶಃ ಬರದ ಕರಾಳ ಛಾಯೆಗೆ ಸಿಲುಕಬಹುದು ಎಂದು ಈ ಭಾಗದ ಪರಿಸರವಾದಿಗಳು ಎಚ್ಚರಿಸಿದ್ದಾರೆ.

Advertisement

ಅವಿಭಜಿತ ದಕ್ಷಿಣ ಕನ್ನಡದ ಎತ್ತಿನ ಹೊಳೆ ಯೋಜನೆ ವಿಫಲವಾಗಿದೆ. ಇತ್ತ ಕಳೆದ ನಾಲ್ಕು ವರ್ಷಗಳಿಂದ
ಶಿವಮೊಗ್ಗ ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಅತಿ ಹೆಚ್ಚು ಮಳೆ ಬೀಳುವ ತೀರ್ಥಹಳ್ಳಿಯನ್ನೇ ಬರಪೀಡಿತ
ತಾಲೂಕು ಎಂದು ಘೋಷಣೆ ಮಾಡಲಾಗಿದೆ.

ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿಗಳಲ್ಲಿ ಅರಣ್ಯ ಪ್ರದೇಶ ಸಮೃದ್ಧವಾಗಿದ್ದ 40 ವರ್ಷಗಳ ಹಿಂದೆ 300 ಇಂಚು ಮಳೆಯಾಗುತ್ತಿತ್ತು. ಕಳೆದ ಐದು ವರ್ಷಗಳಲ್ಲಿ ಆದ ಸರಾಸರಿ ಮಳೆ ಬರೀ 40-50 ಇಂಚು. ನೀರಿನ ಕೊರತೆಯನ್ನು ಎದುರಿಸುತ್ತಿರುವ ಲಿಂಗನಮಕ್ಕಿ ಜಲಾಶಯದಿಂದ ನೀರು ಪೂರೈಕೆ ಯೋಜನೆ ವ್ಯರ್ಥ ಪ್ರಯತ್ನ ಎಂದು ಪರಿಸರವಾದಿ ಅಖೀಲೇಶ್‌ ಚಿಪ್ಳಿ ಪ್ರತಿಪಾದಿಸುತ್ತಾರೆ.

ಪ್ರತಿವರ್ಷ ಬೆಂಗಳೂರಿನಲ್ಲಿ 300 ಟಿಎಂಸಿ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗಿ ಉಪಯೋಗಕ್ಕೆ ಇಲ್ಲದಂತೆ ಆಗುತ್ತಿದೆ. ಇದರ ಶೇ. 10ರಷ್ಟು ನೀರನ್ನಾದರೂ ಬೆಂಗಳೂರಿನಲ್ಲೇ ಹಿಡಿದಿಟ್ಟುಕೊಳ್ಳುವ ಹಾಗು ಇಂಗಿಸುವ ಕೆಲಸವನ್ನು ಮಾಡಿದ್ದರೆ ಅಲ್ಲಿನ ನೀರಿನ ಬೇಡಿಕೆಯನ್ನು ಅಲ್ಲಿನ ಮೂಲಗಳಿಂದಲೇ ಪೂರೈಸಬಹುದಿತ್ತು. ಇದಕ್ಕೆ ಪೂರಕವಾಗಿ ಮುಚ್ಚಿದ ನೂರಾರು ಕೆರೆಗಳನ್ನು ತೆರವುಗೊಳಿಸಿ ಪುನಶ್ಚೇತನಗೊಳಿಸುವ ಕೆಲಸ ಮಾಡಬೇಕು. 

ಇದೀಗ ತಂತ್ರಜ್ಞಾನ ಅತ್ಯಂತ ಮುಂದುವರೆದಿದ್ದು ಬಳಸಿದ ನೀರನ್ನೇ ಸೋಸಿ ಮರುಬಳಸುವ ಪದ್ಧತಿ ಹಲವು
ದೇಶಗಳಲ್ಲಿ ಜಾರಿಯಲ್ಲಿದೆ. ಈ ಪದ್ಧತಿಯನ್ನು ಜಾರಿಗೆ ತರುವುದರಿಂದ ಪಶ್ಚಿಮ ಘಟ್ಟಗಳ ಪತನವನ್ನು ನಿಲ್ಲಿಸಬಹುದು. ಎತ್ತಿನಹೊಳೆ ಯೋಜನೆಯಲ್ಲಿ 13 ಸಾವಿರ ಕೋಟಿಯಷ್ಟು ಸಾರ್ವಜನಿಕ ಹಣ ಪೋಲಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತೂಂದು ಉತ್ತರದಾಯಿತ್ವ ಇಲ್ಲದ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಅವರು ವಿನಂತಿಸಿದರು.

ಆರು ರಾಜ್ಯಗಳಲ್ಲಿ ಹಬ್ಬಿಕೊಂಡಿರುವ ಪಶ್ಚಿಮಘಟ್ಟದ ಶೇ. 40 ಭಾಗ ಕರ್ನಾಟಕದಲ್ಲೇ ಇದೆ. ಈ ಪಶ್ಚಿಮಘಟ್ಟಗಳಲ್ಲಿ ಯಾವುದೇ ಪರಿಸರ ನಾಶದ ಯೋಜನೆಯನ್ನು ಹೇರದಿದ್ದರೆ ಇಡೀ ಪಶ್ಚಿಮಘಟ್ಟಗಳ ಸಾಲು ಒಂದು ನೀರಿನ ತೊಟ್ಟಿಯಂತೆ ಕೆಲಸ ಮಾಡುತ್ತದೆ. ಬಿದ್ದ ಮಳೆನೀರನ್ನು ಅರಣ್ಯಗಳು ಹೀರಿಕೊಂಡು, ಬೇಸಿಗೆಯಲ್ಲಿ ನದಿಯಾಗಿ ಹರಿಯುತ್ತದೆ. 

ಹೀಗಾಗಿ ಪಶ್ಚಿಮ ಘಟ್ಟಗಳನ್ನು ಹಾಳು ಮಾಡಿ ನೀರು ಪಡೆಯುತ್ತೇವೆ ಎನ್ನುವುದೇ ಮೂರ್ಖತನ. ಆದ್ದರಿಂದ, ಪಶ್ಚಿಮಘಟ್ಟಗಳ ಅರಣ್ಯಗಳನ್ನು ಆರೋಗ್ಯವಾಗಿಟ್ಟುಕೊಂಡಲ್ಲಿ ಇಡೀ ರಾಜ್ಯದ ನೀರಿನ ಸಮಸ್ಯೆಯನ್ನು ಸುಲಭವಾಗಿ
ಬಗೆಹರಿಸಬಹುದು. ಬೆಂಗಳೂರಿನ ಪ್ರತಿ ಮನೆಯಲ್ಲೂ ಮಳೆನೀರು ಇಂಗಿಸುವುದನ್ನು ಕಡ್ಡಾಯ ಮಾಡಿದಲ್ಲಿ
ಇಂತಹ ಯೋಜನೆಗಳ ಅವಶ್ಯಕತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಲಿಂಗನಮಕ್ಕಿಯಿಂದ ಬೆಂಗಳೂರಿಗೆ
ನೀರು ಸರಬರಾಜು ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರ ಈ ಕೂಡಲೇ ಕೈ ಬಿಡಬೇಕು ಎಂದು ಪರಿಸರ
ಪ್ರೇಮಿಗಳು ಒತ್ತಾಯಿಸಿದ್ದಾರೆ.

ಸರ್ಕಾರ ಮತ್ತೆ ಮತ್ತೆ ಪಶ್ಚಿಮ ಘಟ್ಟಗಳ ಪ್ರಾಕೃತಿಕ ಸಂಪತ್ತಿನ ಮೇಲೆಯೇ ಕಣ್ಣು ಹಾಕಿದರೆ ಮಲೆನಾಡಿನ
ಜನ ಒಂದು ಹಂತದಲ್ಲಿ ತಮ್ಮ ತಾಳ್ಮೆಯನ್ನು ಕಳೆದುಕೊಂಡು ಸಂಘರ್ಷಕ್ಕೆ ಮುಂದಾಗಬಹುದು. ಇಂತಹ ವಿಚಾರಗಳಲ್ಲಿ ಸರ್ಕಾರ ಹೆಚ್ಚು ಸೂಕ್ಷ್ಮವಾಗಿ ಪ್ರತಿಕ್ರಿಯಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.