Advertisement
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಪಂಚಾಯತಿ ಅಧ್ಯಕ್ಷ ಎಚ್.ವಿ.ಚಂದ್ರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಕುರಿತು ವ್ಯಾಪಕ ಚರ್ಚೆ ನಡೆಯಿತು. ಸದಸ್ಯ ಬಿ.ಬಾಲಚಂದ್ರಮೂರ್ತಿ ಮಾತನಾಡಿ, ಸಮಸ್ಯೆಗಳ ಬಗ್ಗೆ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಾಮಾನ್ಯ ಸಭೆಯಲ್ಲಿ ಚರ್ಚೆ ಕೈಗೊಂಡರೂ ಆ ಬಗ್ಗೆ ಕ್ರಮ ವಹಿಸುತ್ತಿಲ್ಲ. ಜನರು ಹಣಕೊಟ್ಟು ಕೆಲಸ ಮಾಡಿಸುವುದಾದರೆ ನಾವು ಚುನಾಯಿತರಾಗಿ ಏಕೆ ಇಲ್ಲಿಗೆ ಬರಬೇಕು ಎಂದು ಪ್ರಶ್ನಿಸಿದರು.
Related Articles
Advertisement
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ನೀರು ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುರುಷೋತ್ತಮ್ ಮಾತನಾಡಿ, ಫೆ.10ರೊಳಗೆ ಉಮ್ಮತ್ತೂರು ಭಾಗದ 42 ಹಳ್ಳಿ ಗಳಿಗೆ ನೀರು ಕೊಡಲು ಬರದಿಂದ ಕಾಮಗಾರಿ ನಡೆಯುತ್ತಿದೆ. ಮಾರ್ಚ್ ಅಂತ್ಯದ ವೇಳೆಗೆ 52 ಗ್ರಾಮಗಳ ಕಾಮಗಾರಿ ಪೂರ್ಣಗೊಳ್ಳಲಿದೆ. ಏಪ್ರಿಲ್ ವೇಳೆಗೆ ಬಹು ಗ್ರಾಮ ಕುಡಿಯುವ ಯೋಜನೆ ಪೂರ್ಣಗೊಳ್ಳಲಿದ್ದು ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.
ಸುಳ್ಳು ಮಾಹಿತಿ ನೀಡುತ್ತೀರಾ: ಇಷ್ಟಕ್ಕೆ ಸಮಾಧಾ ನಗೊಳ್ಳದ ಅಧ್ಯಕ್ಷರು ಅನುಪಾಲನ ವರದಿ ಕುರಿತು ಎಷ್ಟೇ ಚರ್ಚೆ ನಡೆದರೂ ಕಾಮಗಾರಿ ಅನುಷ್ಠಾನಗೊಳ್ಳುತ್ತಿಲ್ಲ. ಸಭೆಗೆ ಸುಳ್ಳು ಮಾಹಿತಿ ನೀಡು ತ್ತಿದ್ದೀರಿ. ಬಹುತೇಕ ಸದಸ್ಯರು ನಿಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದ್ದರಿಂದ ಸಮರ್ಪಕವಾಗಿ ಕೆಲಸ ನಿರ್ವಹಿಸಿ ಎಂದು ಎಇಇಗೆ ತಾಕೀತು ಮಾಡಿದರು. ಸದಸ್ಯರಾದ ಶಿವಕುಮಾರ್, ಬಿ.ಎಸ್.ರೇವಣ್ಣ, ಕೆ.ಎಂ ಮಹದೇವಸ್ವಾಮಿ, ಪಿ.ಕುಮಾರ್ ಸೇರಿದಂತೆ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸಾಮಾನ್ಯ ಸಭೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಪಿ.ಎಸ್.ದಯಾನಿಧಿ, ಕಾರ್ಯ ನಿರ್ವಾಹಕ ಅಧಿಕಾರಿ ಪ್ರೇಮ್‌ಕುಮಾರ್ ಉಪಸ್ಥಿತರಿದ್ದರು.