ಸುಬ್ರಹ್ಮಣ್ಯ: ಬೇಸಗೆ ಬೇಗೆ ಹೆಚ್ಚುತ್ತಿರುವಂತೆ ಜಲಮೂಲಗಳಾದ ಕೆರೆ, ಬಾವಿ ನದಿಗಳಲ್ಲಿ ಅಂರ್ತಜಲ ಕುಸಿಯುತ್ತಿದೆ. ಆದರೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿÇÉೆ ಗಡಿಭಾಗದ ಕೊಲ್ಲಮೊಗ್ರು ಗ್ರಾಮದ ಪೇಟೆ ಬಳಿಯ ನಿವಾಸಿಯೊಬ್ಬರ ಬಾವಿಯಲ್ಲಿ ದಿಢೀರನೆ ಒರತೆ ಹೆಚ್ಚಿದ್ದು, ನೀರು ಏರಿಕೆಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದೆ.
ಇಲ್ಲಿನ ಹೊನ್ನಪ್ಪ ಗೌಡ ಕೊಂದಾಳ ಅವರಿಗೆ ಸೇರಿದ ಬಾವಿಯಲ್ಲಿ ಈ ವಿಸ್ಮಯ ಸಂಭವಿಸಿದೆ. ಇದೇ ಬಾವಿಯಿಂದ ಬೆಳಗ್ಗೆ ನೀರು ತೆಗೆಯಲು ಬಿಂದಿಗೆ ಇಳಿಸಿದಾಗ ಬಿಂದಿಗೆ ಮುಳುಗುವಷ್ಟೂ ನೀರು ಇರಲಿಲ್ಲ.
ತಾಯಿ ನಿಧನ ಹೊಂದಿರುವ ಕಾರಣ ಹೊನ್ನಪ್ಪ ಅವರು ರವಿವಾರ ಬೆಳಗ್ಗೆ ತರವಾಡು ಮನೆಗೆ ತೆರಳಿದ್ದರು. ಅಂತ್ಯಕ್ರಿಯೆಗಳನ್ನೆಲ್ಲ ಮುಗಿಸಿ ಸಂಜೆ ಮನೆಗೆ ವಾಪಸಾದಾಗ ಬಾವಿಯೊಳಗಿನಿಂದ ಏನೋ ಸದ್ದು ಬರುತ್ತಿತ್ತು. ಏನೆಂದು ಕುತೂಹಲದಿಂದ ಇಣುಕಿದರೆ ಬಾವಿಯಲ್ಲಿ ನೀರು ತುಂಬಿತ್ತು.
ಬಾವಿ 12 ಅಡಿ ಆಳವಿದ್ದು 3 ಅಡಿಗಳಷ್ಟು ಎತ್ತರಕ್ಕೆ ನೀರು ಸಂಗ್ರಹಗೊಂಡಿದೆ. ನೀರಿನ ಮಟ್ಟ ಏರುತ್ತಲೇ ಇದೆ. ಸ್ಥಳೀಯರಲ್ಲಿ ಇದು ಅಚ್ಚರಿಗೆ ಕಾರಣವಾಗಿದೆ. ಹಲವು ಮಂದಿ ಸ್ಥಳಕ್ಕೆ ಧಾವಿಸಿ ಈ ಕೌತುಕವನ್ನು ವೀಕ್ಷಿಸಿದರು.
ಈ ಭಾಗದಲ್ಲಿ ಕಳೆದ ಮಳೆಗಾಲ ಭಾರೀ ಪ್ರಮಾಣದ ಜಲಸ್ಫೋಟ ಸಂಭವಿಸಿ ನೆರೆ ಬಂದು ಪ್ರಾಕೃತಿಕ ವಿಕೋಪ ಸಂಭವಿಸಿತ್ತು.