ಆಲಮಟ್ಟಿ: ಭೀಕರ ಬರಗಾಲದಿಂದ ತತ್ತರಿಸಿದ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಶನಿವಾರ ಬೆಳಗ್ಗೆಯಿಂದ ನೀರು ಬಿಟ್ಟಿದ್ದು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಕಳೆದ 7-8ವರ್ಷಗಳಿಂದ ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದಿರುವುದರಿಂದ ರೈತರು ನಿತ್ಯ ಉಳಿದ ಎಲ್ಲ ಕೆಲಸಗಳನ್ನು ಬಿಟ್ಟು ಜನ-ಜಾನುವಾರುಗಳ ಕುಡಿಯುವ ನೀರಿಗೆ ಕಿ.ಮೀ.ಗಟ್ಟಲೇ ಹೋಗಿ ನೀರು ತರುವ ಸ್ಥಿತಿ ನಿರ್ಮಾಣವಾಗಿತ್ತಾದರೂ ಈ ಭಾಗದ ಜನತೆಗೆ ನೀರಿನ ಮೂಲವೆಂದರೆ ಕೃಷ್ಣಾ ನದಿ. ಬೇಸಿಗೆಯಲ್ಲಿ ಬತ್ತಿ ಹೋಗುವುದರಿಂದ ಕೃಷ್ಣೆ ದಡದಲ್ಲಿರುವವರಿಗೂ ಕೂಡ ನೀರಿಗಾಗಿ ಜನ ಜಾನುವಾರುಗಳು ಪರದಾಡುವಂತಾಗುವದು ಹೊಸತೇನಲ್ಲ.
ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದೇ ಇದ್ದರೂ ಕೂಡ ಕೃಷ್ಣೆ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರ, ರತ್ನಗಿರಿ, ಕರಾಡ, ಸಾಂಗ್ಲಿ, ಸಾತಾರಾ ಜಿಲ್ಲೆಗಳು ರಾಜ್ಯದ ಬೆಳಗಾವಿ ಜಿಲ್ಲೆ ಸೇರಿದಂತೆ ಕೃಷ್ಣಾ ಜಲಾನಯನಪ್ರದೇಶದಲ್ಲಿ ಮಳೆಯಾದ ಪರಿಣಾಮ 2019ರ ಜುಲೈ-2ಮಂಗಳವಾರ ರಾತ್ರಿಯಿಂದ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನೀರು ಹರಿದು ಬರಲು ಆರಂಭಿಸಿ ಶನಿವಾರ ಜು. 27ರಂದು ಬಹುತೇಕ ಭರ್ತಿಯಾಗಿದೆ.
ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯವು ಸಮುದ್ರ ಮಟ್ಟದಿಂದ 488.948 ಮೀ.ಎತ್ತರದಲ್ಲಿದೆ. ಜಲಾಶಯ 1564.83 ಮೀ. ಉದ್ದ ಹೊಂದಿದೆ 531.48 ಮೀ.ಜಲಾಶಯ ಕಟ್ಟಡ ಎತ್ತರವಾಗಿದೆ. 524.256 ಮೀ.ಎತ್ತರದವರೆಗೆ ನೀರು ಸಂಗ್ರಹ ಮಾಡುವ ವಿನ್ಯಾಸ ಹೊಂದಿದ್ದರೂ ಅಂತಾರಾಜ್ಯ ವ್ಯಾಜ್ಯದಿಂದ ಆಲಮಟ್ಟಿ ಜಲಾಶಯದಲ್ಲಿ 519.6 ಮೀ. ಎತ್ತರದವರೆಗೆ ನೀರು ಸಂಗ್ರಹ ಮಾಡಿಕೊಳ್ಳಲು ಒಟ್ಟು 26 ಗೇಟು ಅಳವಡಿಸಲಾಗಿದೆ. ಅಲ್ಲದೇ ಕೆಪಿಸಿಎಲ್ ವತಿಯಿಂದ ಆಲಮಟ್ಟಿ ಜಲಾಶಯದ ಬಲಭಾಗದಲ್ಲಿ 55 ಮೆ.ವ್ಯಾ.ನ 5 ಘಟಕ ಹಾಗೂ 15 ಮೆ.ವ್ಯಾ. ಒಂದು ಘಟಕ ಸೇರಿ ಒಟ್ಟು ಆರು ಘಟಕಗಳಿಗೆ 45 ಸಾವಿರ ಕ್ಯುಸೆಕ್ ನೀರು ಹರಿಸುವುದರಿಂದ 290 ಮೆ.ವ್ಯಾ.ವಿದ್ಯುತ್ ಉತ್ಪಾದನೆಯಾಗಲಿದೆ.