ರಾಯಚೂರು: ತುಂಗಭದ್ರಾ ಜಲಾಶಯದ ಎಚ್ ಎಲ್ ಸಿ ಕಾಲುವೆ ಮೂಲಕ ಆಂಧ್ರಕ್ಕೆ ಅಕ್ರಮವಾಗಿ ನೀರು ಹರಿಸುತ್ತಿದ್ದು, ಈ ಕುರಿತು ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಲಾಶಯದ ಅಧಿಕಾರಿಗಳು ಬೇಕಾಬಿಟ್ಟಿ ನೀರು ಹರಿಸುತ್ತಿದ್ದಾರೆ. ಕಾಲುವೆ ಆಧುನೀಕರಣ ನೆಪದಲ್ಲಿ ತಪ್ಪು ಮಾಹಿತಿ ನೀಡಿ ವಂಚನೆ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಸಮಗ್ರ ತನಿಖೆ ನಡೆಸಿ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಬಾರಿ ಜಲಾಶಯದಲ್ಲಿ ನೀರಿದ್ದರೂ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಬೇಸಿಗೆ ಬೆಳೆಗೆ ನೀರು ಸಿಗಲಿಲ್ಲ. ಆದರೆ ಈ ಬಾರಿ 23 ಟಿಎಂಸಿ ನೀರು ಹೆಚ್ಚಿದ್ದು ಕೂಡಲೇ ಐಸಿಸಿ ಸಭೆ ಕರೆಯಬೇಕು. ಬೇಸಿಗೆ ಬೆಳೆಗೆ ನೀರು ನೀಡಲಾಗುತ್ತಿದೆಯೋ ಇಲ್ಲವೋ ಎಂಬ ಸ್ಪಷ್ಟನೆ ನೀಡಬೇಕು. ಈಗಿನ ಪರಿಸ್ಥಿತಿ ಅವಲೋಕಿಸಿದರೆ ಕನಿಷ್ಠ ಎಪ್ರಿಲ್ 30 ರವರೆಗೆ ನೀರು ಹರಿಸಬಹುದು. ಸರ್ಕಾರ ಈ ವಿಚಾರದಲ್ಲಿ ಸ್ಪಂದನೆ ನೀಡದಿದ್ದಲ್ಲಿ ಪಕ್ಷದಿಂದ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಎನ್.ಎಸ್. ಬೋಸರಾಜ್ ಮಾತನಾಡಿ, ಕಾಲುವೆಗೆ ನೀರು ಹರಿಸುವುದು, ಸುಗ್ರೀವಾಜ್ಞೆ ಮೂಲಕ ಪ್ರತ್ಯೇಕ ವಿವಿ ಸ್ಥಾಪಿಸಬೇಕು, ಖರೀದಿ ಕೇಂದ್ರಗಳ ಆರಂಭಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನ.13 ರಂದು ಜಿಲ್ಲೆಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮಾಜಿ ಸಂಸದ ಬಿ.ವಿ.ನಾಯಕ ಸೇರಿದಂತೆ ಇತರರಿದ್ದರು.