ಬೇತಮಂಗಲ: ಬೇವಿನ ಮರದ ಕೊಂಬೆಯಲ್ಲಿ ಸತತವಾಗಿ 10 ದಿನಗಳಿಂದ ಹಾಲಿನಂತೆ ನೊರೆ ನೀರು ಸುರಿಯುತ್ತಿದ್ದು, ಇದು ದೇವರ ಮಹಿಮೆ ಹಾಗೂ ವಿಸ್ಮಯ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಕೆಜಿಎಫ್ ಕ್ಷೇತ್ರವಲ್ಲದೇ ಬಂಗಾರಪೇಟೆ, ಆಂಧ್ರದ ಶಾಂತಿಪುರಂ, ಕುಪ್ಪಂ ಸೇರಿದಂತೆ ಅನೇಕ ಭಾಗಗಳಿಂದ ಭಕ್ತರು ಭೇಟಿ ನೀಡಿ ಬೇವಿನ ಮರದಿಂದ ಹಾಲಿನ ನೊರೆಯಂತೆ ಸುರಿಯುತ್ತಿರುವ ನೀರು ವೀಕ್ಷಿಸಿ ದೇವರ ತೀರ್ಥವೆಂದು ತಲೆ ಮೇಲೆ ಚೆಲ್ಲಿಕೊಳ್ಳುತ್ತಾ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಶುಭವೋ, ಅಶುಭವೋ!: ಈ ವಿಸ್ಮಯ ಘಟನೆಯೂ ಕೆಜಿಎಫ್ ತಾಲೂಕಿನ ಕಂಗಾಂಡ್ಲಹಳ್ಳಿ ಗ್ರಾಪಂನ ಐವಾರಹಳ್ಳಿ ಗ್ರಾಮದ ರೈತ ರಮೇಶ್ ಅವರಿಗೆ ಸೇರಿದ ಜಮೀನಿನಲ್ಲಿ ನಡೆಯುತ್ತಿದ್ದು, ಸುಮಾರು 10 ದಿನಗಳಿಂದ ಮರದಿಂದ ನೀರು ಸುರಿಯುತ್ತಿದೆ. ಇದರಿಂದ ನಮಗೆ ಶುಭವೋ- ಅಶೋಭವೋ ಎಂಬ ಆತಂಕ ವ್ಯಕ್ತವಾಗಿದೆ. ಈ ಬಗ್ಗೆ ಪಂಡಿತರು, ಜೋತಿಷ್ಯರ ಬಳಿ ಜಮೀನು ಮಾಲೀಕ ರಮೇಶ್ ಕೇಳಿದಾಗ ಇದೊಂದು ಶುಭ ಗಳಿಗೆ ಮಂಗಳವಾರ ಅಥವಾ ಬುಧವಾರದೊಳಗೆ ಇಲ್ಲಿ ಯಾವುದೋ ಶಕ್ತಿ
ದೇವತೆಯ ವಿಗ್ರಹವು ಹುಟ್ಟುತ್ತದೆ ಎಂದು ತಿಳಿಸಿರುವುದಾಗಿ ರಮೇಶ್ ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಸಾಲ ವಾಪಸ್ ಕೇಳಿದ ವೃದ್ಧೆಯನ್ನೇ ಕೊಂದು ಬಾವಿಗೆ ಎಸೆದ್ರು : ಇಬ್ಬರು ಆರೋಪಿಗಳು ಸೆರೆ
ಲೈಟ್ ವ್ಯವಸ್ಥೆ: ಈ ವಿಸ್ಮಯ ನೋಡಲು ಜನರು ಸಾಗರೋಪದಿಯಲ್ಲಿ ಆಗಮಿಸುತ್ತಿದ್ದು, ಈ ಮರದ ಸುತ್ತಲೂ ಮರದ ತುಂಡುಗಳಿಂದ ಬೇಲಿ ನಿರ್ಮಿಸಿ ರಾತ್ರಿ ವೇಳೆಯಲ್ಲೂ ಭಕ್ತರ ಆಗಮಿಸುತ್ತಿರುವ ಹಿನ್ನೆಲೆ ವಿದ್ಯುತ್ ವ್ಯವಸ್ಥೆ ಮಾಡಿದ್ದಾರೆ. ಬೇವಿನ
ಮರಕ್ಕೆ ಪೂಜೆ ಸಲ್ಲಿಸಿ ಹನಿ-ಹನಿಯಾಗಿ ಬರುತ್ತಿರುವ ನೀರನ್ನು ತಲೆಯ ಮೇಲೆ ಚೆಲ್ಲಿಕೊಂಡು ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡು ಬಂತು.
ಸ್ಪಷ್ಟನೆ ನೀಡಲಿ: ಇಲ್ಲಿ ಪ್ರತಿನಿತ್ಯ ಸಾರ್ವಜನಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ತಕ್ಷಣ ಸಂಬಂಧಿಸಿದ ಇಲಾಖೆಯ ಮೂಲಕ ತಜ್ಞರ ಮೂಲಕ ಕುಲಂಕುಶವಾಗಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಸತ್ಯಾಂಶ ತಿಳಿಸಬೇಕಿದೆ. ಇದು ದೇವರ ಅನುಗ್ರಹದಿಂದ ವಿಸ್ಮಯ ನಡೆದಿದೆಯೋ, ಅಥವಾ ಬೇರೆ ಏನಾದರೂ ಸಾಮಾಜಿಕ ಕಾರಣವೋ ಎಂಬುದರ ಬಗ್ಗೆ ಸರ್ಕಾರವು
ಜಿಲ್ಲಾಡಳಿತ ಮೂಲಕ ಸ್ಪಷ್ಟ ಸಂದೇಶ ನೀಡಬೇಕಿದೆ.