Advertisement

ನೇತ್ರಾವತಿ, ಸ್ವರ್ಣೆಯಲ್ಲಿ ಹರಿವು ಆರಂಭ

10:43 AM Jun 18, 2019 | keerthan |

ಮಂಗಳೂರು: ನೀರಿನ ಕೊರತೆಯಿಂದ ಕಳೆದೊಂದು ತಿಂಗಳಿಂದ ಉತ್ಪಾದನೆ ಸ್ಥಗಿತಗೊಂಡಿದ್ದ ಎಂಆರ್‌ಪಿಎಲ್‌ ಹಾಗೂ ಎಂಸಿಎಫ್‌ಗಳು ಸದ್ಯ ಸ್ವಲ್ಪ ನಿರಾಳವಾಗಿವೆ. ಇತ್ತೀಚೆಗೆ ಸುರಿದ ಮಳೆ ಹಾಗೂ ಮುಂಬರುವ ಮಳೆಯ ನಿರೀಕ್ಷೆಯಿಂದಾಗಿ ಎಂಆರ್‌ಪಿಎಲ್‌ ಹಾಗೂ ಎಂಸಿಎಫ್‌ನಲ್ಲಿ ಉತ್ಪಾದನೆ ಪ್ರಕ್ರಿಯೆ ಆರಂಭವಾಗಿದೆ.

Advertisement

ಎಂಆರ್‌ಪಿಎಲ್‌ನಲ್ಲಿ ಸದ್ಯ 2ನೇ ಘಟಕ ನಿರಂತರ ಕಾರ್ಯಾಚರಿಸುತ್ತಿದ್ದು, 1 ಹಾಗೂ 3ನೇ ಘಟಕವನ್ನು ನೀರಿನ ಕೊರತೆಯ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಸ್ವಲ್ಪ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ 1 ಹಾಗೂ 3ನೇ ಘಟಕದ ಉಪಘಟಕಗಳನ್ನು ಆರಂಭಿಸಲಾಗಿದೆ.

ವಾರ್ಷಿಕ ನಿರ್ವಹಣೆಗಾಗಿ ಎಂಆರ್‌ಪಿಎಲ್‌ನ 3ನೇ ಘಟಕವನ್ನು ಎಪ್ರಿಲ್‌ ಅಂತ್ಯದಲ್ಲಿ ಸ್ಥಗಿತಗೊಳಿಸಲಾಗಿತ್ತು. ನೀರಿನ ಅಲಭ್ಯತೆಯ ಕಾರಣಕ್ಕೆ ಮೇ 10ರಿಂದ ಮೊದಲ ಘಟಕದ ಕಾರ್ಯನಿರ್ವಹಣೆ ಸ್ಥಗಿತವಾಗಿತ್ತು. ಮುನ್ನೆಚ್ಚರಿಕೆಯಾಗಿ ಹೆಚ್ಚುವರಿಯಾಗಿ ಪೆಟ್ರೋಲಿಯಂ ಉತ್ಪಾದನೆ ಮಾಡಿದ್ದರಿಂದ ಪೆಟ್ರೋಲ್‌, ಡೀಸೆಲ್‌ ಲಭ್ಯತೆಯಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಎಂಆರ್‌ಪಿಎಲ್‌ ತಿಳಿಸಿವೆ. ನೀರಿನ ಕೊರತೆಯಿಂದ 2016ರಲ್ಲಿಯೂ ಸಮಸ್ಯೆ ಉಂಟಾಗಿತ್ತು.

ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಮಂಗಳೂರಿನ ಎಂಸಿಎಫ್ ವಾರ್ಷಿಕ ನಿರ್ವಹಣೆಗಾಗಿ ಮಾರ್ಚ್‌ನಿಂದ ಸುಮಾರು 40 ದಿನ ಬಂದ್‌ ಆಗಿತ್ತು. ನೀರಿಲ್ಲದ ಕಾರಣ ಮೇ 14ರ ಬೆಳಗ್ಗಿನಿಂದ ಮತ್ತೆ ಸ್ಥಗಿತಗೊಂಡಿತ್ತು. 2016ರ ಮೇಯಲ್ಲೂ ಮಂಗಳೂರು ನಗರಕ್ಕೆ ತೀವ್ರ ನೀರಿನ ಕೊರತೆ ಉಂಟಾಗಿದ್ದ ಕಾರಣ ಒಂದು ತಿಂಗಳಿಗೂ ಹೆಚ್ಚು ಕಾಲ ಎಂಸಿಎಫ್ ಮುಚ್ಚಲಾಗಿತ್ತು.

ಉಡುಪಿ: ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರ
ಉಡುಪಿ: ನಗರಕ್ಕೆ ನೀರುಣಿಸುವ ಸ್ವರ್ಣಾ ನದಿಯಲ್ಲಿ ಒಳಹರಿವು ಆರಂಭಗೊಂಡಿದೆ. ಶನಿವಾರ ಮುಂಡ್ಲಿ ಅಣೆಕಟ್ಟಿನಿಂದ ನಿಧಾನಕ್ಕೆ ಶಿರೂರು ಡ್ಯಾಂನತ್ತ ನೀರು ಹರಿದು ಬರಲು ಆರಂಭವಾಗಿತ್ತು. ಆ ಬಳಿಕ ಮಳೆ ಕಡಿಮೆಯಾದ ಪರಿಣಾಮ ನೀರಿನ ಹರಿವು ಕಡಿಮೆಯಾಯಿತು.

Advertisement

ರವಿವಾರ ರಾತ್ರಿಯಿಂದ ನೀರಿನ ಹರಿವು ಉತ್ತಮವಾಗಿತ್ತು. ಸೋಮವಾರ ಪುತ್ತಿಗೆಯಿಂದ ಬಜೆ ಡ್ಯಾಂನತ್ತ ಸರಾಗವಾಗಿ ನೀರು ಹರಿದು ಬರುತ್ತಿದೆ. ಡ್ಯಾಂ ಬಳಿ ನೀರಿನ ಲಭ್ಯತೆ 1.40 ಅಡಿಯಷ್ಟಿದೆ.

ಮೇ 7ರಿಂದ ಆರಂಭಗೊಂಡಿದ್ದ ಪಂಪಿಂಗ್‌ ಪ್ರಕ್ರಿಯೆ ಸೋಮವಾರಕ್ಕೆ ಕೊನೆಗೊಂಡಿದೆ. ಡ್ಯಾಂ ತುಂಬಿ ಹೊರಹರಿವು ಆರಂಭವಾದ ಬಳಿಕ ಹಿಂದಿನಂತೆ ನಿರಂತರ ನೀರು ವಿತರಿಸುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀರಿನ ಅಭಾವ ತಲೆದೋರಿದ ಪರಿಣಾಮ ಜಿಲ್ಲಾಡಳಿತವು ಪಂಪಿಂಗ್‌ ಮೂಲಕ ನೀರನ್ನೆತ್ತುವ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿತ್ತು. ಅದರಂತೆ ಮೇ 7ರಿಂದ ಪಂಪಿಂಗ್‌ ಮೂಲಕ ನೀರೆತ್ತಲಾಗುತ್ತಿತ್ತು. 35 ವಾರ್ಡ್‌ಗಳನ್ನು 6 ವಿಭಾಗಗಳನ್ನಾಗಿ ವಿಂಗಡಿಸಿ ದಿನಕ್ಕೆ ಇಂತಿಷ್ಟು ವಾರ್ಡ್‌ಗಳಿಗೆ ನೀರು ಹಂಚಿಕೆ ಮಾಡುವ ಕೆಲಸವನ್ನು ನಗರಸಭೆ ನಿರ್ವಹಿಸುತ್ತಿತ್ತು. ಆದರೆ ನೀರಿರುವ ಹಳ್ಳಗಳೂ ಬಹುತೇಕ ಖಾಲಿಯಾಗಿ ಜೂನ್‌ ತಿಂಗಳು ಬಂದರೂ ಮಳೆ ಬಾರದ ಕಾರಣ ಜನ ಆತಂಕಕ್ಕೀಡಾಗಿದ್ದರು. ಅಂತೂ ನೀರಿನ ಹರಿವು ಆರಂಭಗೊಂಡಿದ್ದು ಜನತೆ ನಿರಾಳಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next