ಹಾವೇರಿ: ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಸರ್ಕಾರ ಕೂಡಲೇ ದನಕರುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡಬೇಕು ಎಂದು ನವಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ ಆಗ್ರಹಿಸಿದರು.
ಶುಕ್ರವಾರ ನಗರದ ಹುಕ್ಕೇರಿ ಮಠದ ದಾಸೋಹ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರಿಯಾದ ಮಳೆ ಇಲ್ಲದೇ ರಾಜ್ಯದ ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಸರ್ಕಾರ ಕೂಡಲೇ ಕೆರೆ-ಕಟ್ಟೆ ತುಂಬಿಸುವ ಕೆಲಸ ಮಾಡಬೇಕು. ಬರಗಾಲದಿಂದ ತತ್ತರಿಸಿರುವ ರೈತರಿಗೆ ಸರ್ಕಾರ ಈ ಬಾರಿಗೆ ಮುಂಗಾರು ಹಂಗಾಮಿಗೆ ಉಚಿತ ಬೀಜ, ಗೊಬ್ಬರ ನೀಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ಕೃಷಿಕರು, ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಕೃಷಿ ಹಾಗೂ ಕೃಷಿಕನ ಅಭಿವೃದ್ಧಿಗೆ ಏನು ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ವಯೋಮಿತಿ ಮೀರಿದ 30-40 ಲಕ್ಷ ವಿದ್ಯಾರ್ಥಿಗಳು ವಿವಿಧ ವಿದ್ಯಾರ್ಹತೆ ಹೊಂದಿಯೂ ಉದ್ಯೋಗ ವಂಚಿತರಾಗಿದ್ದು, ಅವರಿಗೆಲ್ಲ ಸರ್ಕಾರ ಕನಿಷ್ಠ 5 ಲಕ್ಷ ರೂ. ಪ್ರೋತ್ಸಾಹಧನ ನೀಡಿ ಸ್ವಉದ್ಯೋಗ ಸೃಷ್ಟಿಸಿಕೊಳ್ಳಲು ಸಹಾಯ ಮಾಡಬೇಕು. 60 ವರ್ಷ ದಾಟಿದ ರೈತರು ಹಾಗೂ ರೈತ ಮಹಿಳೆಯರಿಗೆ 5 ಸಾವಿರ ರೂ. ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು. ಸಂಘಟನೆ ಪದಾಧಿಕಾರಿಗಳಾದ ಪುಷ್ಪಾ ಯಾದವ್, ಮಲ್ಲಿಕಾರ್ಜುನ ತುಮಗೂರ, ಭಾರತಿ ಡವಳ, ಎಂ.ಬಿ. ಜಗದೀಶ್, ಎಚ್. ತಿಪ್ಪೇಸ್ವಾಮಿ, ಅಜಯಕುಮಾರ, ದೀಪಾ ಪಾಟೀಲ, ಹನುಮಂತರಾಯಪ್ಪ ಇತರರಿದ್ದರು.