ಪಣಜಿ: ಗೋವಾದ ಸತ್ತರಿ ತಾಲೂಕು ಭಾಗದಲ್ಲಿರುವ ಜಲಪಾತಗಳು ರಮಣೀಯ ಸೌಂದರ್ಯದಿಂದ ಕೂಡಿದ್ದು, ನಿಸರ್ಗದ ಸೌಂದರ್ಯವನ್ನು ಆನಂದಿಸಲು ಈ ಭಾಗವು ಪ್ರಮುಖ ಪ್ರವಾಸಿ ತಾಣವಾಗುತ್ತಿದೆ. ನದಿಗಳು ಮತ್ತು ಸರೋವರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ ಮತ್ತು ಗೋವಾ ಮತ್ತು ಗೋವಾದ ಹೊರಗಿನ ಪ್ರವಾಸಿಗರು ಮಳೆಗಾಲದಲ್ಲಿ ಜಲಪಾತಗಳನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದೀಗ ಗೋವಾ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಪರ್ವತಗಳ ತುದಿಯಿಂದ ಜಲಪಾತಗಳು ಹರಿಯಲು ಪ್ರಾರಂಭಿಸಿವೆ. ಸತ್ತರಿಯಲ್ಲಿರುವ ಮಾನ್ಸೂನ್ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸಲು ಮೈದುಂಬಿಕೊಳ್ಳುತ್ತಿದೆ.
ಸತ್ತರಿಯಲ್ಲಿ ಪ್ರತಿ ವರ್ಷ, ಪ್ರವಾಸಿಗರು ಮಳೆಗಾಲದಲ್ಲಿ ಶನಿವಾರ, ಭಾನುವಾರ ಮತ್ತು ರಜಾದಿನಗಳಲ್ಲಿ ಜಲಪಾತಗಳಿಗೆ ಭೇಟಿ ನೀಡುತ್ತಾರೆ. ಅದೇ ಸಮಯದಲ್ಲಿ, ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಸಂಸ್ಥೆಗಳು ಆಯೋಜಿಸಿರುವ ಜಲಪಾತಕ್ಕೆ ಚಾರಣಕ್ಕಾಗಿ ರಜಾದಿನಗಳಲ್ಲಿ ಪ್ರವಾಸಿಗರ ಗರ್ದಿಯನ್ನು ಕಾಣಬಹುದಾಗಿದೆ. ಆಷಾಢ ಏಕಾದಶಿ ಮತ್ತು ಬಕ್ರಿ ಈದ್ ಸಾರ್ವಜನಿಕ ರಜಾದಿನಗಳಾಗಿದ್ದವು. ಹಾಗಾಗಿ ಈ ಭಾಗದಲ್ಲಿರುವ ಮಾನ್ಸೂನ್ ಜಲಪಾತಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಮಳೆಗಾಲದ ಸಂದರ್ಭದಲ್ಲಂತೂ ಶನಿವಾರ ಮತ್ತು ಭಾನುವಾರದಂದು ಸತ್ತರಿ ತಾಲೂಕಿನಲ್ಲಿರುವ ಜಲಪಾತಗಳು ಹೌಸ್ ಫುಲ್ ಆಗಿರುತ್ತದೆ. ಆದರೆ ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು ಸ್ಥಳೀಯ ಪಂಚಾಯಿತಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದರೆ ಇನ್ನೂ ಹೆಚ್ಚಿನ ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಪಾಳಿನಲ್ಲಿರುವ ಹೊಸ ರಸ್ತೆಯು ಪ್ರವಾಸಿಗರಿಗೆ ಪಾಳಿ ಮೂಲಕ ಚೋರ್ಲಾಘಾಟ್‍ಗೆ ಜಾಂಬಳಿ ತೆಂಬಾ ಮಾರ್ಗವಾಗಿ ಚೋರ್ಲಾ ತಲುಪಲು ಅನುಕೂಲಕರವಾಗಿದೆ. ಮಳೆಗಾಲದಲ್ಲಿ ಪ್ರವಾಸಿಗರು ಚೋರ್ಲಾ ಮತ್ತು ಸುರ್ಲಾದಂತಹ ಸುಂದರ ಸ್ಥಳಗಳಿಗೆ ಆಕರ್ಷಿತರಾಗುತ್ತಾರೆ. ಈ ರಸ್ತೆ ಪೂರ್ಣಗೊಂಡ ನಂತರ ಫೋಂಡಾ, ಗುಳೇಲಿ ಮತ್ತು ವಾಲ್ಪೈ ನಾಗರಿಕರು ಬೆಳಗಾವಿಗೆ ಹೋಗಲು ಈ ರಸ್ತೆಯನ್ನು ಬಳಸುತ್ತಿದ್ದಾರೆ. ಈ ಮಾರ್ಗದಲ್ಲಿ ಸಲೇಲಿ, ಜರ್ಮೆ, ನಾನೇಲಿ, ಬ್ರಹ್ಮಕರ್ಮಲಿ, ಶೆಲಪ್-ಬುದ್ರುಕ್, ಚೋರ್ಲಾಘಾಟ್, ಪಾಳಿ, ಹಿವ್ರೆ, ಶೆಲಾಪ್, ಸತ್ರೆ, ಕುಮ್ತಾಲ್, ಕಾರಂಜೋಲ್, ತುಲಾಸ್ ಕೊಂಡ್, ಮೋಳೆ, ರೈವ್, ಚರವಾಣೆ ಮತ್ತು ಸತ್ತಾರಿಯ ಅನೇಕ ಭಾಗಗಳಲ್ಲಿ ಹರಿಯುವ ಸಣ್ಣ ಮತ್ತು ದೊಡ್ಡ ಜಲಪಾತಗಳು ಮಳೆಗಾಲದ ಈ ಭಾಗದ ಪ್ರಮುಖ ಆಕರ್ಷಣೆಯಾಗಿದೆ. ಸತ್ತರಿಯಲ್ಲಿ ಜಲಪಾತ ವರ್ಷಪೂರ್ತಿ ಹರಿಯುತ್ತಿರುತ್ತದೆ. ಸತ್ತರಿ ಜಲಪಾತಗಳು ಮಹದಾಯಿ ಅಭಯಾರಣ್ಯದ ಅಡಿಯಲ್ಲಿ ಬರುತ್ತವೆ ಮತ್ತು ಅರಣ್ಯ ಅಧಿಕಾರಿಗಳು ಜಲಪಾತಗಳಿಗೆ ಪ್ರವೇಶ ಶುಲ್ಕವನ್ನು ವಿಧಿಸುತ್ತಾರೆ.
ಪಾಳಿ-ಸತ್ತರಿಯ ಪಂಚಾಯತ ಸದಸ್ಯ ಸುರೇಶ್ ಆಯಕರ್ ಪ್ರತಿಕ್ರಿಯೆ ನೀಡಿ- ಮಳೆಗಾಲದಲ್ಲಿ ಜಲಪಾತಕ್ಕೆ ಬರುವ ಪ್ರವಾಸಿಗರಿಂದ ಸ್ಥಳೀಯ ಪಂಚಾಯಿತಿ ಕಡಿಮೆ ಶುಲ್ಕ ವಿಧಿಸಬೇಕು. ಜಲಪಾತದ ಬಳಿ ಬಟ್ಟೆ ಬದಲಿಸಲು ಅಗತ್ಯ ಸೌಲಭ್ಯ ಕಲ್ಪಿಸಬೇಕು. ಪಂಚಾಯತ್‍ಗಳು ಕೆಲವು ಹಣಕಾಸಿನ ನೆರವನ್ನು ಶುಲ್ಕದ ಮೂಲಕ ಪಡೆಯಬಹುದು. ಪಾಳಿ-ಸತ್ತರಿಯಲ್ಲಿರುವ ಶಿವಲಿಂಗ ಮಾನ್ಸೂನ್ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ವರ್ಷ ಮುಂಗಾರು ಹಂಗಾಮು ತಡವಾಗಿ ಆರಂಭವಾಗಿರುವುದು ಪ್ರವಾಸಿಗರ ಗಮನದ ಮೇಲೆ ಪರಿಣಾಮ ಬೀರಿದೆ. ಆದರೆ, ಈಗ ಮುಂಗಾರು ಮಳೆ ಆರಂಭವಾಗಿರುವುದರಿಂದ ಜಲಪಾತಗಳು ಮೈದುಂಬಿಕೊಳ್ಳುತ್ತಿದೆ. ಹೀಗಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.
ಇದನ್ನೂ ಓದಿ: Odisha: ಹುಟ್ಟಿದ ಎರಡನೇ ಮಗುವೂ ಹೆಣ್ಣಾಯಿತೆಂದು 8 ತಿಂಗಳ ಮಗುವನ್ನು 800ರೂ. ಗೆ ಮಾರಿದ ತಾಯಿ