ಬಜಪೆ: ಗ್ರಾಮಗಳು ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ. ರಸ್ತೆ, ನೀರು, ದಾರಿದೀಪ, ಇತ್ಯಾದಿ ಸಮಸ್ಯೆಗಳು ಸದಾ ಕಾಡುತ್ತಿವೆ. ಇವುಗಳಿಗೆ ಸರಕಾರದ ವಿವಿಧ ಅನುದಾನದಿಂದ ಪರಿಹಾರ ಕಾಣಬಹುದು. ಆದರೆ ಕೆಲವೊಮ್ಮೆ ಸಮರ್ಪಕ ದಾಖಲೆಗಳು ಇಲ್ಲದೆ ಗ್ರಾಮಸ್ಥರು ಸವಲತ್ತುಗಳಿಂದ ವಂಚಿತರಾಗು ತ್ತಾರೆ. ಇಂತಹದೇ ಕಾರಣದಿಂದ ಪೆರ್ಮುದೆ ಗ್ರಾ.ಪಂ. ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ದಲಿತ ಬಡ ಕುಟುಂಬದ ಪುಷ್ಪಾ ಅವರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದರು.
ಪುಷ್ಪಾ ಅವರ ಮನೆ ದಾಖಲೆಗಳು ಇಲ್ಲದೆ ನರೇಗಾದಲ್ಲಿ ಬಾವಿ ತೋಡಿಸಲು ಸಾಧ್ಯವಿಲ್ಲ. ಖಾಸಗಿ ಜಾಗದ ಮಧ್ಯೆ ಮನೆ ಇರುವ ಕಾರಣ ಪಂಚಾಯತ್‌ನಿಂದ ನೀರಿನ ಪೈಪ್ ಹಾಕಲು ಸಾಧ್ಯವಾಗಿಲ್ಲ. ಇದನ್ನು ಮನಗಂಡ ಪೆರ್ಮುದೆ ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಎನ್. ಅಂಚನ್ ಸ್ಥಳೀಯ ಯುವಕರಲ್ಲಿ ಈ ಬಗ್ಗೆ ತಿಳಿಸಿ, ಬಾವಿ ನಿರ್ಮಾಣ ಕಾರ್ಯಕ್ಕೆ ಮುಂದಾದರು.
20 ಮಂದಿ ಸ್ಥ ಳೀಯ ಯುವಕರ ತಂಡ
ಬಾವಿಯು 6 ಅಡಿಗಳ ವ್ಯಾಸವಿದ್ದು , 20 ಅಡಿಗಳಷ್ಟು ಅಳವಿದೆ. ಒಟ್ಟು 20 ಮಂದಿಯ ತಂಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಇವರೆಲ್ಲರೂ ಉದ್ಯೋಗದಲ್ಲಿ ದ್ದವರು. ರವಿವಾರ ರಜಾದಿನದಂದು ಬಾವಿ ತೋಡುವ ಕಾರ್ಯ ಮಾಡಿದ್ದಾರೆ. ಒಟ್ಟು ಮೂರು ರವಿವಾರ ಕೆಲಸ ಮಾಡಿ ಬಾವಿ ನಿರ್ಮಿಸಿದ್ದಾರೆ. ತಳದಲ್ಲಿ ಕೆಸರು ಇದ್ದ ಕಾರಣ ತೋಡಲು ಸಾಧ್ಯವಾಗದೇ ಮಣ್ಣು ಕುಸಿಯಲು ಆರಂಭವಾಗಿತ್ತು. ಇದರಿಂದ ಬಾವಿಗೆ ರಿಂಗ್ ಹಾಕಬೇಕಾದ ಅನಿವಾರ್ಯತೆ ಬಂದಾಗ ಎಲ್ಲ ಯುವಕರು ತಾವೇ ಹಣ ಹಾಕಿ, ಒಟ್ಟು 32 ಸಾವಿರ ರೂ. ಒಗ್ಗೂಡಿಸಿ ರಿಂಗ್ ಹಾಕಿಸಲಾಯಿತು. ಈಗ 7 ಅಡಿಗಳಷ್ಟು ನೀರು ಇದೆ.
ಮಾದರಿ ಕೆಲಸ
ಗ್ರಾಮ ಪಂಚಾಯತ್, ಅಲ್ಲಿನ ಜನಪ್ರತಿನಿಧಿಗಳು ಗ್ರಾಮಸ್ಥರಿಗೆ ಸವಲತ್ತಗಳನ್ನು ಹಾಗೂ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು. ಮಹಿಳೆಯ ಕಷ್ಟಕ್ಕೆ ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಪೆರ್ಮುದೆ ಗ್ರಾಮ ಪಂಚಾಯತ್ ಮಾದರಿಯಾಗಿದೆ. ಪಂಚಾಯತ್‌ನಿಂದ ಯಾವುದೇ ಅನುದಾನವಿಲ್ಲದೇ ಸ್ಥಳಿಯ ಯುವಕರ ತಂಡ ಹಾಗೂ ಗ್ರಾಮಸ್ಥರನ್ನು ಒಗ್ಗೂಡಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
-ಸುಬ್ರಾಯ ನಾಯಕ್ ಎಕ್ಕಾರು