Advertisement

ಕಾರ್ಮಿಕ ಇಲಾಖೆ ಕಟ್ಟಡಕ್ಕೆ ನೀರು ನುಗ್ಗಿ ಕಡತಗಳು ನಾಶ

04:46 PM Oct 18, 2022 | Team Udayavani |

ಹೊಳೆನರಸೀಪುರ: ಶನಿವಾರ ರಾತ್ರಿ ಎಡಬಿಡದೆ ಸುರಿದ ಮಳೆಯಿಂದ ಮೈಸೂರು ರಸ್ತೆಯಲ್ಲಿನ ಕಾರ್ಮಿಕ ಇಲಾಖೆ ಕಟ್ಟಡಕ್ಕೆ ನೀರು ನುಗ್ಗಿದ್ದು, ಕಡತಗಳು, ದಾಖಲೆ ಪತ್ರಗಳು ತೊಯ್ದು ಭಾರೀ ಅವಾಂತರಕ್ಕೆ ಕಾರಣವಾಗಿದೆ.

Advertisement

ಚರಂಡಿಯಲ್ಲಿ ನೀರು ಹರಿದು ಹೋಗಲು ಸೂಕ್ತ ಜಾಗವಿಲ್ಲದೆ, ಕಚೇರಿಗೆ ನುಗ್ಗಿದೆ. ಇದರಿಂದ ಕಚೇರಿಯಲ್ಲಿದ್ದ ದಾಖಲೆ ಪತ್ರಗಳು ನೀರಿನಲ್ಲಿ ತೊಯ್ದ ಪರಿಣಾಮ ಅವುಗಳನ್ನು ಒಣಗಿಸಿಡುವ ಪರಿಸ್ಥಿತಿ ಉಂಟಾಯಿತು. ಈ ರೀತಿ ಘಟನೆ ಮೂರು ನಾಲ್ಕು ವರ್ಷದ ಹಿಂದೆ ಸಂಭವಿಸಿತ್ತು. ಚರಂಡಿಯಲ್ಲಿ ಹರಿಯಬೇಕಾದ ನೀರು, ತುಂಬಿ ಕಚೇರಿಗೆ ನುಗ್ಗಿ, ಭಾರೀ ಅವಾಂತರಕ್ಕೆ ಕಾರಣವಾಗಿತ್ತು.

ಇದೀಗ ಎರಡನೇ ಬಾರಿಗೆ ಕಚೇರಿಗೆ ನುಗ್ಗಿ ಮತ್ತೆ ಅವಾಂತರಕ್ಕೆ ಕಾರಣವಾಗಿದೆ. ಕಚೇರಿಯಲ್ಲಿ ಮೂರುನಾಲ್ಕು ಅಡಿ ನೀರು ತುಂಬಿದ್ದು, ಹೊರಹಾಕಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಪಟ್ಟಣದಲ್ಲಿನ ಕೆಲ ಸರ್ಕಾರಿ ಇಲಾಖೆಗಳ ಕಚೇರಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಅಧಾರದಲ್ಲಿವೆ.

ಕಾರ್ಮಿಕ, ಮೀನುಗಾರಿಕೆ, ಮಕ್ಕಳ ಮತ್ತು ಶಿಶು ಅಭಿವೃದ್ಧಿ, ರೇಷ್ಮೆ, ಅಕ್ಷರ ದಾಸೋಹ ಇಲಾಖೆ ಸೇರಿವೆ. ಈ ಬಗ್ಗೆ ತಾಲೂಕು ಆಡಳಿತ ಬಾಡಿಗೆ ಆಧಾರದ ಮೇಲೆ ಇರುವ ಸರ್ಕಾರಿ ಕಚೇರಿಗಳಿಗೆ ಶಾಶ್ವತ, ಸ್ವಂತ ಕಟ್ಟಡ ದೊರಕಿಸಿಕೊಡುವಲ್ಲಿ ಮುಂದಾಗುವುದೇ ಎಂದು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next