ಬಾಗಲಕೋಟೆ: ದೇಶದ ಎರಡನೇ ಅತಿದೊಡ್ಡ ತೋಟಗಾರಿಕೆ ವಿಶ್ವ ವಿದ್ಯಾಲಯಕ್ಕೆ ನೀರಿನ ತೀವ್ರ ಬರ ಎದುರಾಗಿದೆ. ಕಳೆದ ಹತ್ತು ವರ್ಷಗಳಿಂದ ಈ ಸಮಸ್ಯೆ ಪರಿಹಾರಕ್ಕೆ ವಿವಿ ಅಧಿಕಾರಿಗಳು ನಡೆಸಿದ ಪ್ರಯತ್ನ ಸಫಲವಾಗಿಲ್ಲ. ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ, ಪ್ರಧಾನ ಆಡಳಿತ ಕಚೇರಿ, ವಿದ್ಯಾರ್ಥಿಗಳ ವಸತಿ ನಿಲಯ ಹೀಗೆ ವಿವಿಧೆಡೆ ಬಳಕೆಗೆ ನೀರೇ ಇಲ್ಲ. ನಿತ್ಯವೂ ನೀರಿನ ವ್ಯವಸ್ಥೆಗಾಗಿ ವಿವಿಯ ಅಧಿಕಾರಿಗಳು ಪರದಾಡುತ್ತಾರೆ. ಹನಿ ನೀರನ್ನೂ ಪೋಲಾಗದಂತೆ ನೋಡಿಕೊಂಡರೂ ಸಾಕಾಗುತ್ತಿಲ್ಲ. ಕಾರಣ ಇಡೀ ವಿವಿಗೆ ಇರುವುದು ಒಂದೇ ಕೊಳವೆ ಬಾವಿ. ಅದರಲ್ಲೂ ಈಚೆಗೆ ನೀರು ಕಡಿಮೆಯಾಗಿದೆ.
ಅಲ್ಲದೇ ನವನಗರದ 72ನೇ ಸೆಕ್ಟರ್‌ನಲ್ಲಿ ಒಂದು ಕೊಳವೆ ಬಾವಿ ಕೊರೆಸಿ, ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ವಿವಿವರೆಗೆ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಈ ಎರಡೂ ಕೊಳವೆ ಬಾವಿಯ ನೀರು, ವಿವಿಯ ಎಲ್ಲ ಕಾರ್ಯನಿರ್ವಹಣೆಗೆ ಸಾಕಾಗುತ್ತಿಲ್ಲ. ನಮಗೆ ನೀರು ಕೊಡಿ ಎಂದು ವಿವಿಯ ಈ ಹಿಂದಿನ ಇಬ್ಬರು ಕುಲಪತಿಗಳು, ಹಾಲಿ ಪ್ರಭಾರಿ ಕುಲಪತಿ ಕೂಡ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ.
ದಶಕ ಕಳೆದರೂ ಈಡೇರಿಲ್ಲ: ಇನ್ನು ಮುಳುಗಡೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಮೀಸಲಾಗಿಟ್ಟಿದ್ದ 300 ಎಕರೆ ಭೂಮಿಯನ್ನು ನೀಡಿ ತೋಟಗಾರಿಕೆ ವಿವಿಯನ್ನು ಸ್ಥಾಪಿಸಲಾಗಿತ್ತು. ಆರಂಭದಲ್ಲಿ ರಾಜ್ಯದ 30 ಜಿಲ್ಲೆಗಳೂ ಈ ವಿವಿ ವ್ಯಾಪ್ತಿಯಲ್ಲಿದ್ದವು. ಬಳಿಕ ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿ ಆರಂಭಿಸಿದ ಬಳಿಕ ಏಳು ಜಿಲ್ಲೆಗಳನ್ನು ಆ ವಿವಿ ವ್ಯಾಪ್ತಿಗೆ ನೀಡಲಾಗಿದೆ. 10 ವರ್ಷಗಳ ಹಿಂದೆ ಆರಂಭಗೊಂಡ ಈ ವಿವಿಗೆ ಈವರೆಗೂ ಮೂಲ ಸೌಲಭ್ಯಗಳೇ ಇಲ್ಲ.
ಮುಖ್ಯವಾಗಿ ಒಂದು ವಿವಿಗೆ 750 ಎಕರೆ ಭೂಮಿ ಬೇಕು. ಈಗ ಕೇವಲ 300 ಎಕರೆ ಭೂಮಿ ಇದೆ. ಅದರಲ್ಲಿ ಸುಮಾರು 125 ಎಕರೆಯಷ್ಟು ವಿವಿಧ ಸಂಶೋಧನಾ, ಆಡಳಿತಾತ್ಮಕ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗಿದೆ. ಉಳಿದ 175 ಎಕರೆಯಷ್ಟು ಭೂಮಿಯಲ್ಲಿ ವಿವಿಯ ವಿಜ್ಞಾನಿಗಳು, ಪ್ರಾಧ್ಯಾಪಕರು ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ ಕೈಗೊಳ್ಳುತ್ತಾರೆ. ಬಾಗಲಕೋಟೆ ತಾಲೂಕಿನ ತುಳಸಿಗೇರಿ ಬಳಿ ಅರಣ್ಯ ಇಲಾಖೆಗೆ ಸೇರಿದ 800 ಎಕರೆ ಹಾಗೂ ಬಾದಾಮಿ ತಾಲೂಕು ಹಾಲಿಗೇರಿ ಬಳಿ ಸರ್ಕಾರಿ ಒಡೆತನದ 700 ಎಕರೆ ಭೂಮಿ ಗುರುತಿಸಲಾಗಿದೆ. ಅದರಲ್ಲಿ ತುಳಸಿಗೇರಿ ಬಳಿಯ ಭೂಮಿ, ವಿವಿಯ ಮುಖ್ಯ ಆವರಣಕ್ಕೆ ಸಮೀಪವಿದೆ. ಹಾಲಿಗೇರಿ ಭೂಮಿಗಿಂತ ಫಲವತ್ತಾಗಿದೆ. ಹೀಗಾಗಿ ತುಳಸಿಗೇರಿ ಬಳಿಯ ಭೂಮಿ ಮಂಜೂರು ಮಾಡಿ ಎಂದು ಹಲವು ವರ್ಷದಿಂದ ವಿವಿ ಕೇಳಿದ್ದರೂ ಈಡೇರಿಲ್ಲ.
ಶೇ.50ರಷ್ಟು ಸಿಬ್ಬಂದಿ ಇಲ್ಲ: ಈ ವಿವಿ ವ್ಯಾಪ್ತಿಯಲ್ಲಿ 9 ತೋಟಗಾರಿಕೆ ಕಾಲೇಜು, 10 ಸಂಶೋಧನಾ ಕೇಂದ್ರಗಳು, 11 ತೋಟಗಾರಿಕೆ ವಿಸ್ತರಣಾ ಘಟಕಗಳಿವೆ. ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ವಿವಿಧ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಶೇ.50ರಷ್ಟು ಸಿಬ್ಬಂದಿ ಕೊರತೆಯಿದೆ. ವಿವಿಗೆ ಒಟ್ಟು ಸುಮಾರು 480 ವಿವಿಧ ಸಿಬ್ಬಂದಿ ಮಂಜೂರಾಗಿದ್ದು, ಈ ಪೈಕಿ 220 ಜನ ಮಾತ್ರ ಸೇವೆಯಲ್ಲಿದ್ದಾರೆ. ಉಳಿದ ಸಿಬ್ಬಂದಿಯನ್ನು ಸರ್ಕಾರ ನೇಮಕವೇ ಮಾಡಿಲ್ಲ. ಹೀಗಾಗಿ ತೋಟಗಾರಿಕೆ ವಿವಿಗೆ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಕಳೆದ 10 ವರ್ಷ ಗಳಿಂದಲೂ ಕಾಡುತ್ತಿದೆ. ಇದು ವಿವಿ ಸ್ಥಾಪನೆಯ ಮೂಲ ಉದ್ದೇಶಕ್ಕೆ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ.
ತೋಟಗಾರಿಕೆ ವಿವಿಗೆ ಸುಮಾರು 480 ವಿವಿಧ ಸಿಬ್ಬಂದಿ ಮಂಜೂರಾಗಿದೆ. ಅದರೀಗ 220 ಸಿಬ್ಬಂದಿ ಇದ್ದಾರೆ.ಸಿಬ್ಬಂದಿ ಕೊರತೆ ಇದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಡಾ| ವೈ.ಕೆ. ಕೋಟಿಕಲ್,
ವಿಸ್ತರಣೆ ನಿರ್ದೇಶಕ,
ತೋಟಗಾರಿಕೆ ವಿಶ್ವವಿದ್ಯಾಲಯ
ವಿವಿಗೆ ನೀರು ಮತ್ತು ಭೂಮಿಯ ಕೊರತೆ ತೀವ್ರವಾಗಿದೆ. ಬಾದಾಮಿ ತಾಲೂಕು ಹಾಲಿಗೇರಿ ಮತ್ತು ಬಾಗಲಕೋಟೆ ತಾಲೂಕು ತುಳಸಿಗೇರಿ ಬಳಿ ಭೂಮಿ ಗುರುತಿಸಲಾಗಿದೆ. ತುಳಸಿಗೇರಿ ಬಳಿ ಇರುವ ಭೂಮಿ ಸೂಕ್ತವಾಗಿದೆ. ಈ 800 ಎಕರೆ ಭೂಮಿ ಅರಣ್ಯ ಇಲಾಖೆಯಡಿ ಇದ್ದು, ಮಂಜೂರಾತಿಗೆ ಹಿನ್ನಡೆಯಾಗಿದೆ. ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈ ಬಾರಿಯ ತೋಟಗಾರಿಕೆ ಮೇಳಕ್ಕೆ ಮುಖ್ಯಮಂತ್ರಿಗಳು ಬರಲಿದ್ದು, ಅವರಿಗೂ ಮತ್ತೊಮ್ಮೆ ಪ್ರಸ್ತಾವನೆ ಕೊಡುತ್ತೇವೆ.
ಡಾ| ಕೆ.ಎಂ. ಇಂದಿರೇಶ,
ಪ್ರಭಾರಿ ಕುಲಪತಿ, ತೋಟಗಾರಿಕೆ ವಿವಿ
ಶ್ರೀಶೈಲ ಕೆ. ಬಿರಾದಾರ