ಮಾಸ್ತಿ: ಗ್ರಾಪಂ ವ್ಯಾಪ್ತಿಯ ಬಿಟ್ನಹಳ್ಳಿ ಗ್ರಾಮದ ಬಳಿಯ ಹಳೆಬಾವಿಯಲ್ಲಿ ನೀರು ಉಕ್ಕಿದ ಮಾದರಿಯಲ್ಲಿ ಭೂಮಿ ಮೇಲೂ ನೀರು ಜಿನುಗುತ್ತಿದ್ದು, ಈ ಭಾಗದ ಜನರಲ್ಲಿ ಕುತೂಹಲ ಮೂಡಿಸಿದೆ.
ಹೋಬಳಿಯಲ್ಲಿ ಯಾವುದೇ ನದಿ ನಾಲೆಗಳಿಲ್ಲ, ಕೆಲವು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೆ, ಕೆರೆ, ಕೊಳವೆ ಬಾವಿ ಬತ್ತಿ ಹೋಗಿ ಬರ ಆವರಿಸಿದೆ. ತಾಲೂಕು ಸೇರಿ ಮಾಸ್ತಿ ಭಾಗದಲ್ಲಿ 1500 ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ, ಬಿಟ್ನಹಳ್ಳಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಬೋರ್‌ವೆಲ್ ಗಳಿವೆ. ಅವುಗಳಲ್ಲೂ ಅಲ್ಪ ಸ್ವಲ್ಪ ನೀರು ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ
ಗೋಮಾಳದ ಹಳೆಬಾವಿಯಲ್ಲಿ ನೀರು ಉಕ್ಕಿದ್ದ ಮಾದರಿಯಲ್ಲಿ ಭೂಮಿ ಮೇಲೆ ನೀರು ಜಿನುಗುತ್ತಿರುವುದು ಕುತೂಹಲ ಮೂಡಿಸಿದೆ.
ಮಾಸ್ತಿ ಗ್ರಾಪಂ ವ್ಯಾಪ್ತಿಯ ಬಿಟ್ನಹಳ್ಳಿ ಗ್ರಾಮವು ಕಲ್ಲು ಬಂಡೆಗಳಿಂದ ಕೂಡಿದೆ. ಗ್ರಾಮದ ಸರ್ಕಾರಿ ಗೋಮಾಳದ ಜಮೀನಿನಲ್ಲಿ ಕಲ್ಯಾಣಿ, ಗೋಕುಂಟೆ ಸೇರಿ ದೊಡ್ಡಬಾವಿ, ಶ್ರೀವನ ಗಂಗಮ್ಮ ದೇಗುಲ ಇದ್ದು, ಕೂಗಳತೆ ದೂರದಲ್ಲಿ ಮುಚ್ಚಿರುವ ಬಾವಿಯಲ್ಲಿ ನೀರು ಕಾಣಿಸಿಕೊಂಡಿದೆ.
ಮೊದಲು ಬಾವಿ ಇತ್ತು: ಗ್ರಾಮದ ಹಿರಿಯರು ಹೇಳುವ ಪ್ರಕಾರ ಇಲ್ಲಿ ಹಿಂದೆ 15 ಅಡಿಗಳಷ್ಟು ಬಾವಿ ಇತ್ತು. ಬಾವಿ ನೀರನ್ನು ಕುಡಿಯಲು ಉಪಯೋಗಿಸಲಾಗುತ್ತಿತ್ತು. ಬರಗಾಲ ಆವರಿಸಿದ್ದರಿಂದ ನೀರು ಖಾಲಿಯಾಗಿ, ಬಾವಿ ಮುಚ್ಚಿ ಹೋಗಿತ್ತು. ಈಗ ನೀರು ಉದ್ಬವಿಸುತ್ತಿರುವುದು ಆಶ್ಚರ್ಯ ತಂದಿದೆ. ಹೂಳೆತ್ತಿದರೆ ಮತ್ತಷ್ಟು ನೀರು ಸಿಗುವ ಸಾಧ್ಯತೆ ಇದ್ದು, ದನ ಕರುಗಳಿಗೆ, ನವಿಲು, ಜಿಂಕೆಗಳಿಗೆ ಅನುಕೂಲವಾಗಲಿದೆ.
ಹೂಳೆತ್ತಲು ಕ್ರಮ:ವಿಷಯ ತಿಳಿದ ಮಾಸ್ತಿ ಗ್ರಾಪಂ ಪಿಡಿಒ ಕಾಶೀನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಬಿಟ್ನಹಳ್ಳಿ ಗ್ರಾಮದ ಬಳಿ ಮುಚ್ಚಿಹೋಗಿದ್ದ ಹಳೇಬಾವಿ ಜಾಗದಲ್ಲಿ 3 ರಿಂದ 4 ಅಡಿಗಳಲ್ಲಿ ನೀರು ಕಾಣಿಸಿಕೊಂಡಿದೆ. ಹೂಳೆತ್ತಲು ಕ್ರಮ ಕೈಗೊಂಡು, ನೀರು ಸಂಗ್ರಹಿಸಿ, ಕನಿಷ್ಠ ದನ ಕರಿಗಾದ್ರೂ ಅನುಕೂಲ ಕಲ್ಪಿಸಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಎಚ್.ವಿ.ಸತೀಶ್, ಸದಸ್ಯೆ ರತ್ನಮ್ಮ ಕೆಂಪಣ್ಣ, ಶಿವಕುಮಾರ್, ಬಿ.ಎ.ಸುರೇಶ್, ಸಂಪಂಗಿ, ಶ್ರೀನಿವಾಸ್, ಮುನಿರಾಜು ಯಲ್ಲಪ್ಪ, ಮರೆಪ್ಪ ಇದ್ದರು.