Advertisement

ಹೇಮೆ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸಿ

01:52 PM Jul 23, 2019 | Suhan S |

ಕೆ.ಆರ್‌.ಪೇಟೆ: ಹೇಮಾವತಿ ಜಲಾಶಯದಿಂದ ಕೆ.ಆರ್‌.ನಗರ ಮತ್ತು ಹೊಳೆನರಸೀಪುರ ತಾಲೂಕಿನ ನಾಲೆಗಳಿಗೆ ನೀರು ಹರಿಸುತ್ತಿರುವ ಮಾದರಿಯಲ್ಲಿ ತಾಲೂಕಿನ ತಾಲೂಕಿನ ನದಿ, ನಾಲೆಗಳಿಗೆ ನೀರು ಹರಿಸದಿದ್ದರೆ ನೀರಾವರಿ ಇಲಾಖೆ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮ್ಮಿಕೊಳ್ಳಬೇಕಾಗುತ್ತದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್‌ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಇಇ ಬಾಲಕೃಷ್ಣ ಅವರಿಗೆ ರೈತ ಮುಖಂಡ ರಾಜೇಗೌಡರ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿ ಮಾತನಾಡಿದರು.

ನೀರು ಹರಿಸಿ ಬೆಳೆ ರಕ್ಷಿಸಿ: ತಾಲೂಕಿನಲ್ಲಿರುವ ಹೇಮಾವತಿ ಅಚ್ಚುಕಟ್ಟು ನಾಲೆಗಳಾದ ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಹಾಗೂ ಅಕ್ಕಿಹೆಬ್ಟಾಳು ನಾಲಾ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ತೆಂಗು, ಬಾಳೆ, ಅಡಿಕೆ ಮುಂತಾದ ಬೆಳೆಗಳು ಬೆಳೆದು ನಿಂತಿದೆ. ಜೂನ್‌ ತಿಂಗಳ ಅಂತ್ಯಕ್ಕೆ ಬಂದರೂ ನೀರಾವರಿ ಇಲಾಖೆ ಈ ನಾಲೆಗಳ ಮುಖಾಂತರ ನೀರು ಹರಿಸಿ ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ಕ್ರಮ ವಹಿಸಿಲ್ಲ.

ಮಲತಾಯಿ ಧೋರಣೆ: ಕೆಆರ್‌ಎಸ್‌ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳ ಸಂರಕ್ಷಣೆಗೆ ನೀರು ಹರಿಸುವ ನೀರಾವರಿ ಇಲಾಖೆ, ಹೇಮಾವತಿ ಅಚ್ಚುಕಟ್ಟು ಪ್ರದೇಶದ ಬೆಳೆ ರಕ್ಷಣೆಗೆ ಮುಂದಾಗದೆ ಮಲತಾಯಿ ಧೋರಣೆ ಪ್ರದರ್ಶಿಸಿದೆ. ಹೇಮಾವತಿ ಅಚ್ಚುಕಟ್ಟು ಪ್ರದೇಶದ ರೈತರು ರೈತರಲ್ಲವೆ? ಇವರಿಂದ ನೀರಿನ ತೆರಿಗೆ ಮತ್ತು ಕಂದಾಯ ವಸೂಲಾತಿ ಮಾಡುತ್ತಿಲ್ಲವೆ? ಎಂದು ಪ್ರಶ್ನಿಸಿ, ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳು ಮಳೆಗಾಲದಲ್ಲಿ ಹರಿಯುವ ನದಿ ನೀರನ್ನು ಅವಲಂಭಿಸಿವೆ. ನೀರಾವರಿ ಇಲಾಖೆ ರೈತರ ನೀರನ್ನು ಹಕ್ಕನ್ನು ಕಸಿದುಕೊಂಡಿದೆ.

1 ಸಾವಿರ ಕ್ಯೂಸೆಕ್‌ ಹರಿಸಿ ಸಾಕು: ನದಿ ನೀರನ್ನು ಅಚ್ಚುಕಟ್ಟು ಪ್ರದೇಶದಲ್ಲಿ ತಡೆ ಹಿಡಿರುವುದರಿಂದ ಅಣೆಕಟ್ಟು ಪ್ರದೇಶದ ಕೆಳಭಾಗದಲ್ಲಿ ನದಿ ಬತ್ತಿ ಹೋಗಿದ್ದು, ಕುಡಿಯುವ ನೀರಿಗೂ ಜನಜಾನುವಾರು ಪರದಾಡುತ್ತಿವೆ. ನದಿಯಲ್ಲಿನ ಜಲಚರಗಳು ನೀರಿಲ್ಲದೆ ಸಾಯುತ್ತಿವೆ. ಹೇಮಾವತಿ ನದಿಗೆ ಕೂಡಲೇ 1 ಸಾವಿರ ಕ್ಯೂಸೆಕ್‌ ನೀರು ಹರಿಸಿ ರೈತರ ಬೆಳೆ ರಕ್ಷಣೆಗೆ ಮುಂದಾಗಬೇಕು. ಮುಖ್ಯ ನಾಲೆಯಲ್ಲೂ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕೆಂದು ಒತ್ತಾಸಿದ ಅವರು ನೀರು ಹರಿಸದಿದ್ದರೆ ರೈತಸಂಘ ನೀರು ಬಿಡುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ತಾಲೂಕು ರೈತಸಂಘದ ಮಾಜಿ ಅಧ್ಯಕ್ಷ ನಾಗೇಗೌಡ, ರೈತಮುಖಂಡರಾದ ಮಡುನಕೋಡಿ ಪ್ರಕಾಶ್‌, ಮಾಕವಳ್ಳಿ ರವಿ, ಹೊನ್ನೇಗೌಡ, ಚೌಡೇನಹಳ್ಳಿ ಕೃಷ್ಣೇಗೌಡ, ಕರೋಟಿ ತಮ್ಮಯ್ಯ, ಕಾರಿಗನಹಳ್ಳಿ ಪುಟ್ಟೇಗೌಡ ಮತ್ತಿತರರು ಹಾಜರಿದ್ದರು.

Advertisement

ಒಣಗಿದ ಬೆಳೆಗಳಿಗೆ ಪರಿಹಾರ ಕೊಡಿ

ಮಂಡ್ಯ: 39ನೇ ವರ್ಷದ ರೈತರ ಹುತಾತ್ಮರ ದಿನಾಚರಣೆ ಅಂಗವಾಗಿ ಒಣಗಿದ ಬೆಳೆಗೆ ವೈಜ್ಞಾನಿಕ ಪರಿಹಾರ ಬಿಡುಗಡೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಸೋಮವಾರ ರಾಜ್ಯ ರೈತ ಸಂಘ(ಮೂಲ ಸಂಘಟನೆ)ದ ಕಾರ್ಯಕರ್ತರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸಿದ ಕಾರ್ಯಕರ್ತರು ಬಳಿಕ ಅಲ್ಲಿಯೇ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿದರು. ಪರಿಣಾಮ, ಕೆಲ ಸಮಯ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಸಕ್ಕರೆ ಕಾರ್ಖಾನೆಗಳು ಪ್ರಾರಂಭಿಸಿ: ಸತತ ಬರಗಾಲದಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಾರಿಯೂ ಸರಿಯಾದ ಸಮಯಕ್ಕೆ ನೀರು ಬಿಡದ ಕಾರಣ ಬೆಳೆದು ನಿಂತ ಬೆಳೆ ಒಣಗಿ ಹೋಗಿದೆ. ಆದ್ದರಿಂದ, ಕೂಡಲೇ ಬೆಳೆಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಸಕ್ಕರೆ ಕಾರ್ಖಾನೆಗಳು ಕೊಡಬೇಕಾಗಿರುವ ಬಾಕಿ ಹಣವನ್ನು ಶೀಘ್ರದಲ್ಲಿ ಪಾವತಿಸಲು ಕ್ರಮ ವಹಿಸಬೇಕು. ಮೈಷುಗರ್‌ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಕೂಡಲೇ ಪ್ರಾರಂಭಿಸಬೇಕು. ಪ್ರಮುಖವಾಗಿ ಡಾ.ಸ್ವಾಮಿನಾಥನ್‌ ವರದಿಯ ಶಿಫಾರಸ್ಸನ್ನು ಅನುಷ್ಠಾನಕ್ಕೆ ತಂದು ಕಬ್ಬು, ರೇಷ್ಮೆ, ಬಾಳೆ ಮುಂತಾದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಅಕ್ರಮ ಗಣಿಗಾರಿಕೆ ನಿಲ್ಲಿಸಿ: ರೈತ ವಿರೋಧಿಯಾಗಿರುವ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಕೈಬಿಡಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಕ್ರಮ ವಹಿಸಬೇಕು. ಮದ್ದೂರು ತಾಲೂಕಿನ ಆತಗೂರು ಹೋಬಳಿ ಯಲ್ಲಿ ಜಮೀನಿನ ರೀ ಸರ್ವೆಯಲ್ಲಿ ಆಗಿರುವ ಗೊಂದಲ ನಿವಾರಣೆಗೆ ಭೂ ದಾಖಲೆ ತಜ್ಞರ ಸಮಿತಿ ರಚಿಸಬೇಕು. ಜಿಲ್ಲೆಯಲ್ಲಿ ಎಲ್ಲ ಕೆರೆಕಟ್ಟೆಗಳ ಹೂಳು ತೆಗೆಸಬೇಕು. ಹಾಲಿನ ದರ ಕುಸಿದಿದ್ದು, ಲೀಟರ್‌ಗೆ 30 ರೂ. ಬೆಲೆ ನಿಗದಿ ಮಾಡಬೇಕು. ರೇಷ್ಮೆಗೂಡಿನ ಬೆಲೆಯೂ ಕುಸಿತವಾಗಿದ್ದು, ಪ್ರೋತ್ಸಾಹ ಧನವನ್ನು ಕೆಜಿಗೆ 50 ರೂ. ಹೆಚ್ಚಿಸಬೇಕು. ಹಾಗೂ ಡಾ.ಬಸವರಾಜು ವರದಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಇಂಡುವಾಳು ಚಂದ್ರಶೇಖರ್‌, ಹೆಮ್ಮಿಗೆ ಚಂದ್ರ ಶೇಖರ್‌, ಇಂಡುವಾಳು ಬಸವರಾಜು, ಸಿ.ಸ್ವಾಮಿಗೌಡ, ಕೆ.ನಾಗೇಂದ್ರ, ಕೆ.ರಾಮಲಿಂಗೇಗೌಡ, ಸೊ.ಶಿ.ಪ್ರಕಾಶ್‌ ಸೊಳ್ಳೇಪುರ, ಕೆ.ಜಿ.ಉಮೇಶ್‌, ಜೆ.ದಿನೇಶ್‌, ಶೇಖರ್‌, ಶ್ರೀಕಂಠಯ್ಯ, ವೈ.ಕೆ.ರಾಮೇಗೌಡ, ಸಿ.ರಮೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next