Advertisement

ಜಲ ವಿವಾದ: ವಕೀಲರ ಜತೆ ಎಂ.ಬಿ.ಪಾಟೀಲ್‌ ಚರ್ಚೆ

08:20 AM Sep 26, 2017 | |

ಬೆಂಗಳೂರು: ರಾಜ್ಯದ ಕಾವೇರಿ ಹಾಗೂ ಮಹದಾಯಿ ಜಲ ವಿವಾದಗಳ ಮುಂದಿನ ನಡೆ ಕುರಿತು ಸುಪ್ರೀಂಕೋರ್ಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಕೀಲರ ತಂಡದೊಂದಿಗೆ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಚರ್ಚೆ ನಡೆಸಿದರು.

Advertisement

ದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಸಭೆಯಲ್ಲಿ ಕಾವೇರಿ ವಿವಾದ ಕುರಿತು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ವಾದ ವಿವಾದ ಮುಕ್ತಾಯವಾಗಿದ್ದು, ಸುಪ್ರೀಂಕೋರ್ಟ್‌ ರಾಜ್ಯಗಳಿಗೆ ಅಭಿಪ್ರಾಯ ಸಲ್ಲಿಸಲು 15 ದಿನ ಕಾಲಾವಕಾಶ ನೀಡಿದ್ದು, ರಾಜ್ಯ ಸರ್ಕಾರ ರಾಜ್ಯದ ಹಿತದೃಷ್ಠಿಯಿಂದ ಯಾವ ಅಂಶಗಳನ್ನು ಸುಪ್ರೀಂಕೋರ್ಟ್‌ಗೆ ನೀಡಬೇಕೆಂಬ ಮಾಸ್ಟರ್‌ ನೋಟ್‌ ಸಿದ್ಧಪಡಿಸುವ ಕುರಿತು
ಚರ್ಚಿಸಿದರು. ನಂತರ ರಾಜ್ಯ ವಕೀಲರ ತಂಡದ ಮುಖ್ಯಸ್ಥ ಫಾಲಿ ಎಸ್‌. ನಾರಿಮನ್‌ ಅವರ ನಿವಾಸಕ್ಕೆ ತೆರಳಿ ಅವರೊಂದಿಗೂ ಸಮಾಲೋಚನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ವಿಚಾರಣೆ ಮುಕ್ತಾಯವಾಗಿದೆ. ಲಿಖೀತ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಬೇಕಿದ್ದು, 9 ಅಂಶಗಳನ್ನು ಸಲ್ಲಿಸಲು ತೀರ್ಮಾನಿಸಲಾಗಿದೆ. ಯಾವ ಅಂಶಗಳನ್ನು ಸೇರಿಸಬೇಕೆಂದು ವಕೀಲರ ತಂಡದೊಂದಿಗೆ ಚರ್ಚಿಸಲಾಗಿದ್ದು, ಗೌಪ್ಯವಾಗಿಡಲಾಗಿದೆ’ ಎಂದರು.

“ಮಹದಾಯಿ ನೀರು ಹಂಚಿಕೆ ವಿಚಾರವಾಗಿಯೂ ಚರ್ಚೆ ಮಾಡಲಾಗಿದ್ದು, ರಾಜ್ಯ ಸರ್ಕಾರದ ಮುಂದಿನ ಹೋರಾಟ ಹೇಗಿರಬೇಕೆಂದು ನಾರಿಮನ್‌ ಜತೆ ಚರ್ಚಿಸಿ ನಿರ್ಧರಿಸಲಾಗಿದೆ. ಕೆಲವು ಸೂಕ್ಷ್ಮ ವಿಚಾರಗಳನ್ನು ಬಹಿರಂಗಗೊಳಿಸಲು ಆಗುವುದಿಲ್ಲ’ ಎಂದು ಎಂ.ಬಿ. ಪಾಟೀಲ್‌ ಹೇಳಿದರು. 

ಕಾವೇರಿ ನಿರ್ವಹಣಾ ಮಂಡಳಿಗೆ ಕಸಾಪ ವಿರೋಧ 
ಉಳ್ಳಾಲ:
ಉದ್ದೇಶಿತ ಕಾವೇರಿ ನಿರ್ವಹಣಾ ಮಂಡಳಿಯನ್ನು ವಿರೋಧಿಸುವ ತೀರ್ಮಾನವನ್ನು ಕಸಾಪ ವಾರ್ಷಿಕ ಅಧಿವೇಶನ ಕೈಗೊಂಡಿದೆ. ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ 101ನೇ ವಾರ್ಷಿಕ ಮಹಾ ಅಧಿವೇಶನದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಅಧ್ಯಕ್ಷ ಡಾ| ಮನು ಬಳಿಗಾರ್‌ ಈ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತಾವಿತ ಮಂಡಳಿಯು ರಾಜ್ಯದ ರೈತರ ಹಿತಾಸಕ್ತಿಗೆ ಮಾರಕವಾಗಿದೆ. ಆದ್ದರಿಂದ ಈ ಪ್ರಸ್ತಾವವನ್ನು ರಾಜ್ಯ ಸರಕಾರ ವಿರೋಧಿಸಬೇಕು ಎಂದು ಒತ್ತಾಯಿಸಬೇಕು ಎನ್ನುವ ರಾಮನಗರದ ಸದಸ್ಯ ಶಿವಕುಮಾರ್‌ ಸಲಹೆಯನ್ನು ಸಭೆ ಅಂಗೀಕರಿಸಿತು ಎಂದು ಅವರು ತಿಳಿಸಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next