Advertisement

ಧಾರ್ಮಿಕ ಕ್ಷೇತ್ರಗಳಲ್ಲಿ ನೀರಿನ ಅಭಾವ

12:52 AM May 19, 2019 | Sriram |

ಬೆಳ್ತಂಗಡಿ: ಬರದಿಂದ ಎಲ್ಲೆಡೆ ನೀರಿನ ಅಭಾವ ಸೃಷ್ಟಿಯಾಗಿರುವ ನಡುವೆಯೇ ಬೇಸಗೆ ರಜೆಯೂ ಬಂದಿರುವುದರಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ನೀರಿನ ಅಭಾವ ತಲೆದೋರಿದೆ.

Advertisement

ಕಳೆದ 20 ವರ್ಷಗಳ ಅವಧಿಯಲ್ಲೇ ಮೊದಲ ಬಾರಿಗೆ ನೇತ್ರಾವತಿಯ ಉಪ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಧರ್ಮಸ್ಥಳ ಕ್ಷೇತ್ರದಲ್ಲೂ ಕೊಂಚ ನೀರಿನ ಕೊರತೆ ತಲೆದೋರಿದೆ.

ಈ ಹಿನ್ನೆಲೆಯಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಶನಿವಾರ ಪತ್ರಕರ್ತರೊಂದಿಗೆ ಮಾತ ನಾಡಿ, ಮಕ್ಕಳೊಂದಿಗೆ ಕ್ಷೇತ್ರ ದರ್ಶನ ಪಡೆಯಲು ಬರುವ ಭಕ್ತರು ಬಿಸಿಲಿನ ಧಗೆಯಿಂದ ವಿಪರೀತ ತೊಂದರೆ ಗೊಳಗಾಗುತ್ತಿದ್ದಾರೆ. ಕ್ಷೇತ್ರದಿಂದ ಭಕ್ತರಿಗೆ ನೀಡುವ ಅನುಕೂಲಗಳಲ್ಲಿ ತೊಂದರೆ ಯಾಗಬಾರದು ಎನ್ನುವ ದೃಷ್ಟಿಯಿಂದ ಸಾಧ್ಯ ವಾದರೆ ಪ್ರವಾಸಿಗರು ಕೆಲವು ವಾರಗಳ ಕಾಲ ಕ್ಷೇತ್ರ ದ‌ರ್ಶನ ಮುಂದೂಡಿ ಎಂದು ವಿನಂತಿಸಿದ್ದೇನೆ ಎಂದರು.

ಭಕ್ತರಿಗೆ ಅನುಕೂಲ ಒದಗಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಆದರೆ ಪ್ರಕೃತಿಯನ್ನು ಮೀರುವ ಶಕ್ತಿ ನಮ್ಮಲ್ಲಿಲ್ಲ. ಇದನ್ನರಿತು ಎಲ್ಲರೂಸಹಕರಿಸಬೇಕು. ಪ್ರಕೃತಿ ಮತ್ತು ಜನಜೀವನದ ನಡುವೆ ಸಣ್ಣ ಪೈಪೋಟಿ ನಡೆಯುತ್ತಿದೆ.

ನೀರಿನ ಆವಶ್ಯಕತೆ ಮತ್ತು ಕೊರತೆ
ಎರಡೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ವರ್ಷಗಳಲ್ಲಿ ಮೂರು ತಿಂಗಳ ಹಿಂದೆಯೇ ನೀರಿನ ಬಳಕೆ ಯಲ್ಲಿ ಜಾಗರೂಕರಾಗಬೇಕು. ದೊಡ್ಡ ಮಟ್ಟದ ಕೃಷಿಕರು ಹನಿ ನೀರಾವರಿ, ಒಡ್ಡು ನಿರ್ಮಾಣ ಮೂಲಕ ನೀರಿನ ಬಳಕೆ ಹತೋಟಿಯಲ್ಲಿಡುವಂತೆ ಸಲಹೆ ನೀಡಿದರು.

Advertisement

32 ಲಕ್ಷ ಲೀ. ನೀರಿನ ಅಗತ್ಯ
ಧರ್ಮಸ್ಥಳದಲ್ಲಿ ವಸತಿಗೃಹ, ಅಡುಗೆಗೆ, ಸಾರ್ವಜನಿಕ ಶೌಚಾಲಯ ಸೇರಿದಂತೆ ನಿತ್ಯ ಬಳಕೆಗೆ ಸಾಮಾನ್ಯ ವಾಗಿ ಪ್ರತಿ ನಿತ್ಯ 25ರಿಂದ 28 ಲಕ್ಷ ಲೀ. ನೀರು ಅಗತ್ಯವಿದೆ. ಆದರೆ ಪ್ರಸ್ತುತ ಬಳಕೆಗೆ 32 ಲಕ್ಷ ಲೀ. ನೀರಿನ ಬೇಡಿಕೆ ಇದೆ. ನೇತ್ರಾವತಿ ಸ್ನಾನಘಟ್ಟದ ಬಳಿ ಕಿಂಡಿ ಅಣೆಕಟ್ಟಿನಿಂದ ನೀರು ಬಳಸಲಾ ಗುತ್ತಿದ್ದು, 4 ಕೊಳವೆ ಬಾವಿಗಳನ್ನು ಆಶ್ರಯಿಸಿದೆ. ಈಗಾಗಲೇ ವಸತಿಗೃಹ ಸೇರಿದಂತೆ ಅವಶ್ಯ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ ಎಂದು ಕ್ಷೇತ್ರದಿಂದ ತಿಳಿಸಲಾಗಿದೆ.

ಶನಿವಾರ
35 ಸಾವಿರ ಭಕ್ತರು
ಕ್ಷೇತ್ರದಲ್ಲಿ ಶನಿವಾರ 30ರಿಂದ 35 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಮೇ 19, ರವಿವಾರ ರಜೆಯಾದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವಸಾಧ್ಯತೆ ಇದೆ. ಡಾ| ಹೆಗ್ಗಡೆ ಮನವಿ ವಿಚಾರ ವಾಗಿ ಭಕ್ತರು ದೇವಸ್ಥಾನಕ್ಕೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಕ್ಷೇತ್ರದ ವತಿಯಿಂದ ಈಗಾಗಲೇ ಮುಂಗಡವಾಗಿ ದಿನಾಂಕ ನಿಗದಿ ಮಾಡುವ ಭಕ್ತರಿಗೆ ನೀರಿನ ಅಭಾವಮತ್ತು ಮಿತ ಬಳಕೆ ಕುರಿತು ಸೂಚನೆ ನೀಡಲಾಗುತ್ತಿದೆ.

ನಮಗೆ ಘಟ್ಟ ಭಾಗದಿಂದ ನೀರು ಹರಿದು ಬರಬೇಕು. ಆದರೆ ಅಲ್ಲಿ ಮಳೆಯಾಗದೇ ಇರುವ ಕಾರಣ ನೀರಿಲ್ಲ. ಕಿಂಡಿ ಅಣೆಕಟ್ಟಿನಿಂದಾಗಿ ತೀರ್ಥಕ್ಕೆ ಮತ್ತು ಅಭಿಷೇಕಕ್ಕೆ ನೀರಿದೆ. ತೀರ್ಥ ಗುಂಡಿಯಲ್ಲಿ ನಾಲ್ಕು ಅಡಿ ನೀರು ಕಡಿಮೆಯಾಗಿದೆ. ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಬರುವುದಿಲ್ಲ ಎಂಬ ಸೂಚನೆ ಕೊಟ್ಟಿದೆ. ಸರಕಾರ ಮತ್ತು ಜಲತಜ್ಞರು ಮುಂದಿನ 15-20 ವರ್ಷಗಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು.
– ಡಾ| ಡಿ. ವೀರೇಂದ್ರ ಹೆಗ್ಗಡೆ

Advertisement

Udayavani is now on Telegram. Click here to join our channel and stay updated with the latest news.

Next