ಇಂಡಿ: ತಾಲೂಕಿನಾದ್ಯಂತ ಭೀಕರ ಬರಗಾಲದ ಛಾಯೆ ಆವರಿಸಿದ್ದು ಬೇಸಿಗೆ ಆರಂಭಕ್ಕೂ ಪೂರ್ವದಲ್ಲಿಯೇ ತಾಲೂಕಿನ ವಿವಿಧೆಡೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆಯಲ್ಲದೆ ರೈತರ ಬಹುವಾಷಿಕ ಬೆಳೆಗಳಾದ ಲಿಂಬೆ, ದಾಳಿಂಬೆ, ದ್ರಾಕ್ಷಿ ಬೆಳೆಗಳು ಒಣಗಲು ಪ್ರಾರಂಭಿಸಿವೆ. ವಿಜಯಪುರ ಜಿಲ್ಲೆ ಬ್ರಿಟಿಷರ ಕಾಲದಿಂದ ಇಲ್ಲಿವರೆಗೂ ಶಾಶ್ವತ ಬರಗಾಲಕ್ಕೆ ತುತ್ತಾಗುತ್ತ ಬರುತ್ತಿದೆ.
ಬ್ರಿಟಿಷರು ಆಡಳಿತ ಮಾಡುವ ಸಂದರ್ಭದಲ್ಲಿ ವಿಜಯಪುರ ನಗರದಲ್ಲಿ ಬರ ನಿವಾರಣೆ ಸಂಸ್ಥೆ ತೆರೆದು ಬರ ನಿವಾರಣೆಗೆ ಪ್ರಯತ್ನಿಸುತ್ತ 71 ವರ್ಷ ಕಳೆದರೂ ವಿಜಯಪುರ ಜಿಲ್ಲೆ ಬರಗಾಲದಿಂದ ಮುಕ್ತವಾಗಿಲ್ಲ. ಬರಗಾಲ ನಿವಾರಣಾ ಸಂಸ್ಥೆ ಅದ್ಯಾವ ಕೆಲಸದಲ್ಲಿ ತೊಡಗಿದಿಯೋ ತಿಳಿಯದಂತಾಗಿದೆ. ಬರಗಾಲದಿಂದ ಜನರು ರೈತರು ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಪಂಚ ನದಿಗಳು ಹರಿದರೂ ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ಅಲೆದಾಡುತ್ತಿದ್ದಾರೆ.
ಇನ್ನು ತಾಲೂಕಿನಾದ್ಯಂತ ಬಹು ವಾರ್ಷಿಕ ಬೆಳೆಗಳಾದ ಲಿಂಬೆ 5510 ಹೆಕ್ಟೇರ್, ದ್ರಾಕ್ಷಿ 1663 ಹೆಕ್ಟೇರ್, ದಾಳಿಂಬೆ 2361 ಹೆಕ್ಟೇರ್ ಬೆಳೆ ಇದೆ. ಇದರಲ್ಲಿ ಶೇ. 75 ಬೆಳೆಗಳು ಈಗಾಗಲೆ ನೀರಿನ ಕೊರತೆಯಿಂದ ಒಣಗಲು ಪ್ರಾರಂಭವಾಗಿವೆ. ಬೆಳೆಗಳ ಉಳಿವಿಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಹ ಟ್ಯಾಂಕರ್ ನೀರು ಪೂರೈಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಇಲಾಖೆ ತಾಲೂಕಾಧಿಕಾರಿ ತಿಳಿಸಿದ್ದಾರೆ.
ಸರ್ಕಾರದಿಂದ ಏನು ಉತ್ತರ ಬರುತ್ತದೆಯೋ ಕಾದು ನೋಡಬೇಕಿದ್ದು ಟ್ಯಾಂಕರ್ ನೀರು ಪೂರೈಸಲು ಇನ್ನೊಂದು ತಿಂಗಳು ತಡವಾದರೂ ಶೇ. 75 ಬೆಳೆಗಳು ಸಂಪೂರ್ಣ ಒಣಗಿ ಹೋಗುತ್ತವೆ ಎನ್ನುತ್ತಾರೆ ಇಲ್ಲಿನ ರೈತರು.
ನೀರಿನ ಅಭಾವದಿಂದ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ನಿಂಬೆ, ದ್ರಾಕ್ಷಿ, ದಾಳಿಂಬೆ, ಬಿಸಿಲಿನ ತಾಪ, ಮತ್ತು ತೇವಾಂಶದ ಕೊರತೆಯಿಂದ ಒಣಗಿ ಹೋಗುತ್ತಿವೆ. ಇದುವರೆಗೆ ಕಷ್ಟಪಟ್ಟು ಬೆಳೆಸಿದ ರೈತರು ಬೆಳೆ ಉಳಿಸಿಕೊಳ್ಳಲು ಹರಸಹಾಸ ಪಡುತ್ತಿದ್ದಾರೆ. ಬೆಳೆ ರಕ್ಷಣೆಗಾಗಿ ಕೆಲ ರೈತರು ಸುಮಾರು 5ರಿಂದ 10 ಕಿ.ಮೀ. ದೂರದಿಂದ ಟ್ಯಾಂಕರ್ ಮೂಲಕ ನೀರನ್ನು ತಂದು ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಬೆಳಗ್ಗೆ ಉಣಿಸುತ್ತಿರುವ ನೀರು ನಾಲ್ಕು ದಿನಕ್ಕೂ ಸಾಕಾಗುತ್ತಿಲ್ಲ ಎಂದು ರೈತರು ಕೈ ಚೆಲ್ಲಿ ಕುಳಿತಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಜನವರಿಯಿಂದ ಜೂನ್ ತಿಂಗಳವರೆಗೆ 31.84 ಕೋಟಿ ರೂ. ಅನುದಾನ ಕೋರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅಷ್ಟು ಅನುದಾನ ನೀಡಿದರೆ ಟ್ಯಾಂಕರ್ ನೀರು ಜೂನ್ ತಿಂಗಳವರೆಗೆ ಸರಬರಾಜು ಮಾಡಲು ಸಾಧ್ಯವಾಗುತ್ತದೆ.
ಆರ್.ಟಿ. ಹಿರೇಮಠ ತೋಟಗಾರಿಕೆ ಇಲಾಖೆ ಅಧಿಕಾರಿ
ಬೆಳೆ ರಕ್ಷಣೆಗಾಗಿ ಸರಕಾರ ಹೊಸ ಯೋಜನೆ ರೂಪಿಸಬೇಕು. ದೀರ್ಘಕಾಲದ ತೋಟಗಾರಿಕಾ ಬೆಳೆಗಳು ಒಣಗಿದರೆ ಮುಂದಿನ 5 ವರ್ಷದವರೆಗೆ ರೈತರು ಪರಿತಪಿಸಬೇಕಾಗುತ್ತದೆ. ಸರಕಾರ ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕು.
ಜಗನ್ನಾಥ ಇಂಡಿ ರೈತ ಮುಖಂಡ
ಉಮೇಶ ಬಳಬಟ್ಟಿ