Advertisement
2019ರಲ್ಲಿ ಎಪ್ರಿಲ್ 11ರಿಂದ ಮೊದಲನೇ ಹಂತದ ನೀರಿನ ರೇಷನಿಂಗ್ ಆರಂಭಗೊಂಡಿತ್ತು. ಆದರೆ, ಆ ಬಾರಿ 5.5 ಮೀ.ನಷ್ಟು ನೀರಿನ ಮಟ್ಟ ಇತ್ತು. ಬಳಿಕದ ವರ್ಷಗಳಲ್ಲಿ ಉತ್ತಮ ಪೂರ್ವ ಮುಂಗಾರು ಮಳೆ ಸುರಿದ ಪರಿಣಾಮ ನಗರದಲ್ಲಿ ನೀರಿನ ರೇಷನಿಂಗ್ ಮಾಡುವ ಅಗತ್ಯ ಬಂದಿರಲಿಲ್ಲ. ಆದರೆ, ಈ ಬಾರಿ ನಿರೀಕ್ಷಿತ ಮಳೆ ಸುರಿದಿಲ್ಲ. ಸದ್ಯ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಮೇ 4ರಂದು 4.21 ಮೀ.ಗೆ ಇಳಿಕೆ ಕಂಡಿದೆ. ತುಂಬೆ ಕೆಳ ಭಾಗದಿಂದ ನೀರೆತ್ತಲಾಗುತ್ತಿದೆಯಾದರೂ ಎರಡು ವಾರಗಳಿಗೆ ಬೇಕಾಗುವಷ್ಟು ಮಾತ್ರ ನೀರಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಾರದಿದ್ದರೆ ನಗರಕ್ಕೆ ಮುಂದಿನ ದಿನಗಳಲ್ಲಿ ಆತಂಕ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಲಭ್ಯ ನೀರನ್ನು ಮಿತವಾಗಿ ಬಳಸಬೇಕಿದೆ. ನೀರನ್ನು ಪೋಲು ಮಾಡದೆ, ಅಪವ್ಯಯವಾಗದಂತೆ ಮುಂಜಾಗ್ರತೆ ವಹಿಸಿ ಮಳೆ ಪ್ರಾರಂಭವಾಗುವವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಹೆಚ್ಚು ಒತ್ತು ನೀಡಬೇಕು. ಕುಡಿಯುವ ನೀರು ಪ್ರಥಮ ಆದ್ಯತೆಯಾಗಿ ನೀಡಬೇಕಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಕಾರು/ದ್ವಿಚಕ್ರ/ರಿಕ್ಷಾ/ಗಾರ್ಡನ್‌ಗಳಿಗೆ ಹಾಗೂ ಪ್ರಾಣಿಗಳನ್ನು ತೊಳೆಯಲು ನೀರು ಹೆಚ್ಚಾಗಿ ಬಳಕೆ ಮಾಡಬಾರದು.
Related Articles
2016ರ ಆರಂಭದ ತಿಂಗಳಿನಿಂದ ಮಹಾ ನಗರ ಹಿಂದೆಂದೂ ಕಂಡರಿಯದ ಭೀಕರ ನೀರಿನ ಕೊರತೆ ಎದುರಿಸುವಂತಾಗಿತ್ತು. ತುಂಬೆ ಡ್ಯಾಂನಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿ, ನಗರದಲ್ಲಿ ಟ್ಯಾಂಕರ್ ನೀರು ಬಳಸಲಾಗಿತ್ತು. ಅದೂ ಖಾಲಿಯಾದಾಗ, ಖಾಸಗಿ ಬಾವಿಗಳಿಂದ ನೀರು ತರಿಸಲಾಗಿತ್ತು. ಅದೂ ಪೂರ್ಣವಾಗಿ ಸಾಧ್ಯವಾಗದಾಗ ಲಕ್ಯಾ ಡ್ಯಾಂ ನೀರನ್ನು ತರಿಸಲಾಗಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ 2017ರಲ್ಲಿ ಪ್ರತಿ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್ ಆರಂಭಿಸಿತು. 2019ರಲ್ಲಿಯೂ ತುಂಬೆಯಲ್ಲಿ ನೀರಿನ ಮಟ್ಟ ಗಣನೀಯ ಕಡಿಮೆಯಾಗಿ ಹಂತ ಹಂತವಾಗಿ ರೇಷನಿಂಗ್ ಆರಂಭಿಸಿತ್ತು.
Advertisement
ಇಂದು ಸುರತ್ಕಲ್, ನಾಳೆ ಸಿಟಿಗೆ ನೀರು ಪೂರೈಕೆಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ನಗರಕ್ಕೆ ದಿನ ಬಿಟ್ಟು ದಿನ ನೀರು ಪೂರೈಕೆಯಾಗಲಿದೆ. ಮೇ 5ರಂದು ಮಂಗಳೂರು ನಗರ ಉತ್ತರಕ್ಕೆ (ಸುರತ್ಕಲ್ ಪ್ರದೇಶಕ್ಕೆ) ಮತ್ತು ಮೇ 6ರಂದು ಮಂಗಳೂರು ನಗರ ದಕ್ಷಿಣ (ನಗರ ಪ್ರದೇಶಕ್ಕೆ) ಇದೇ ರೀತಿ, ಕ್ರಮಾನುಗತವಾಗಿ ನೀರು ಪೂರೈಕೆಯಾಗಲಿದೆ. ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾದರೆ, ಪೈಪ್‌ನಲ್ಲಿ ಗಾಳಿ ತುಂಬಿ ಎತ್ತರದ ಪ್ರದೇಶಗಳಿಗೆ ನೀರು ಬರಲು ಕೆಲವು ಸಮಯ ಬೇಕಾಗಬಹುದು. ತುಂಬೆಯಲ್ಲಿ ತಾಂತ್ರಿಕ ಕಾಮಗಾರಿ ಇದ್ದ ಕಾರಣ ಕೆಲ ದಿನಗಳ ಹಿಂದೆ ಎರಡು ದಿನ ನೀರು ಸ್ಥಗಿತಗೊಂಡಿತ್ತು. ಬಳಿಕ ಸಮರ್ಪಕ ನೀರು ಸರಬರಾಜು ಆಗಲು ಮೂರು ದಿನ ತಗುಲಿತ್ತು.