Advertisement

ನೀರು ಬಳಕೆ ಹಿತಮಿತವಾಗಿರಲಿ

12:54 PM May 03, 2017 | |

ದಾವಣಗೆರೆ: ನೀರಿನ ಮಿತ ಬಳಕೆ ಹಾಗೂ ಮುಂದಿನ ಪೀಳಿಗೆಯ ಉಳಿವಿಗೆ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಲೇಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮನವಿ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಶ್ರೀ ಭಗೀರಥ ಜಯಂತಿಯಲ್ಲಿ ಮಾತನಾಡಿದರು.

Advertisement

ಈಗ ಹಿಂದೆಂದೂ ಕಂಡು ಕೇಳರಿದ ನೀರಿನ ಸಮಸ್ಯೆ, ಬರದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ನೀರನ್ನು ಮಿತವಾಗಿ ಬಳಸಬೇಕು. ನಮ್ಮ ಮುಂದಿನ ಪೀಳಿಗೆಯವರ ಉಳಿವಿಗೆ ಮರ-ಗಿಡ ಬೆಳೆಸುವ ಮೂಲಕ ಮಳೆ ಬರುವಂತಹ ಪ್ರಕ್ರಿಯೆ ಬಲಪಡಿಸಬೇಕು ಎಂದರು. ಎಲ್ಲ ಸಮಾಜ ಸುಧಾರಕರು, ಮಹಾನೀಯರು, ದಾರ್ಶನಿಕರು ಮಾನವ ಜನಾಂಗಕ್ಕೆ ತಮ್ಮದೇ ಆದ ಕಾಣಿಕೆ, ಸಂದೇಶ, ತತ್ವಾದರ್ಶ ನೀಡಿದ್ದಾರೆ.

ಎಲ್ಲ ರಂತೆ ಶ್ರೀ ಭಗೀರಥರು ಮಹತ್ತರ ಸಂದೇಶ, ತತ್ವ ಯಾವುದನ್ನೂ ನೀಡಿಲ್ಲವಾದರೂ ತಮ್ಮ ವಿಶಿಷ್ಟ ಕಾರ್ಯದ ಮೂಲಕ ಮಹತ್ವದ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು. ತಮ್ಮ ಪೂರ್ವಜರ ಭಸ್ಮದ ರಾಶಿಯ ಮೇಲೆ ಗಂಗೆ ಹರಿಸುವ ಪ್ರಯತ್ನದಲ್ಲಿ ಸಾಕಷ್ಟು ಅಡೆ-ತಡೆ ಎದುರಾದರೂ ಶ್ರೀ ಭಗೀರಥರು ತಮ್ಮ ಪ್ರಯತ್ನ ಬಿಡಲಿಲ್ಲ. ಛಲದೊಂದಿಗೆ ಹೋರಾಡಿ ಕೊನೆಗೂ ದೇವಲೋಕದ ಗಂಗೆಯನ್ನು ಭಸ್ಮದ ರಾಶಿಯ ಮೇಲೆ ಹರಿಯುವಂತೆ ಮಾಡಿದರು.

ಅವರ ಸತತ ಪ್ರಯತ್ನ, ಛಲದ ಹೋರಾಟ ಪ್ರತಿಯೊಬ್ಬರಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುತ್ತದೆ. ನಾವು ಸಹ ಏನೇ ಅಡ್ಡಿ ಬಂದರೂ ಪ್ರಯತ್ನದಿಂದ ಹಿಂದಕ್ಕೆ ಸರಿಯಬಾರದು ಎಂದು ತಿಳಿಸಿದರು. ಪ್ರತಿಯೊಬ್ಬ ದಾರ್ಶನಿಕರ ನೀಡಿದ ಸಂದೇಶ, ತತ್ವಾದರ್ಶವನ್ನ ಪಾಲಿಸುವ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡಲು ಶ್ರಮಿಸಬೇಕು. ನಮ್ಮ ಸುತ್ತಮುತ್ತಲಿನ ಪರಿಸರ, ಸಮಾಜ ಸುಧಾರಣೆ ಹಾದಿಯಲ್ಲಿ ಸಾಗುವಂತಾಗಬೇಕು.

ಅಂತಹ ಕಾರ್ಯಕ್ಕೆ ಜಯಂತಿಗಳು ಪ್ರೇರಣೆಯಾಗಲಿ ಎಂದು ಆಶಿಸಿದರು. ಮೇಯರ್‌ ಅನಿತಾಬಾಯಿ ಜಾಧವ್‌ ಮಾತನಾಡಿ, ಈಗ ದಾವಣಗೆರೆ ಒಳಗೊಂಡಂತೆ ರಾಜ್ಯದ ಎಲ್ಲಾ ಕಡೆ ತೀವ್ರ ಬರಗಾಲ, ಕುಡಿಯುವ ನೀರಿನ ಹಾಹಾಕಾರ ಇದೆ. ನಗರಪಾಲಿಕೆ ಎಲ್ಲಾ ವಾರ್ಡ್‌ಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಒದಗಿಸುತ್ತಿದೆ. ನೀರಿನ ಸಮಸ್ಯೆಗೆ ಸಾಕಷ್ಟು ಸ್ಪಂದಿಸುತ್ತಿದೆ. ಇನ್ನು 20-25 ದಿನ ಕಾಲ ಜನರು ನೀರನ್ನು ಮಿತವಾಗಿ ಬಳಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು. 

Advertisement

ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಸಿ.ಆರ್‌. ಅಂಜಿನಪ್ಪ ಉಪನ್ಯಾಸ ನೀಡಿದರು. ರಾಜ್ಯ ಉಪ್ಪಾರ ಸಮಾಜದ ನಿಕಟಪೂರ್ವ ಅಧ್ಯಕ್ಷ ಎಸ್‌. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ, ಡೆಪ್ಯುಟಿ ಮೇಯರ್‌ ಮಂಜಮ್ಮ, ಸದಸ್ಯ ಗುರುರಾಜ್‌,

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಉಪ್ಪಾರ ಸಮಾಜ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ ಇತರರು ಇದ್ದರು. ಎಸ್‌. ಮೈತ್ರಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಸ್ವಾಗತಿಸಿದರು. ಉಪನ್ಯಾಸಕಿ ಸುಮತಿ ಜಯಪ್ಪ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next