Advertisement
ಜಲ ಜಾಗೃತಿಯ ಮಾತಾಡುವಾಗೆಲ್ಲ ಒಂದಿಷ್ಟು ರಚನಾತ್ಮಕ ಉದಾಹರಣೆ ಎದುರಿಡುತ್ತೇವೆ. ಕದಂಬ, ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರ ಕಾಲಗಳಲ್ಲಿ ಕೆರೆ ನಿರ್ಮಾಣಗಳ ಚಾರಿತ್ರಿಕ ದಾಖಲೆ ಹೇಳುತ್ತೇವೆ. ಈಗ ಕೆರೆ ಕಟ್ಟಿದವರು, ಕೃಷಿ ಹೊಂಡದಿಂದ ಗೆದ್ದವರು, ಛಾವಣಿ ನೀರಿನ ಕೊಯ್ಲು ಮಾಡಿದವರು, ಕಾಡುಗುಡ್ಡಗಳಲ್ಲಿ ನೀರಿಂಗಿಸಿದವರ ಸಚಿತ್ರ ದಾಖಲೆ ಹಿಡಿದು ವಿವರಿಸುತ್ತೇವೆ. ಶಾಲೆಗಳು, ಆಸ್ಪತ್ರೆ, ಉದ್ದಿಮೆಗಳು ನೀರಿನ ಸಂರಕ್ಷಣೆಗೆ ಇಟ್ಟ ಹೆಜ್ಜೆ ಪರಿಚಯಿಸುವುದು ಮುಖ್ಯ ಉದ್ದೇಶ. ಇವುಗಳ ಪ್ರೇರಣೆಯಿಂದ ಇನ್ನಷ್ಟು ಕೆಲಸಗಳು ನಡೆಯಬೇಕೆಂಬ ಆಶಯವಿದೆ. ಜಲ ಕಾಯಕದ ಅನುಭವದಲ್ಲಿ ಹೇಳುವುದಾದರೆ ಉದಾಹರಣೆಗಳು ನೇರ ಉತ್ತರವಾಗುವುದಿಲ್ಲ. ನಿಶ್ಚಿತವಾಗಿ ಯಾರು ಏನು ಮಾಡಬೇಕು? ಹೇಗೆ ಮಾಡಬೇಕೆಂದು ತೋರಿಸದಿದ್ದರೆ ಕಾಯಕ ಮುಂದಕ್ಕೆ ಹೋಗುವುದಿಲ್ಲ.
Related Articles
Advertisement
ಒಮ್ಮೆ ಕಾರ್ಯಕ್ರಮದಲ್ಲಿ ಮಾತಾಡಿದ ಅಧಿಕಾರಿಯೊಬ್ಬರು ಶ್ರಮದಾನದ ಮೂಲಕ ಕೆರೆ ಕೆಲಸ ಮಾಡಬಹುದೆಂದು ಉಪದೇಶಿಸಿದರು. ಮನೆಗೆಲಸಕ್ಕೆ ಯಂತ್ರ ಹುಡುಕುವಷ್ಟು ಜನ ಶ್ರಮ ದುಡಿಮೆಯಿಂದ ದೂರ ಸರಿದಿದ್ದಾರೆ. ಕೆಲಸ ಮಾಡಲು ಬರುತ್ತಾರೆಯೇ? ಮಾರ್ಮಿಕವಾಗಿ ಜನ ಪ್ರಶ್ನಿಸಿದರು. ಜನರನ್ನು ಶ್ರಮಕ್ಕೆ ಅಣಿಗೊಳಿಸಲು ವಿಶ್ವಾಸವೃದ್ಧಿಯ ಕಾರ್ಯ ಮಹತ್ವದ್ದಾಗಿದೆ. ಧಾರವಾಡದಲ್ಲಿ ಸ್ವಯಂ ಸೇವಾ ಸಂಸ್ಥೆಯ ಇಬ್ಬರು ಯುವಕರು ಜನರನ್ನು ಸಂಘಟಿಸಿ ಕಳೆದ ವರ್ಷ ತೆರೆದ ಬಾವಿ ಸ್ವತ್ಛಗೊಳಿಸಿದರು. ತಮ್ಮ ದೈನಂದಿನ ಕೆಲಸ ಬಿಟ್ಟು ಬಾವಿ ಸ್ವತ್ಛತೆಯ ಕಾರ್ಯಕ್ಕೆ ದುಡಿಯಲು ಯುವಕರಿಬ್ಬರು ಸಮುದಾಯದ ಜೊತೆ ಬಹಳ ಶ್ರಮಿಸಿದ್ದರು, ಜಾಗೃತಿ ಮೂಡಿಸಿ ಮನವೊಲಿಸಿದ್ದರು. ಹಾಳಾದ ಬಾವಿ ಸರಿಪಡಿಸಿದ್ದಕ್ಕೆ ಜನರಿಂದ ಉತ್ತಮ ಪ್ರಶಂಸೆ ವ್ಯಕ್ತವಾಯಿತು. ಇತ್ತೀಚೆಗೆ ಹೊರಬಿದ್ದ ದಾಖಲೆ ಕಾರ್ಯಕರ್ತರನ್ನು ದಂಗು ಬಡಿಸಿದೆ. ಸ್ಥಳೀಯ ಗ್ರಾಮ ಪಂಚಾಯತ್‌ದವರು ತಾವು ಈ ಬಾವಿ ಸ್ವತ್ಛಗೊಳಿಸಿದ್ದಾಗಿ ಹಣ ಖರ್ಚು ಹಾಕಿದ್ದಾರಂತೆ. ಜಲ ಸಂರಕ್ಷಣೆ ಜನಾಂದೋಲನವಾಗಲು ಶ್ರಮಿಸಿದವರಿಗೆ ಇಡೀ ಪ್ರಕರಣ ಆತಂಕ ಹುಟ್ಟಿಸಿದೆ. ವ್ಯವಸ್ಥೆ ಹಾಳಾಗಿದೆ ಒಪ್ಪೋಣ. ಆದರೆ ಜನ ಖುಷಿಯಿಂದ ಮಾಡಿದ ಜಲಕಾಯಕದಲ್ಲಿ ಹಣ ಹೊಡೆಯುವಷ್ಟು ಹೀನಾವಸ್ಥೆಗೆ ತಲುಪಿದರೆ ಏನು ಮಾಡೋಣ? ಇಂಥ ಸಂಕಟ, ಸವಾಲುಗಳ ಮಧ್ಯೆ ಕಾಯಕ ಮುಂದುವರಿಸುವುದು ಹೇಗೆ? ಉತ್ತರ ಸರಳವಲ್ಲ.
ಮಾಧ್ಯಮಗಳ ಪರಿಣಾಮದಿಂದ ಇಂದು ಬಹುತೇಕ ಜನಕ್ಕೆ ನೀರಿನ ಮಹತ್ವದ ಅರಿವಾಗಿದೆ. ನೀರಿಂಗಿಸಿದರೆ ಪ್ರಯೋಜನವೆಂದು ಹೇಳುತ್ತಾರೆ. ಆದರೆ ಮಾದರಿ ಅಳವಡಿಸಲು ಸಮಸ್ಯೆಇದೆ. ಮುಖ್ಯ ಸಮಸ್ಯೆ ಮನೆ ಮನೆಗೆ ಹೋಗಿ ನೀರಿಂಗಿಸುವ ತಂತ್ರ ಪರಿಚಯಿಸಿ ಸ್ಥಳೀಯ ಪರಿಸರದಲ್ಲಿ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸುವವರು ಬೇಕು. ನೆಲಮೂಲದಲ್ಲಿ ಕೆಲಸ ಮಾಡಲು ಕಾರ್ಯಕರ್ತರ ಕೊರತೆ ಇದೆ. ಜಲ ಸಂರಕ್ಷಣೆಯ ದೊಡ್ಡ ಪರಿಣಿತರು ಕಾರ್ಪೂರೇಟ್ ವಲಯದಲ್ಲಿ ಸಿಲುಕಿದ್ದಾರೆ. ಲಕ್ಷ ಲಕ್ಷ ಬೇಡುವ ತಂತ್ರಕ್ಕಿಂತ ಬಡವರಿಗೆ ಯೋಗ್ಯವಾದ ಕಡಿಮೆ ವೆಚ್ಚದ ಜನತಾ ತಂತ್ರ ಪರಿಚಯಿಸುವವರು ಈಗ ಬೇಕು. ಭಾಷಣ, ಬರಹ ಓದಿ ಅರಿವು ಪಡೆಯುವುದಕ್ಕೂ, ಸ್ವತಃ ಮಾಡಲು ಹೋಗುವುದಕ್ಕೂ ಅಂತರವಿದೆ. ಕೆಲಸ ಮಾಡಲು ನಿಂತವರ ಎದುರು ಪ್ರಶ್ನೆಗಳು ಕಾಡುತ್ತವೆ. 20 ವರ್ಷಗಳ ಜಲ ಕಾಯಕದ ಅನುಭವದಲ್ಲಿ ಹೇಳುವುದಾರೆ ಸಿದ್ಧ ಮಾದರಿಗಳಿಗೆ ಪ್ರತಿ ಮನೆಯಲ್ಲೂ ಸಣ್ಣಪುಟ್ಟ ಮಾರ್ಪಾಟು ಬೇಕಾಗುತ್ತದೆ. ಬೆಂಗಳೂರಿಗೆ ಯೋಗ್ಯವಾಗಿದ್ದು ತುಮಕೂರಿಗೆ ಸಲ್ಲುವುದಿಲ್ಲ. ಅಬ್ಬರದ ಮಳೆ ಸುರಿಯುವ ಉಡುಪಿಯ ಕಾಗದಾಳಿ ಮಣ್ಣಿಗೆ ಅರಣ್ಯ ನೀರುಳಿಸುವಷ್ಟು ಪರಿಣಾಮಕಾರಿಯಾಗಿ ಇಂಗುಗುಂಡಿ ಉತ್ತರವಾಗುವುದಿಲ್ಲ. ಪರಿಸರದ ನಡುವಿಂದ ಹುಟ್ಟುವ ಮಾದರಿ ಗೆಲ್ಲುವಷ್ಟು ಎರವಲು ತಂತ್ರ ಫಲ ನೀಡುವುದಿಲ್ಲ. ಎರೆ ಹೊಲದ ಜಲತಜ್ಞತೆ ಮಸಾರಿ ಮಣ್ಣಿಗೆ ಒಗ್ಗುವುದಿಲ್ಲ.
ನೆಲದ ಮಳೆ ಅರಿತು, ಮಣ್ಣು ಗಮನಿಸಿ ಸುತ್ತಲಿನ ಪರಿಸರ, ಕೃಷಿ ಅರ್ಥಮಾಡಿಕೊಂಡು ಕಲಿಯುವ ಕಾರ್ಯಕರ್ತರು ನೀರಿನ ಕೆಲಸಕ್ಕೆ ಬೇಕು. ಉಪನ್ಯಾಸದ ತಾಂತ್ರಿಕ ಮಾಹಿತಿ, ಪುಸ್ತಕದ ಜಾnನ, ಅವರಿವರ ಹೇಳಿಕೆ ಅನುಸರಣೆಗಿಂತ ನೆಲದಲ್ಲಿ ಬೇರಿಳಿಸಿದರೆ ನೀರಿಗೆ ಲಾಭವಾಗುತ್ತದೆ. ರಾಜ್ಯದಲ್ಲಿ ಕೊಳವೆ ಬಾವಿಗಳಿಗೆ ನೀರಿಂಗಿಸುವುದು ಸರಕಾರೀ ಕೆಲಸವಾಗಿದೆ. ಇಂಗುಗುಂಡಿಯ ಸುತ್ತ ಕಟ್ಟೆಕಟ್ಟಿ ಮಳೆ ನೀರು ಇಂಗುಗುಂಡಿಗೆ ಬರುತ್ತಿಲ್ಲ. ನಾಳೆ ಯಾರಾದರೂ ಅಧ್ಯಯನ ಮಾಡಿದರೆ “ಕೊಳವೆ ಬಾವಿಗೆ ನೀರಿಂಗಿಸಿದರೆ ಪ್ರಯೋಜನವಿಲ್ಲ’ ಮಾತು ಕೇಳಬಹುದು. ಮಾಡುವ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಆಸಕ್ತಿವಹಿಸುವವರಿಲ್ಲದಿದ್ದರೆ ಕಾಯಕ ನಿಶøಯೋಜನ. ಸರಕಾರಿ ಅಂಕಿಸಂಖ್ಯೆ ಎದುರಿಟ್ಟುಕೊಂಡು ನಾವು ಕುಳಿತಲ್ಲಿಯೇ ಇಷ್ಟು ಕೋಟಿ ಲೀಟರ್ ನೀರು ಕೊಳವೆ ಬಾವಿಗೆ ಇಂಗಿತೆಂದು ಬರೆಯಲಾಗುವುದಿಲ್ಲ. ನದಿ, ಕೆರೆ ತುಂಬಿದಾಗ ನೀರಿನ ನೋಟ ಇಮೇಲ್, ವಾಟ್ಸ್‌ಪ್ , ಫೇಸ್‌ಬುಕ್‌ಗಳಲ್ಲಿ ಬಹಳ ಸೊಗಸಾಗಿಯೇ ಕಾಣಿಸುತ್ತದೆ. ಹತ್ತು ಜನರನ್ನು ಸೇರಿಸಿಕೊಂಡು ಬುಟ್ಟಿ ಮಣ್ಣು ಹೊತ್ತರಷ್ಟೇ ಬೆರಗಿನ ಬಿಸಿ ತಿಳಿಯುತ್ತದೆ. ಜಲ ಸಂರಕ್ಷಣೆಯ ಸಂಗತಿಯನ್ನು ನಾವು ಜಗತ್ತಿಗೆ ದೊಡ್ಡದಾಗಿ ಯಾವತ್ತೂ ಹೇಳಬೇಕಾಗಿಲ್ಲ, ಅದರ ಅಗತ್ಯವಿಲ್ಲ. ನಮ್ಮ ನೀರಿನ ಕಾಳಜಿಯನ್ನು ಊರಿನ ಜನಕ್ಕೆ ಮೊದಲು ಹೇಳಬೇಕು. ಹೇಗೆ ಮಾಡಬೇಕೆಂದು ಜೊತೆ ನಿಂತು ನಾವು ಶ್ರಮಿಸಿದರೆ ಬದಲಾವಣೆ ಮೂಡಿಸಬಹುದು. ಶಿವಾನಂದ ಕಳವೆ