Advertisement

ನಗರ ಜಿಲ್ಲೆಯಲ್ಲೂ ಜಲ ಸಂರಕ್ಷಣೆ

08:57 AM Aug 02, 2019 | Suhan S |

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಜಲ ಸಂರಕ್ಷಣಾ ಅಭಿಯಾನ’ದ ವ್ಯಾಪ್ತಿಗೆ ಬೆಂಗಳೂರು ನಗರ ಜಿಲ್ಲೆಯ ನಾಲ್ಕು ತಾಲೂಕುಗಳು ಆಯ್ಕೆಯಾಗಿವೆ. ಹೀಗಾಗಿ ಕೆಲವೇ ತಿಂಗಳಲ್ಲಿ ಈ ತಾಲೂಕುಗಳ ಕೆರೆ-ಕುಂಟೆ, ಭಾವಿಗಳು, ಇನ್ನಿತರ ಜಲ ಮೂಲಗಳಿಗೆ ಮರು ಜೀವ ನೀಡುವ ಕೆಲಸ ಆರಂಭವಾಗಲಿದೆ.

Advertisement

ಜಲಶಕ್ತಿ ಮಂತ್ರಾಲಯದಡಿ ರೂಪಿಸಲಾಗಿರುವ ‘ಜಲ ಸಂರಕ್ಷಣಾ ಅಭಿಯಾನ್‌’ಗೆ ದೇಶದ 254 ಜಿಲ್ಲೆಗಳು ಆಯ್ಕೆಯಾಗಿದ್ದು, ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ, ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲೂಕುಗಳು ಸಹ ಸೇರಿವೆ.

ಅರಣ್ಯೀಕರಣ, ನೀರಿನ ಸಂರಕ್ಷಣೆ, ಮಳೆ ನೀರು ಕೊಯ್ಲು, ನೀರಿನ ಮರು ಬಳಕೆ, ಜಲ ಮೂಲಗಳ ಪುನರ್‌ ಭರ್ತಿ, ಜಲಾನಯನ ಅಭಿವೃದ್ಧಿ ಮುಂತಾದ ಅಂಶಗಳನ್ನು ಈ ಅಭಿಯಾನ ಒಳಗೊಂಡಿದೆ. ಈಗಾಗಲೇ ಬತ್ತಿರುವ ನೀರಿನ ಸೆಲೆಗಳಿಗೆ ಮರು ಜೀವ ನೀಡುವುದು ಈ ಯೋಜನೆ ಉದ್ದೇಶವಾಗಿದ್ದು, ಚೆಕ್‌ ಡ್ಯಾಂಗಳ ನಿರ್ಮಾಣ ಕೂಡ ನಡೆಯಲಿದೆ.

ಮಳೆ ನೀರು ಕೊಯ್ಲಿಗೆ ಆದ್ಯತೆ: ಜಲ ಸಂರಕ್ಷಣಾ ಅಭಿಯಾನದಡಿ ಕೃಷಿ ಹೊಂಡಗಳ ನಿರ್ಮಾಣ, ಮಳೆ ನೀರು ಕೊಯ್ಲಿಗೆ ಆದ್ಯತೆ ನೀಡಲಾಗುತ್ತಿದೆ. ಮಳೆ ನೀರು ಕೊಯ್ಲು ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಜತೆಗೆ, ಸಾಂಪ್ರದಾಯಿಕ ನದಿ ನೀರಿನ ಮೂಲಗಳ ನವೀಕರಣ ಪ್ರಕ್ರಿಯೆ ಕೂಡ ನಡೆಯಲಿದೆ ಎಂದು ಬೆಂಗಳೂರು ನಗರ ಜಿ.ಪಂ.ನ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ನಾಲ್ಕೂ ತಾಲೂಕುಗಳ ಹಲವೆಡೆ ನಾನಾ ಕಾರಣಗಳಿಂದಾಗಿ ಬತ್ತಿ ಹೋಗಿರುವ ಬೋರ್‌ವೆಲ್ಗಳಿಗೆ ಮರುಜೀವ ನೀಡುವ ಕೆಲಸ ನಡೆಯಲಿದೆ. ಈಗಾಗಲೇ ಶಾಲೆ, ಕಾಲೇಜು ವಿದ್ಯಾರ್ಥಿಗಳ ಮೂಲಕ ಜಲ ಸಂರಕ್ಷಣಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಅಲ್ಲದೆ ವಿವಿಧ ಜಾರಿಯ ಸುಮಾರು 50,000 ಸಸಿಗಳನ್ನು ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಹಿರಿಯ ಅಧಿಕಾರಿಗಳ ಸಭೆ: ಬೆಂಗಳೂರು ನಗರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಜಲ ಸಂರಕ್ಷಣಾ ಅಭಿಯಾನ್‌ ಯೋಜನೆ ಜಾರಿ ಕುರಿತಂತೆ ಕೇಂದ್ರ ಜಲಶಕ್ತಿ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ನಗರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಂಚಾಯತ್‌ ರಾಜ್‌ ಇಲಾಖೆ, ಗ್ರಾಮೀಣ ಮತ್ತು ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು, ಜಿಲ್ಲಾ ಯೋಜನಾ ನಿರ್ದೇಶಕರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಇಲಾಖಾವಾರು ಹಲವು ಅಧಿಕಾರಿಗಳು ಭಾಗವಹಿಸಿದ್ದರು. ಅನುದಾನ, ಯೋಜನೆಯ ಯಶಸ್ವಿಗೊಳಿಸುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

5 ಅಂಶಗಳ ಅಭಿಯಾನ:

ನೀರಿನ ಮೂಲ ಸೆಲೆಗಳಿಗೆ ಮರು ಜೀವ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯವು ‘ಜಲ ಸಂರಕ್ಷಣಾ ಅಭಿಯಾನ್‌’ ಎಂಬ ವಿನೂತನ ಯೋಜನೆ ರೂಪಿಸಿದೆ. ದೇಶದ ಹಲವು ಭಾಗಗಳಲ್ಲಿ ತೀವ್ರ ನೀರಿನ ಕೊರತೆ ಕಾಣಿಸಿಕೊಂಡಿರುವ ಪರಿಣಾಮ ಕೇಂದ್ರ ಸರ್ಕಾರವು ಐದು ಅಂಶಗಳ ನೀರಿನ ಸಂರಕ್ಷಣಾ ಅಭಿಯಾನವನ್ನು ಪ್ರಾರಂಭಿಸಿದೆ. ಇದಕ್ಕೆ ಜಲಶಕ್ತಿ ಅಭಿಯಾನ ಎಂದು ಹೆಸರಿಡಲಾಗಿದೆ.

 

● ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next