Advertisement

ರೈತರಲ್ಲಿ ಮೂಡಲಿ ಜಲ ಜಾಗೃತಿ

03:27 PM May 03, 2022 | Team Udayavani |

ಚಿತ್ರದುರ್ಗ: ಹೋರಾಟದ ಮೂಲಕ ಪಡೆದುಕೊಂಡಿರುವ ದೊಡ್ಡ ಮೊತ್ತದ ಯೋಜನೆ ಭದ್ರಾ ಮೇಲ್ದಂಡೆ. ಇದು ಯಶಸ್ವಿಯಾಗಬೇಕಾದರೆ ರೈತರಲ್ಲಿ ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ರಾಜ್ಯ ರೈತ ಸಂಘದಿಂದ ಆಯೋಜಿಸಿದ್ದ ಕೇಂದ್ರ ಸರ್ಕಾರದ ಜಲಪ್ರಹರಿ ಪ್ರಶಸ್ತಿ ಪುರಸ್ಕೃತ ಭದ್ರಾ ಮೇಲ್ದಂಡೆ ಯೋಜನೆ ನಿವೃತ್ತ ಮುಖ್ಯ ಎಂಜಿನಿಯರ್‌ ಚೆಲುವರಾಜ್‌ ಅವರನ್ನು ಸನ್ಮಾನಿಸುವ ‘ಬಯಲುಸೀಮೆ ಗೌರವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆ ಸಂಪೂರ್ಣ ಮುಕ್ತಾಯವಾಗುವ ಹೊತ್ತಿಗೆ 30 ಸಾವಿರ ಕೋಟಿ ರೂ. ವೆಚ್ಚವಾಗಬಹುದು. ಯಾವುದೇ ಯೋಜನೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಆದರೆ ಅನೇಕ ಬಾರಿ ಡಿಪಿಆರ್‌ ಬದಲಾವಣೆ ಮಾಡಿ ಮಾಡಿ ಕೊನೆಯ ಭಾಗದ ರೈತರಿಗೆ ನೀರು ತಲುಪದಂತಾದ ಅನೇಕ ಉದಾಹರಣೆಗಳಿವೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಒಂದು ಟಿಎಂಸಿ ನೀರು ತರಲು ಒಂದು ಸಾವಿರ ಕೋಟಿ ರೂ. ಖರ್ಚು ಮಾಡಿದಂತಾಗುತ್ತದೆ. ಇಷ್ಟು ದೊಡ್ಡ ಗಾತ್ರದ ಯೋಜನೆ ಇದು. ಈ ಭಾಗದ ಹೋರಾಟಗಾರರು, ಎಂಜಿನಿಯರ್‌ಗಳ ನೆರವಿನಿಂದ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಮುಂದೆ ರೈತರು ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಬೆಳೆ ಬೆಳೆದುಕೊಳ್ಳುವ ಬಗ್ಗೆ ರೈತ ಸಂಘಟನೆಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ನಮ್ಮ ಇಲಾಖೆ ಮುಂದೆ 1.5 ಲಕ್ಷ ಕೋಟಿ ಮೊತ್ತದ ಮಂಜೂರಾದ ಯೋಜನೆಗಳಿವೆ. ಆದರೆ ನಮಗಿರುವ ಅನುದಾನ ವಾರ್ಷಿಕ 20 ಸಾವಿರ ಕೋಟಿ ಮಾತ್ರ. ಇದರಲ್ಲಿ 6 ಸಾವಿರ ಕೋಟಿ ರೂ. ಸಾಲ, ಬಡ್ಡಿಗೆ, 1 ಸಾವಿರ ಕೋಟಿ ರೂ. ಇಲಾಖೆ ನಿರ್ವಹಣೆ, ವೇತನ ಇತ್ಯಾದಿಗೆ ಬಳಕೆಯಾದರೆ ಅಭಿವೃದ್ಧಿಗೆ 13 ಸಾವಿರ ಕೋಟಿ ರೂ. ಸಿಗುತ್ತದೆ. ಇಲಾಖೆಯ ಎಂಜಿನಿಯರ್‌ಗಳು ಎಲ್ಲದಕ್ಕೂ ಡಿಪಿಆರ್‌ ಮಾಡುವುದರಿಂದ ಸಮಸ್ಯೆ ಆಗುತ್ತದೆ. ಎಲ್ಲವೂ ವ್ಯವಸ್ಥೆ ಮೂಲಕ ಹೋಗಬೇಕು. ಇಲ್ಲದಿದ್ದರೆ ವ್ಯವಸ್ಥೆ ಹಾಳಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ 30 ಲಕ್ಷ ಹೆಕ್ಟೇರ್‌ ಮಧ್ಯಮ ನೀರಾವರಿ, 10 ಲಕ್ಷ ಹೆಕ್ಟೇರ್‌ ಸಣ್ಣ ನೀರಾವರಿ, 16 ಲಕ್ಷ ಹೆಕ್ಟೇರ್‌ ಅಂತರ್ಜಲ ಅವಲಂಬಿತ ನೀರಾವರಿ ಸೇರಿದಂತೆ 66 ಲಕ್ಷ ಹೆಕ್ಟೇರ್‌ ನೀರಾವರಿ ಪ್ರದೇಶವಿದೆ. ಇದರಲ್ಲಿ ಅತಿ ಹೆಚ್ಚು ನೀರು ಹರಿದು ಸುಮಾರು 4 ಲಕ್ಷ ಹೆಕ್ಟೇರ್‌ನಷ್ಟು ಭೂ ಪ್ರದೇಶ ಸವಳಾಗಿದೆ. ಇದು ದೇಶಕ್ಕೆ ನಷ್ಟವಲ್ಲವೇ ಎಂದು ಪ್ರಶ್ನಿಸಿದರು.

Advertisement

ನೀರಾವರಿ ಸೌಲಭ್ಯ ಬಂದ ತಕ್ಷಣ ರೈತರು ಭತ್ತ, ಕಬ್ಬು ಬೆಳೆಯುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಈ ಬಗ್ಗೆ ರೈತರು ಹೆಚ್ಚು ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ಕೆಲವೇ ದಿನಗಳಲ್ಲಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ನನಗೆ ಪತ್ರ ಬಂದಿದೆ ಎಂದರು.

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ಸನ್ಮಾನಗಳಿಂದ ಜವಾಬ್ದಾರಿ ಹೆಚ್ಚಾಗುತ್ತದೆ. ಅಧಿಕಾರಿಗಳಲ್ಲಿ ಬದ್ಧತೆ ಇದ್ದರೆ ಎಂತಹ ಕೆಲಸಗಳಾಗುತ್ತವೆ ಎನ್ನುವುದಕ್ಕೆ ಭದ್ರಾ ಮೇಲ್ದಂಡೆ ಸಿಇ ಆಗಿದ್ದ ಚೆಲುವರಾಜ್‌ ಉತ್ತಮ ಉದಾಹರಣೆ. ರಾಜಕಾರಣಿಗಳಲ್ಲೂ ಈ ಬದ್ಧತೆ ಇರಬೇಕು ಎಂದು ಆಶಿಸಿದರು.

560ಕ್ಕಿಂತ ಹೆಚ್ಚು ದಿನ ರೈತರು ಹೋರಾಟ ಮಾಡಿದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಮಂಜೂರಾಗಿದೆ. ಇಂತಹ ಯೋಜನೆಗೆ ಎಲ್ಲ ಸರ್ಕಾರಗಳು ಸಹಕಾರ ನೀಡಿವೆ. ಈ ಯೋಜನೆಯ ಯಶಸ್ಸಿಗೆ ಸಂಪೂರ್ಣ ಬದ್ಧತೆ ತೋರಿಸಿದ ಅಧಿ ಕಾರಿಗೆ ಸರ್ಕಾರ ಮತ್ತು ಸಾರ್ವಜನಿಕರು ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ. ದೇಶ ಅಮೃತ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿದೆ. ಈಗಲೂ ಬದ್ಧತೆ ಇಲ್ಲದ ಅಧಿಕಾರಿಗಳನ್ನು ಕಾಣುತ್ತಿದ್ದೇವೆ. ಜನರ ಸಮಸ್ಯೆ ಪರಿಹಾರ ಮಾಡದ ರಾಜಕಾರಣಿ ಯಾಕೆ ಬೇಕು ಎಂದರು.

ಅಭಿನಂದನೆ ಸ್ವೀಕರಿಸಿದ ನಿವೃತ್ತ ಇಂಜಿನಿಯರ್‌ ಚೆಲುವರಾಜ್‌ ಮಾತನಾಡಿ, ನಾನೊಬ್ಬ ಸಾಮಾನ್ಯ ಅಧಿಕಾರಿ. ಇದರಲ್ಲಿ ವಿಶೇಷವೇನೂ ಇಲ್ಲ. ಎಲ್ಲರಿಗೂ ಕೊಟ್ಟ ಹಾಗೆ ನನಗೂ ಕೂಡ ಜಾಗ ಕೊಟ್ಟಿದ್ದರು. ಆ ಜಾಗದಲ್ಲೇ ನಾನು ಕೆಲಸ ಮಾಡಿದ್ದೇನೆ. ಇದೇ ರೀತಿ ಬಹಳ ಜನ ಹೆಚ್ಚಿನ ಶ್ರದ್ಧೆಯಿಂದ ನಿರ್ವಹಣೆ ಮಾಡುತ್ತಿದ್ದಾರೆ. ನನಗೆ ಒಂದೇ ಕಡೆ ದೀರ್ಘ‌ ಕಾಲ ಇರಲಿಕ್ಕೆ ಅವಕಾಶ ಮಾಡಿಕೊಟ್ಟಂತಹ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಹಾವೇರಿ ಜಿಲ್ಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆ, ಮಲಪ್ರಭಾ ಯೋಜನೆ, ಎತ್ತಿನಹೊಳೆ ಯೋಜನೆ ನಂತರ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆಲಸ ಮಾಡಿದ್ದೇನೆ. ಭದ್ರಾ ಮೇಲ್ದಂಡೆ ಮೂಲ ಯೋಜನೆ ಮಾರ್ಪಾಡು ಮಾಡುವಾಗ ಜಿಲ್ಲೆಯ ಚಿತ್ರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದೆ ಏನಾಗಬಹುದು, ಯಾವ ಭಾಗಗಳಿಗೆ ನೀರು ತಲುಪಬೇಕು ಎನ್ನುವ ಮುಂದಾಲೋಚನೆ ಮಾಡಿ ಪರಿಷ್ಕರಿಸಲಾಗಿದೆ ಎಂದು ವಿವರಿಸಿದರು.

ಕಳೆದ ಮೂರು ವರ್ಷಗಳಲ್ಲಿ ವಿವಿ ಸಾಗರಕ್ಕೆ 15-16 ಟಿಎಂಸಿ ನೀರು ಹರಿದಿದೆ. ಬೇಸಿಗೆ ಕಾಲದಲ್ಲಿ ವೇದಾವತಿ ನದಿ ಹರಿದು ಚಳ್ಳಕೆರೆ, ಮೊಳಕಾಲ್ಮೂರು ಭಾಗಕ್ಕೆ ನೀರು ಸಿಕ್ಕಿದೆ. ಇದಕ್ಕೆ ಸರ್ಕಾರ 95ರಿಂದ 100 ಕೋಟಿ ರೂ. ವಿದ್ಯುತ್‌ ಖರ್ಚು ಮಾಡಿದೆ. ಸರ್ಕಾರ ಹಣ, ನೀರು, ಅಧಿಕಾರಿಗಳು ಸೇರಿದಂತೆ ಎಲ್ಲ ವ್ಯವಸ್ಥೆ ಕೊಟ್ಟಿದೆ. ರೈತರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಎಂ. ಶಂಕ್ರಪ್ಪ, ಪತ್ರಕರ್ತ ಎಂ.ಎನ್. ಅಹೋಬಲಪತಿ ಮಾತನಾಡಿದರು. ಚಿಕ್ಕಪ್ಪನಹಳ್ಳಿ ಷಣ್ಮುಖ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಭದ್ರಾ ಮೇಲ್ದಂಡೆ ಮುಖ್ಯ ಎಂಜಿನಿಯರ್‌ ಇ. ರಾಘವನ್‌, ರೈತ ಮುಖಂಡರಾದ ಕೆ.ಪಿ. ಭೂತಯ್ಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬಸ್ತಿಹಳ್ಳಿ ಸುರೇಶ್‌ಬಾಬು, ಜಿ.ಸಿ. ಸುರೇಶ್‌ಬಾಬು ಇತರರು ಇದ್ದರು.

ಚೆಲುವರಾಜ್‌ ಅವರನ್ನು ನೋಡಿದಾಗ ವಿಶ್ವೇಶ್ವರಯ್ಯ, ಬಾಳೆಕುಂದ್ರಿ ನೆನಪಾಗುತ್ತಾರೆ. ಅವರು ಮಾಡಿದ ಕೆಲಸಗಳು ನೂರಾರು ವರ್ಷ ನೆನಪಿನಲ್ಲಿ ಉಳಿಯುತ್ತವೆ. -ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವರು

ಭದ್ರಾ ಮೇಲ್ದಂಡೆ ಬಗ್ಗೆ ಅವೈಜ್ಞಾನಿಕ ಯೋಜನೆ ಎಂಬ ಟೀಕೆಗಳಿದ್ದವು. ಈಗ ನೀರು ಹರಿಸುವ ಮೂಲಕ ಟೀಕೆ ಮಾಡಿದವರಿಗೆ ಉತ್ತರ ನೀಡಲಾಗಿದೆ. ಈ ಎಲ್ಲಾ ಸಂದರ್ಭದಲ್ಲಿ ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸದೆ ಯೋಜನೆಯ ಸಾಕಾರಕ್ಕೆ ಶ್ರಮಿಸಿದ್ದಾರೆ. -ಚೆಲುವರಾಜ್‌, ಭದ್ರಾ ಮೇಲ್ದಂಡೆ ಯೋಜನೆ ನಿವೃತ್ತ ಸಿಇ

Advertisement

Udayavani is now on Telegram. Click here to join our channel and stay updated with the latest news.

Next