Advertisement

ನೀರಂತೆ ನೀರೆ 

06:00 AM Jun 01, 2018 | |

ನೀರಿಗೂ ನೀರೆಗೂ ಅದೇನು ಹೋಲಿಕೆಯೋ ತಿಳಿಯದು. ಎರಡೂ ಕೂಡಾ ನವುರಾದ ಸುಖವನ್ನು ಎಲ್ಲರೆದುರು ತೇಲಿಸಿ ತೋರಿಸುತ್ತ, ದುಃಖದ ಭಾರವನ್ನು ತನ್ನಾಳದೊಳಗೆ ಮುಳುಗಿಸಿಕೊಳ್ಳುತ್ತವೆ. ಹಾಗೆ ತನ್ನ ಸಂಸಾರದ ಎಲ್ಲ ಸಂಕಷ್ಟಗಳನ್ನು ಪಾಲಿಗೆ ಬಂದದ್ದು ಪಂಚಾಮೃತ ಎಂದು ಸಹಿಸಿಕೊಂಡು ಬದುಕು ಸವೆಸಿದ್ದಳು ನಾಗಿ. ಗಂಡ ಕುಡುಕನಾದರೆ ಹೆಣ್ಣಿನ ಬಾಳು ಬಂದಳಿಕೆ ಹಿಡಿದ ಮರದಂತೆ ಸೊರಗುವುದೆಂಬ ಸತ್ಯ ಅವಳಿಗೆ ಮದುವೆಯಾದ ವರ್ಷದಲ್ಲಿಯೇ ಅರಿವಾಗಿತ್ತು. ನಾಲ್ಕು ಮಕ್ಕಳನ್ನು ಸಾಲಾಗಿ ಉಡಿಗೆ ಹಾಕಿದ ಗಂಡುಗಲಿ ರಾಮನಿಗೆ ಅವುಗಳ ಊಟ ಬಟ್ಟೆಯ ಚಿಂತೆಯೇನೂ ಇರಲಿಲ್ಲ. ಸದಾ ಹೆಂಡತಿಯ ದುಡಿಮೆಯನ್ನು ಕದ್ದು ಗಡಂಗಿಗೆ ಸುರಿಯುವ ಉಪಾಯವನ್ನು ಅರಸುವುದರಲ್ಲೇ ಅವನು ವ್ಯಸ್ತನಾಗಿದ್ದ. ಚತುರೆ ನಾಗಿ ತನ್ನ ಪುಡಿಗಾಸನ್ನು ಅಡಗಿಸಿಡುವ ಹೊಸ ಹೊಸ ಜಾಗಗಳನ್ನು ಅರಸುತ್ತ, ಅವನು ನೀಡುವ ಚಿತ್ರಹಿಂಸೆಯನ್ನೆಲ್ಲ ಮಕ್ಕಳಿಗಾಗಿ ಸಹಿಸುತ್ತ, ತನ್ನೆಲ್ಲ ನೋವನ್ನು ನಟ್ಟಿಯ ಗದ್ದೆಯಲ್ಲಿ ಹಾಡಾಗಿ ಹಾಡುತ್ತ ಹೊಳೆಯಂತೆ ಹರಿಯುತ್ತಿದ್ದಳು. 

Advertisement

ಆ ದಿನ ಅವಳು ಕೆಲಸ ಮುಗಿಸಿ ಬಂದಾಗ ಮನೆಯೆದುರು ಬೆಂಕಿ ಉರಿಯುತ್ತಿತ್ತು. ಕುಡಿಯಲು ಹಣ ಸಿಗದ ಕಿಚ್ಚಿಗೆ ರಾಮ ಮನೆಯಲ್ಲಿರುವ ಅರಿವೆಯನ್ನೆಲ್ಲ ಒಟ್ಟುಗೂಡಿಸಿ ಬೆಂಕಿಯಿಟ್ಟಿದ್ದ. ಮೂರೂ ಮಕ್ಕಳು ಮೈಮೇಲೆ ಇದ್ದ ಬಟ್ಟೆಯಲ್ಲದೇ ಬೇರೇನೂ ಇಲ್ಲದ ನೋವಿನಲ್ಲಿ ಗುಡಿಸಲಿನ ಮೂಲೆ ಸೇರಿ ಅಳುತ್ತ ಮಲಗಿದ್ದವು. ಅವಳ ದುಃಖದ ಕಟ್ಟೆಯೊಡೆದಿತ್ತು. ಹೇಳಿಕೊಳ್ಳಲು ತವರೆಂಬ ತಂಪಿನ ಆಶ್ರಯವೂ ಅವಳಿಗಿರಲಿಲ್ಲ. ಇನ್ನಿವನ ಕುಡಿತವನ್ನು ನಿಲ್ಲಿಸುವೆನೆಂಬ ಆವೇಶದಲ್ಲಿ ಸೀದಾ ಗಡಂಗಿನ ಬಾಗಿಲಿಗೆ ಹೋಗಿ ಅಬ್ಬರಿಸಿದಳು, “”ಯಾರಾದ್ರೂ ನಾಳೆಯಿಂದ ನನ್ನ ಗಂಡನಿಗೆ ಕುಡಿಯಲು ಕೊಟ್ಟಿರೋ ನಿಮ್ಮ ಮನೆ ನಾಶವಾಗ್ತದೆ ನೋಡಿ”  ಇವಳ ಆವೇಶಕ್ಕೆ ಜಗ್ಗುವ ಅಳ್ಳೆದೆಯವರ್ಯಾರೂ ಅಲ್ಲಿರಲಿಲ್ಲ. “”ನಿನ್ನ ಗಂಡ ದುಡ್ಡು ಕೊಟ್ಟರೆ ನಾವು ಕುಡಿಲಿಕ್ಕೆ ಕೊಡೂದೆ. ಅದು ನಮ್ಮ ಉದ್ಯೋಗ ತಿಳೀತಾ?  ಕುಡೀಬಾರದಂದ್ರೆ ಗಂಡನ್ನ ಉಡಿಯಲ್ಲಿಟ್ಕೊà” ಎಂದು ಉಡಾಫೆಯ ಮಾತನ್ನಾಡಿದರು. ಬೇಸಿಗೆಯ ಹೊಳೆಯಂತೆ ನಾಗಿಯ ಆವೇಶ ಮೆಲ್ಲನೆ ಇಳಿಯಿತು. ಇವನಿಗೆ ದುಡ್ಡೇ ಸಿಗದಂತೆ ಮಾಡುವ ಹೊಸ ಉಪಾಯವೊಂದನ್ನು ಯೋಚಿಸಿ ಒಡೆಯರ ಮನೆಯ ಕಡೆಗೆ ನಡೆದಳು. 

ಮನೆಯೊಡತಿ ಬಂದ ಕಾರಣವನ್ನು ವಿಚಾರಿಸಿದಾಗ ಅವಳ ದುಃಖ ವೆಲ್ಲವೂ ಮಾತಾಗಿ ಹರಿಯಿತು. ಮನೆಯಲ್ಲಿರುವ ಅರಿವೆಯನ್ನೆಲ್ಲ ಸುಟ್ಟ ಗಂಡನ ದುಷ್ಟತನದ ವರದಿಯನ್ನು ಅಳುತ್ತಳುತ್ತಲೇ ಹೇಳಿದಳು. ಒಡೆಯರಿಗೆ ಹೇಳಿ ಅವನ ಕೈಗೆ ದುಡ್ಡು ಕೊಡದೇ ಅವನ ಸಂಬಳವನ್ನೆಲ್ಲ ತನ್ನ ಕೈಗೆ ಕೊಡುವಂತೆ ಮಾಡಲು ವಿನಂತಿಸಿದಳು. ಮನೆಯೊಡೆಯ ಇವಳ ಮಾತನ್ನು ಕೇಳಿ ನಕ್ಕುಬಿಟ್ಟರು. “”ಕೆಲಸ ಮಾಡುವವನು ಅಂವ. ಅವನ ಕೈಗೆ ದುಡ್ಡು ಕೊಡಬೇಕಾದದ್ದು ನ್ಯಾಯ. ಅದು ಬಿಟ್ಟು ಅವನ ಸಂಬಳವನ್ನ ನಿನ್ನ ಕೈಗೆ ಕೊಟ್ಟರೆ ದೇವರು ಮೆಚ್ಚುತ್ತಾನೆಯೆ?” ಎಂದು ನ್ಯಾಯ ತೀರ್ಮಾನ ಮಾಡಿದರು. ನಾಗಿ ಬಂದ ದಾರಿಗೆ ಸುಂಕವಿಲ್ಲದೇ ಮನೆಯ ದಾರಿ ಹಿಡಿದಳು.

ಮಕ್ಕಳಿಗೊಂದು ತುತ್ತು ಉಣಿಸಿ ಬರಿನೆಲದಲ್ಲಿ ಮಲಗಿಸಿದ ನಾಗಿಗೆ ಹಸಿವೆ, ನಿದ್ರೆಯ ಪರಿವೆಯಿರಲಿಲ್ಲ. ಈಗ ಸ್ನಾನ ಮಾಡಿದರೂ ಉಡಲು ಇನ್ನೊಂದು ಸೀರೆಯಿಲ್ಲ. ಕುಡಿದು ಬರುವ ಗಂಡನ ಬಡಿಗೆಯಿಂದ ತಪ್ಪಿಸಿಕೊಳ್ಳುವ ಚೈತನ್ಯವೂ ಉಳಿದಿಲ್ಲ. ಸುತ್ತುವರೆದ ಕತ್ತಲು ತನ್ನ ಬದುಕನ್ನೂ ಆವರಿಸುತ್ತಿದೆ ಅನಿಸಿತು ಅವಳಿಗೆ. ಬದುಕಿ ಮಾಡುವುದಾದರೂ ಏನು? ಎಂದೊಮ್ಮೆ ಅನಿಸಿದರೆ, ತಾನು ಸತ್ತರೆ ಮಕ್ಕಳ ಗತಿಯೇನು? ಎಂಬ ಯೋಚನೆಯೂ ಜೊತೆಯಾಗಿ ಬಂತು. ಊರ ಮುಂದಿನ ಹೊಳೆಗೆ ಮಕ್ಕಳನ್ನು ದೂಡಿ, ತಾನೂ ಸತ್ತರೆ ಎಲ್ಲ ಚಿಂತೆಗಳನ್ನೂ ಒಮ್ಮೆಲೆ ಕಳಕೊಂಡ ನಿರಾಳಭಾವ ಅವಳನ್ನು ಆವರಿಸಿತು. ಆದರೆ ಮರುಕ್ಷಣದಲ್ಲಿಯೇ ನಗರದ ಹಾಸ್ಟೆಲ್‌ನಲ್ಲಿ ಓದುತ್ತಿರುವ ದೊಡ್ಡ ಮಗನ ಚಿತ್ರ ಕಣ್ಮುಂದೆ ಬಂತು. ಕಲಿಯುವುದರಲ್ಲಿ ಅವನ ಜಾಣತನವನ್ನು ಮೆಚ್ಚಿ, ಹಳ್ಳಿಯ ಮಾಸ್ತರರೇ ಅವನನ್ನು ಮುಂದೆ ಓದಲೆಂದು ಪೇಟೆಯ ಹಾಸ್ಟೆಲ್‌ಗೆ ಸೆರಿಸಿದ್ದರು. ಕತ್ತಲೆಯಲ್ಲಿ ಕುಳಿತ ನಾಗಿಗೆ ಅವನೊಂದು ಬೆಳಕಿನ ಕಿರಣವಾಗಿ ಕಂಡು, ಸಾಯುವ ಯೋಚನೆಯನ್ನು ಬಿಟ್ಟು ಬದುಕಿನ ಕಡೆಗೆ ಮುಖಮಾಡಿದಳು.

ನಿದ್ದೆಯೋ, ಎಚ್ಚರವೋ ತಿಳಿಯದ ಆ ರಾತ್ರಿಯಲ್ಲಿ ಅವಳಿಗೆ ಊರ ದೇವಿಯದ್ದೇ ನೆನಪು. ಅವಳಮ್ಮ ಯಾವಾಗಲೂ ಹೇಳುತ್ತಿದ್ದಳು ಊರದೇವಿಯ ವಿಗ್ರಹ ಗದ್ದೆಯ ಕೆಲಸ ಮಾಡುವಾಗ ಅವಳ ಮನೆತನದವರಿಗೇ ಸಿಕ್ಕಿದ್ದಂತೆ. ಕೃಷಿಕರಾದ ತಮಗೆ ಪೂಜಿಸಲು ಸಮಯವೆಲ್ಲಿದೆಯೆಂದು ಅದನ್ನವರು ಪೂಜಾರಿಯ ಮನೆತನದವರಿಗೆ ನೀಡಿ ಗುಡಿಯನ್ನು ಕಟ್ಟಿಸಿದರಂತೆ. ಆ ತಾಯಿ ತನ್ನನ್ನು ಎಂದಿಗೂ ಕೈಬಿಡಲಾರಳು ಎನಿಸಿತು. ಹುಕಿ ಬಂದಾಗ ಪಲ್ಲಕ್ಕಿಯನ್ನೇರಿ ಇಡಿಯ ಊರನ್ನು ಸುತ್ತಿಬರುವ, ಇಲ್ಲಸಲ್ಲದ್ದನ್ನು ಮಾಡಿದ್ದನ್ನು ಕಂಡಾಗ ಪೂಜಾರಿಯ ಮೈಯೆÂàರಿ ಬಂದು ಭೂಮಿ ಬಾನೊಂದಾಗುವಂತೆ ಅಬ್ಬರಿಸುವ ಆ ತಾಯಿಯ ನೆನಪಾದದ್ದೇ ಅವಳೊಳಗೆ ಹೊಸದೊಂದು ಚೈತನ್ಯ ಮೂಡಿತು. ಹೀಗೆ ನಿರುಮ್ಮಳವಾಗುವ ಹೊತ್ತಿನಲ್ಲಿಯೇ ರಾಮನ ಘನಘೋರ ಸಂಗೀತ ಕೇಳಿಬರತೊಡಗಿತು. ಎಂದಿನಂತೆ ದೀಪವನ್ನೂ ಬೆಳಗದೇ ಕತ್ತಲೆಯಲ್ಲಿ ಬಿದ್ದುಕೊಂಡ ಹೆಂಡತಿಯನ್ನು ಕಂಡ ಅವನ ಅಮಲಾನಂದ ಕೋಪವಾಗಿ ಪರಿವರ್ತನೆಯಾಯಿತು. ಕಾಲಿನಿಂದ ಹೆಂಡತಿಯನ್ನು ಒದೆಯುತ್ತ ಅವಾಚ್ಯವಾಗಿ ನಿಂದಿಸತೊಡಗಿದ. 

Advertisement

ಅದೆಲ್ಲಿತ್ತೋ ಅಂತಹ ಆವೇಶ! ಪ್ರವಾಹದ ಕಟ್ಟೆಯೊಡೆದ ಹೊಳೆಯಂತೆ ನಾಗಿ ಒಮ್ಮೆಲೇ ಎದ್ದು ಆರ್ಭಟಿಸತೊಡಗಿದಳು. ತನ್ನ ತಲೆಗೂದಲನ್ನು ಮುಖದ ತುಂಬೆಲ್ಲ ಹರಡಿಕೊಂಡು, ಮೈಮೇಲಿನ ಬಟ್ಟೆಯ ಹಂಗಿಲ್ಲದೇ ರಣಚಂಡಿಯಂತೆ ರಾಮನ ಜುಟ್ಟನ್ನು ಹಿಡಿದು ತಿರುಗಿಸುತ್ತ, ಥೇಟ್‌ ಪೂಜಾರಿಯ ಮೈಮೇಲೆ ಬಂದ ಮಾರಿಯಂತೆ ಕುಣಿಯತೊಡಗಿದಳು. ಮಬ್ಬು ಬೆಳಕಿನಲ್ಲಿ ಅವಳ ಕಣ್ಣುಗಳು ಕೆಂಡದುಂಡೆಯಂತೆ ಹೊಳೆಯುತ್ತಿದ್ದವು. ಅನಿರೀಕ್ಷಿತವಾದ ಈ ಆಘಾತಕ್ಕೆ ರಾಮನ ತಲೆಗೇರಿದ ಅಮಲೆಲ್ಲ ಇಳಿದು ಸಹಾಯಕ್ಕಾಗಿ ಆತ ನೆರೆಕೆರೆಯವರನ್ನೆಲ್ಲ ಕೂಗತೊಡಗಿದ. ನಾಗಿಯ ಆರ್ಭಟವನ್ನು ಕಂಡ ಊರಿನವರೆಲ್ಲ ಅವಳ ಮೈಮೇಲೆ ಬಂದುದು ದೇವಿಯೇ ಎಂದು ತೀರ್ಮಾನಿಸಿ, ಸಿಂಗಾರಕೊನೆಯ ಹರಕೆನೀಡಿ, ಬಂದ ಕಾರಣವ ಕೇಳಿದರು. “ನನ್ನ ಮಗಳ ಕಷ್ಟ ಪರಿಹರಿಸದೇ ಇರಲಾರೆ, ನನ್ನ ಕುಲದ ಮಗಳು ಅವಳು’ ಎಂದೆಲ್ಲ ದೇವಿ ತೊದಲುತ್ತ¤ ನುಡಿದಾಗ ರಾಮ ಅವಳಡಿಗೆ ಎರಗಿ ಶರಣಾದ. 

ಮುಂದೆ ಎಲ್ಲೋ ಆಸೆ ತಡೆಯಲಾಗದೇ ಚೂರು ಕುಡಿದ ದಿನವೆಲ್ಲ ರಾಮ ಮನೆಯ ಹೊರಗೇ ಮಲಗಿ, ಊರ ದೇವಿಗೆ ತಪ್ಪು ಕಾಣಿಕೆಯಿಟ್ಟೇ ಮನೆಯೊಳಗೆ ಬರುತ್ತಿದ್ದ.  ನಾಗಿದೇವಿ ಮತ್ತೆ ನಾಗಿಯ ಮೈಮೇಲೆ ಬಂದು ಬೊಬ್ಬಿರಿಯಲಿಲ್ಲ.

ಸುಧಾ ಆಡುಕಳ

Advertisement

Udayavani is now on Telegram. Click here to join our channel and stay updated with the latest news.

Next