Advertisement
ಹೌದು, ವಿಶ್ವದ ಅತಿ ಎತ್ತರದ ಹಾರುವ ಪಕ್ಷಿ ಸಾರಸ್ ಕೊಕ್ಕರೆ. ಸಾಮಾನ್ಯ ಕೊಕ್ಕರೆಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುವ ಈ ಹಕ್ಕಿಗಳು ಮನುಷ್ಯರ ಕೈಗೆ ಸಿಗುವುದೇ ಅಪರೂಪ. ಅಂಥದರಲ್ಲಿ ಉತ್ತರ ಪ್ರದೇಶದ ಮಂಧಕ ಎಂಬ ಗ್ರಾಮದಲ್ಲಿ ಆರಿಫ್ ಖಾನ್ ಗುರ್ಜಾರ್ ಎನ್ನುವ ವ್ಯಕ್ತಿಯ ನೆರಳಿನಂತೆ ಈ ಸಾರಸ್ ಹಿಂಬಾಲಿಸುತ್ತೆ. ತೋಟಕ್ಕೆ ಹೋದರೆ ಅಲ್ಲಿಯೂ, ರಸ್ತೆ, ಮನೆ ಎಲ್ಲಿಗೆ ಹೋದರೂ ಆರಿಫ್ ಗೆ ಸಾರಸ್ ಜತೆಗಾರ. ಅವರ ಕೈ ಚಪ್ಪಾಳೆ ಸದ್ದಿಗೆ ರೆಕ್ಕೆ ಬಡಿಯುತ್ತಾ ನಲಿಯುವ ಸಾರಸ್ ಹಾಗೂ ಆರಿಫ್ ನಡುವಿನ ಈ ಅಪೂರ್ವ ಬಾಂಧವ್ಯದ ಬಗ್ಗೆ ಇತ್ತೀಚೆಗಷ್ಟೇ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಸಾರಸ್ ಮತ್ತು ಆರಿಫ್ ಪ್ರೀತಿಗೆ ಜನರು ವಾಹ್ ಎನ್ನುತ್ತಿದ್ದಾರೆ.
ಜೀವ ಉಳಿಸಿದವೇ ಜೀವ!
ಆರಿಫ್ ಅವರ ಹೊಲದಲ್ಲಿ ಹಿಂದೊಮ್ಮೆ ಸಾರಸ್ ಕೊಕ್ಕರೆ ಗಾಯಗೊಂಡು ಬಿದ್ದಿದೆ. ಅದು ಸತ್ತಿದೆ ಎಂದು ಭಾವಿಸಿದ್ದ ಆರಿಫ್, ಅದರ ಬಳಿ ಹೋಗಿ ನೋಡಿದಾಗ ಜೀವವಿದ್ದುದನ್ನು ಕಂಡು, ಮನೆಗೆ ತಂದು ಆರೈಕೆ ಮಾಡಿದ್ದಾರೆ. ಕಾಲಿನ ಗಾಯ ಮಾಯ್ದು, ಚೇತರಿಸಿಕೊಂಡ ಬಳಿಕ ಸಾರಸ್, ಆರಿಫ್ ಅವರ ಮನೆಯ ಸದಸ್ಯನೇ ಆಗಿ ಹೋಗಿದ್ದು, ಅಂದಿನಿಂದ ಆರಿಫ್ ನೆರಳಾಗಿಯೇ ಜತೆಗಿದೆ.