ಲಕ್ನೋ: ಕೆಲವೊಂದು ಹುಚ್ಚುತನ ಎಂತಹ ಘೋರ ದುರಂತಕ್ಕೆ ಸಾಕ್ಷಿಯಾಗಲಿದೆ ಎಂಬುದಕ್ಕೆ ಈ ನಾಲ್ವರು ಯುವಕರ ಘಟನೆಯೇ ಸಾಕ್ಷಿ. ಉತ್ತರಪ್ರದೇಶದ ಪೂರ್ವಾಂಚಲ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ 300 ಕಿಲೋ ಮೀಟರ್ ವೇಗದಲ್ಲಿ ಬಿಎಂಡಬ್ಲ್ಯು ಕಾರನ್ನು ಓಡಿಸಿ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ದಾರುಣವಾಗಿ ಇಹಲೋಕ ತ್ಯಜಿಸಿದ್ದಾರೆ. ಅಷ್ಟೇ ಅಲ್ಲ ಸಾಯುವ ಕೆಲವೇ ಕ್ಷಣದ ಘಟನೆಯ ಫೇಸ್ ಲೈವ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏನಿದು ಹುಚ್ಚು ಸಾಹಸ:
ಸುಲ್ತಾನ್ ಪುರದಿಂದ ದೆಹಲಿಗೆ ನಾಲ್ವರು ಯುವಕರ ತಂಡ ಬಿಎಂಡಬ್ಲ್ಯು ಕಾರಿನಲ್ಲಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಹುಚ್ಚು ಸಾಹಸದಿಂದ ಕಾರನ್ನು ಗಂಟೆಗೆ 300 ಕಿಲೋ ಮೀಟರ್ ವೇಗದಲ್ಲಿ ಚಲಾಯಿಸಿದ್ದರು. ತಾವು ಅತೀ ವೇಗದಲ್ಲಿ ಹೋಗುತ್ತಿರುವುದನ್ನು ಫೇಸ್ ಬುಕ್ ಲೈವ್ ಮಾಡಿದ್ದು, ಒಬ್ಬಾತ ಇಷ್ಟೊಂದು ವೇಗದಲ್ಲಿ ಹೋದರೆ ನಾಲ್ವರು ಸಾಯುತ್ತೇವೆ ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ.
ಡ್ರೈವರ್ ಬಿಎಂಡಬ್ಲ್ಯು ವೇಗವನ್ನು ಹೆಚ್ಚಿಸಿದ್ದು, ಬಳಿಕ ಕಾರಿನ ವೇಗವನ್ನು 230 ಕಿಲೋ ಮೀಟರ್ ಸ್ಪೀಡ್ ಗೆ ಇಳಿಸಿದ್ದ. ಆಗ ಮತ್ತೊಬ್ಬಾತ ಯಾವುದೇ ಕಾರಣಕ್ಕೂ ಬ್ರೇಕ್ ಮೇಲೆ ಕಾಲಿಡಬೇಡ ಎಂದು ಡ್ರೈವರ್ ಗೆ ಹೇಳಿದ್ದು, ಮತ್ತೊಬ್ಬ ಪ್ರಯಾಣಿಕ ನಿಧಾನಕ್ಕೆ ಹೋಗು ಎಂದು ಫೇಸ್ ಬುಕ್ ಲೈವ್ ನಲ್ಲಿ ದಾಖಲಾಗಿದೆ.
ಅತೀಯಾದ ವೇಗದಲ್ಲಿ ಬಿಎಂಡಬ್ಲ್ಯು ಚಲಾಯಿಸುತ್ತಿದ್ದಾಗಲೇ ಎದುರಿನಿಂದ ಬಂದ ಕಂಟೈನರ್ ಟ್ರಕ್ ಗೆ ಡಿಕ್ಕಿ ಹೊಡೆದು ಬಿಟ್ಟಿತ್ತು. ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಟ್ರಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಎಂಜಿನ್ ಮತ್ತು ನಾಲ್ವರ ದೇಹ ದೂರ ಎಸೆಯಲ್ಪಟ್ಟಿತ್ತು. ಇಡೀ ಸ್ಥಳ ರಕ್ತಸಿಕ್ತವಾಗಿತ್ತು ಎಂದು ವರದಿ ವಿವರಿಸಿದೆ.
ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ. ಸಾವನ್ನಪ್ಪಿರುವವರನ್ನು ದೆಹಲಿ ನಿವಾಸಿ ಡಾ.ಆನಂದ್ ಪ್ರಕಾಶ್, ಬಿಹಾರ ನಿವಾಸಿ ಅಖಿಲೇಶ್ ಸಿಂಗ್, ಔರಂಗಬಾದ್ ನಿವಾಸಿಗಳಾದ ದೀಪಕ್ ಕುಮಾರ್ ಮತ್ತು ಉದ್ಯಮಿ ಮುಕೇಶ್ ಎಂದು ಗುರುತಿಸಲಾಗಿದೆ. ಎಲ್ಲರೂ 30 ವರ್ಷದ ಆಸುಪಾಸಿನವರು ಎಂದು ಹೇಳಲಾಗಿದೆ.
ಕಂಟೈನರ್ ಚಾಲಕ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ವರು ಪಾನಮತ್ತರಾಗಿರುವುದಾಗಿ ವರದಿ ತಿಳಿಸಿದೆ.