Advertisement

ಟಿವಿಯಲ್ಲಿ ರಾಮಾಯಣ, ಹಳೇ ಹಾಡು ನೋಡಿ

02:28 PM Apr 13, 2020 | mahesh |

ಜ್ಯೋತಿಕಾ ಹಿರೇಮಠ, ತಾಳಿಕೋಟೆ
ನನ್ನ ಅತ್ತೆ ರಾತ್ರಿ 12ರ ವರೆಗೆ ಸೀರಿಯಲ್‌ ನೋಡುತ್ತಿದ್ದರು. ಈಗ ಟಿವಿ ನ್ಯೂಸ್‌ ನೋಡುತ್ತಾ, ಆತಂಕಿತರಾಗಿದ್ದಾರೆ.
ಕಾಲುಬುಡದಲ್ಲೇ ಏನೋ ಆಯ್ತು ಎಂಬಂತೆ ವರ್ತಿಸುತ್ತಿದ್ದಾರೆ. ವಿಜಯಪುರದಲ್ಲಿ ವೃದ್ಧೆಗೆ ಸೋಂಕು ತಗುಲಿದ
ವಿಷಯ ಕೇಳಿ, ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ಮನೆಯವರಿಗೆಲ್ಲ ಚಿಂತೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಏನು?

Advertisement

ಕೋವಿಡ್-19 ಮಾನವನ ಮೇಲೆ ಜೈವಿಕ ಯುದ್ಧ ಸಾರಿರುವ ಸಂದರ್ಭವನ್ನು traumatic social condition
ಎಂದು ಕರೆಯಬಹುದು. ಯುದ್ಧದ ಸಂದರ್ಭದಲ್ಲಿ ತೋರಬೇಕಾದ ವಿಶೇಷ ಧೈರ್ಯವನ್ನು ನಾವು
ರೂಢಿಸಿಕೊಳ್ಳಬೇಕು. ಆದರೆ, ವ್ಯಕ್ತಿಗೆ ಮೊದಲೇ ಭಯದ ಸ್ವಭಾವವಿದ್ದರೆ, ಇಂಥ ವೇಳೆ ಆತಂಕ ನೂರು ಪಟ್ಟು
ಹೆಚ್ಚುತ್ತದೆ. ನ್ಯೂಸ್‌ ನೋಡುತ್ತಾ ನೋಡುತ್ತಾ, ತನಗೆ ಅಪಾಯವಿದೆ ಎನ್ನುವುದಕ್ಕಿಂತ ಇನ್ನೊಬ್ಬರ ಸಾವು-
ನೋವನ್ನೂ ಇವರು ತಮ್ಮದೇ ಎಂದು ಭಾವಿಸುತ್ತಿದ್ದಾರೆ. ಇದೊಂದು ರೀತಿಯ ಪ್ಯಾನಿಕ್‌ ಅಟ್ಯಾಕ್‌.
ಮನೋವೈದ್ಯರಲ್ಲಿ ಚರ್ಚಿಸಿ, anti anxiety medicine ಕೊಡಿಸಿ. ಈಗಂತೂ ಟೆಲಿ ಮೆಡಿಸಿನ್‌ ಲಭ್ಯವಿದೆ.
ಇವರಿಗೆ ಮಾತ್ರೆಗಳನ್ನು ಕೊಟ್ಟ ನಂತರ, ದೀರ್ಘ‌ ಉಸಿರಾಟವನ್ನು ಹೇಳಿಕೊಡುವ ಅಗತ್ಯವಿದೆ. ಟಿ.ವಿ.ಯಲ್ಲಿ
ರಾಮಾಯಣ, ಮಹಾಭಾರತ, ಹಳೇ ಹಾಡು, ತಮಾಷೆ ಕಾರ್ಯಕ್ರಮಗಳನ್ನು ನೋಡುವಂತೆ ಪ್ರೇರೇಪಿಸಿ.
ಅವರ ಮನಸ್ಸು ಅರಳಿಕೊಳ್ಳುತ್ತದೆ.
●ಡಾ. ಶುಭಾ ಮಧುಸೂದನ್‌, ಮನೋವಿಜ್ಞಾನಿ

ಪಾವನ ವಿನಯ್, ಬೆಂಗಳೂರು
ನಾವು ನಾಯಿ ಸಾಕುತ್ತಿದ್ದೇವೆ. ಇನ್ನು ಒಂದೆರಡು ದಿನಗಳಲ್ಲಿ ಅದರ ಆಹಾರ ಖಾಲಿಯಾಗುತ್ತಿದೆ. ಪೆಟ್‌ ಫ‌ುಡ್‌ ಶಾಪ್‌ಗಳೆಲ್ಲಿ ಮುಚ್ಚಿವೆ. ಅವುಗಳನ್ನು ತೆರೆಯಲು ಅವಕಾಶ ಇಲ್ಲವೇ? ನಾವೀಗ ಏನು ಮಾಡಬಹುದು?

ನಾಯಿಗಳಿಗೆ ಅಹಾರ ಕೊಡುವಂಥ ಪೆಟ್‌ ಅಂಗಡಿಗಳು ಲಾಕ್‌ಡೌನ್‌ ಇರುವವರೆಗೂ ಮುಚ್ಚಲೇಬೇಕಾಗಿರುತ್ತದೆ. ಇಂಥ ಸಂದಿಗ್ಧ
ಸ್ಥಿತಿಯಲ್ಲಿ ಪೆಟ್‌ ಫ‌ುಡ್‌ ಅನ್ನೇ ತಿನ್ನಿಸಬೇಕು ಎನ್ನುವ ಉದ್ದೇಶದಿಂದ ದೂರವಿರುವುದೇ ಉತ್ತಮ. ಹೀಗಾಗಿ, ನಿಮ್ಮ ನಾಯಿಗೆ ನೀವು ಸುಲಭವಾಗಿ ಲಭ್ಯವಾಗುವ ಇಲ್ಲವೇ ಮನೆಯಲ್ಲಿರುವ ಯಾವುದೇ ಆಹಾರವನ್ನು ಕೊಡಿ.
●ಡಾ. ಡಿ.ವಿ. ಗುರುಪ್ರಸಾದ್‌, ನಿವೃತ್ತ ಡಿಜಿಪಿ

ಟಿ. ಸಣ್ಣಪ್ಪ ಗೌಡ, ಮದ್ದೂರು
ನನಗೆ 65 ವರ್ಷ. ಬಿಪಿ, ಶುಗರ್‌ ಇದೆ. ವಯಸ್ಸಾದ ಮೇಲೆ ರೋಗನಿರೋಧಕ ಶಕ್ತಿ ಕಡಿಮೆ ಅಂತಾರೆ. ಈ ಕೊರೊನಾದಿಂದ ನನ್ನೊಳಗೆ ಇನ್ನೂ ಆತಂಕ ಹೆಚ್ಚಾಗುತ್ತಿದೆಯಲ್ಲಾ?

Advertisement

ವೃದ್ಧಾಪ್ಯದವರೆಗೂ ರೋಗನಿರೋಧಕ ಶಕ್ತಿ ಉಳಿಸಿಕೊಳ್ಳುವುದು ಆಯಾಯ ವ್ಯಕ್ತಿಯ ಆಹಾರ, ಅಭ್ಯಾಸ, ವಿಚಾರ, ವಂಶವಾಹಿಗಳನ್ನು ಅವಲಂಬಿಸಿರುತ್ತದೆ. ಬಿ.ಪಿ., ಶುಗರ್‌ ಅನ್ನುವುದು ಕಾಯಿಲೆಗಿಂತ ಹೆಚ್ಚಾಗಿ ಮುಪ್ಪಿನ ಅಕಾಲಿಕ ಲಕ್ಷಣಗಳು. ಕ್ರಮಬದ್ಧ ಚಿಕಿತ್ಸೆ, ಆಹಾರ, ಆಚಾರ, ವಿಚಾರಗಳ ಮೇಲೆ ಭರವಸೆ ಇಡಿ. ತಮ್ಮ ಶಕ್ತಿಯ ಅರ್ಧವನ್ನು ಮಾತ್ರ ಬಳಸಿ. ಉಳಿದರ್ಧ ಉಳಿಸಿಕೊಳ್ಳಿ. ಸುಖವಾಗಿರಿ. ನಿತ್ಯ ತಲೆ ಸ್ನಾನ ಮಾಡಿ. ದಿನ ಬಿಟ್ಟು ದಿನ ಹೀಗೆ ಮಾಡಿ. ಕೊಬ್ಬರಿ ಎಣ್ಣೆ/ ಎಳ್ಳೆಣ್ಣೆ ಸಂಗಡ ಸಮ ಭಾಗ ತುಪ್ಪ ಬಿಸಿಮಾಡಿಕೊಳ್ಳಿ. ನೆತ್ತಿಗೆ ಅದನ್ನು ಹಚ್ಚಿಕೊಳ್ಳಿ. ಐದೇ ನಿಮಿಷದಲ್ಲಿ ಸುಖೋಷ್ಣ ಜಲದಲ್ಲಿ ತಲೆಸ್ನಾನ ತುಂಬಾ ಒಳ್ಳೆಯದು. ಹೊಟ್ಟೆ ಹಸಿವಾದಾಗ ಮಾತ್ರ ಆಹಾರ ಸೇವನೆ ಒಳಿತು. ಕುಳಿತ ಭಂಗಿಯ ಹಗಲು ನಿದ್ದೆ ಕ್ಷೇಮ. ಹದ ಬಿಸಿ ನೀರು ಸಾಕಷ್ಟು ಕುಡಿಯುತ್ತಿರಿ. ಸಹಜ ಮಲ ಪ್ರವೃತ್ತಿಗೆ ಅದು ಸಹಕಾರಿ. ರಾತ್ರಿ ಜಾಗರಣೆ ಬೇಡ.
●ಡಾ. ಸತ್ಯನಾರಾಯಣ ಭಟ್‌, ಆಯುರ್ವೇದ ತಜ್ಞರು

ಪ್ರಭಾಕರ ರಾವ್‌, ಬೆಂಗಳೂರು
ಕೋವಿಡ್-19 ಹೊಡೆತದಿಂದ ಈಗ ಷೇರು ಮಾರುಕಟ್ಟೆಗಳು ಕುಸಿದು ಬಿದ್ದಿವೆ. ಹೀಗಿರುವಾಗ ಮುಂದೆ ನಮ್ಮ ಕೈಸೇರಬೇಕಾದ ಎಲ್ಐಸಿಯ ಮೆಚೂರಿಟಿ ಹಣದಲ್ಲಿ ಇಳಿಕೆಯಾಗಲಿದೆಯೇ? ಇನ್ನು ಮ್ಯೂಚುವಲ್‌ ಫ‌ಂಡ್‌ಗಳನ್ನು ನಾವೆಷ್ಟು ನಂಬಬಹುದು?

ಕೋವಿಡ್-19 ವಿಪತ್ತಿನಿಂದಾಗಿ ಜಾಗತಿಕ ಮಟ್ಟದಲ್ಲಿಯೇ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ. ಎಲ್ಲರಿಗೂ ತಿಳಿದಿರುವಂತೆ ಷೇರು ಮಾರುಕಟ್ಟೆ ಈಗಾಗಲೇ ಕುಸಿದಿದೆ. ಆರ್‌ಬಿಐ ಕೂಡಾ ಬಡ್ಡಿ ದರವನ್ನು ಇಳಿಸಿದೆ. ಇದರಿಂದಾಗಿ ಎಲ್ಲಾ ವಿತ್ತೀಯ ಹೂಡಿಕೆಗಳ ಮೇಲೂ ಪ್ರತಿಫ‌ಲದಲ್ಲಿ ಇಳಿಕೆ ಕಾಣಲಿದೆ. ಎಲ್‌ಐಸಿ ಪಾಲಿಸಿಗಳ ವಿಚಾರ ಹೇಳುವುದಾದರೆ, ಸಾಮಾನ್ಯ ಪಾಲಿಸಿಗಳ ಬೋನಸ್‌ ಮತ್ತು ಮೆಚ್ಯೂರಿಟಿ ಮೊತ್ತದಲ್ಲಿ ಅಷ್ಟೊಂದು ಇಳಿಕೆ ಉಂಟಾಗದು. ಎಲ್‌ಐಸಿಯು ಬಡ್ಡಿದರಗಳ ಏರಿಳಿತಗಳನ್ನು ಸಂಭಾಳಿಸಿ
ಕೊಂಡು ಹೋಗುವಷ್ಟು ಆರ್ಥಿಕ ಮತ್ತು ಮಾನಸಿಕ ದೃಢತೆಯನ್ನು ಇಟ್ಟುಕೊಂಡಿದೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಿ ಪ್ರತಿಫ‌ಲ ನೀಡುವ ಯುಲಿಪ್‌ ಮಾದರಿಯ ಪಾಲಿಸಿಗಳನ್ನು ಕೊಂಡವರಿಗೆ ಈ ಮಾರುಕಟ್ಟೆ ಕುಸಿತ ನೂರಕ್ಕೆ ನೂರು ಶತ ಪರಿಣಾಮ ತೋರಿಸಲಿದೆ. ಶೇರುಗಟ್ಟೆ ಆಧಾರಿತ ಹೂಡಿಕೆಗಳೆಲ್ಲವೂ ದೊಡ್ಡ ಮಟ್ಟಿನ ರಿಸ್ಕ್ ಅನ್ನು ಒಳಗೊಂಡಿರುತ್ತವೆ ಮತ್ತು ಅದಕ್ಕೆ ಸಿದ್ಧರಾಗಿಯೇ ಅಂತಹ ಹೂಡಿಕೆಗಳನ್ನು ಮಾಡಬೇಕು. ಪ್ರತಿ ಆಕರ್ಷಕ ಏರಿಕೆಯ ಗರ್ಭದಲ್ಲೂ ಒಂದು ಅಪಾಯ ಕಾರಿ ಕುಸಿತ ಅಡಗಿದೆ ಎನ್ನುವುದನ್ನು ಅರಿತಿರಬೇಕು. ಇಕ್ವಿಟಿ ಮಾದರಿಯ ಮ್ಯೂಚುವಲ್‌ ಫ‌ಂಡುಗಳಿಗೂ ಇದೇ ಮಾತು ಅನ್ವಯಿಸುತ್ತದೆ.
●ಜಯದೇವಪ್ರಸಾದ ಮೊಳೆಯಾರಿ

Advertisement

Udayavani is now on Telegram. Click here to join our channel and stay updated with the latest news.

Next