Advertisement

ಟೆಕ್ಕಿ ಕುಟುಂಬದ ಮೇಲೆ ನಿಗಾ

12:34 AM Mar 03, 2020 | Lakshmi GovindaRaj |

ಬೆಂಗಳೂರು: ತೆಲಂಗಾಣ ಮೂಲದ ಕೊರೊನಾ ಸೋಂಕಿತ ವ್ಯಕ್ತಿಯು ಫೆ.19 ರಿಂದ 21ರವರೆಗೆ ಎರಡು ದಿನ ಬೆಂಗಳೂರು ನಗರದಲ್ಲಿ ವಾಸವಿದ್ದರಿಂದ ಆ ವೇಳೆ ಆತನ ಜತೆ ಯಾರೆಲ್ಲಾ ನೇರಸಂವಹನ ನಡೆಸಿದ್ದಾರೋ ಅವರಿಗೂ ರೋಗ ತಗುಲಿರುವ ಸಾಧ್ಯತೆಗಳಿವೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿ ಗಳು ಆತನ ಸಂಪರ್ಕದಲ್ಲಿದ್ದ ಎಲ್ಲರ ಗುರುತು ಪತ್ತೆಗೆ ಮುಂದಾಗಿದ್ದಾರೆ.

Advertisement

ಸೋಂಕಿತ ವ್ಯಕ್ತಿಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಳಿದ ಕ್ಷಣದಿಂದ ಎರಡು ದಿನ ವಾಸವಿದ್ದ ಕಡೆಗಳಲ್ಲಿ ಸಂವಹನ ನಡೆಸಿದ ಎಲ್ಲಾ ವ್ಯಕ್ತಿಗಳ ರಕ್ತ ಪರೀಕ್ಷೆ ಮಾಡುವ ಜತೆಗೆ ಆರೋಗ್ಯ ನಿಗಾವಹಿಸಲು ನಿರ್ಧರಿಸಲಾಗಿದೆ. ಈಗಾಗಲೇ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕುಟುಂಬ ಸದಸ್ಯರೊಂದಿಗೆ ಹಾಗೂ ಬೆಂಗಳೂರಿನ ಆತನ ಸಹಚರರ ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಗುರುತು ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.

ಆರೋಗ್ಯ ಇಲಾಖೆಯಿಂದ ಅಗತ್ಯ ವ್ಯವಸ್ಥೆ: ಶಂಕಿತರ ‌ತಪಾಸಣೆ ಹಾಗೂ ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ ಪ್ರತ್ಯೇಕ ವಾರ್ಡ್‌ ಗಳನ್ನು ಮೀಸಲಿಡಲಾಗಿದೆ. ಬೆಂಗಳೂರಿನ ರಾಜೀವ್‌ ಗಾಂಧಿ ಆಸ್ಪತ್ರೆಯ ಎನ್‌ಐವಿ ಕೇಂದ್ರ ಹಾಗೂ ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಕೊರೊನಾ ಸೋಂಕಿತರ ರಕ್ತದ ಮಾದರಿಗಳ ಪರೀಕ್ಷೆಗೆ ಸೌಲಭ್ಯವಿದ್ದು, ರಕ್ತ ಪರೀಕ್ಷೆ ವರದಿಗಳು ಶೀಘ್ರ ಲಭ್ಯವಾಗಲಿದೆ. ಇನ್ನು ಜ. 21ರಿಂದ ವಿಮಾನ ನಿಲ್ದಾಣಗಳಲ್ಲಿ ನಿತ್ಯ ಪ್ರಯಾಣಿಕರ ತಪಾಸಣೆ ಮಾಡಲಾಗುತ್ತಿದ್ದು, ಈವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲ.

ರೋಗ ಲಕ್ಷಣಗಳಿದ್ದರೆ ಪರೀಕ್ಷಿಸಿಕೊಳ್ಳಿ: ಕೊರೊನಾ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ನಗರ ಪ್ರದೇಶ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಸಾರ್ವಜನಿ ಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ತೀವ್ರ ಜ್ವರ, ತಲೆ ನೋವು, ಮೈಕೈ ನೋವು, ಮೂಗು ಸೋರುವಿಕೆ, ಉಸಿ ರಾಟದ ತೊಂದರೆಯಂತಹ ಲಕ್ಷಣಗಳು ಕಂಡು ಬರುತ್ತವೆ. ಮಹಾ ನಗರಗಳಲ್ಲಿ ನ್ಯೂಮೋನಿಯಾ ಲಕ್ಷಣಗಳು ಕಂಡು ಬಂದವರು ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ.ಪ್ರಕಾಶ್‌ ಕುಮಾರ್‌ ತಿಳಿಸಿದ್ದಾರೆ.

ಗಡಿ ಜಿಲ್ಲೆಗಳಲ್ಲಿ ನಿಗಾಕ್ಕೆ ಸೂಚನೆ: ಕೇರಳ ಹಾಗೂ ತೆಲಂ ಗಾಣದಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆ ರಾಜ್ಯದ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಉಡುಪಿ, ಮೈಸೂರು ಸೇರಿದಂತೆ ತೆಲಂಗಾಣ ಗಡಿ ಭಾಗದ ಜಿಲ್ಲೆಗಳಲ್ಲಿ ನಿಗಾಕ್ಕೆ ಆರೋಗ್ಯ ಇಲಾಖೆ ಸೂಚಿಸಿದೆ.

Advertisement

ಇಂದು ಬೆಳಗ್ಗೆ ಸಭೆ: ಹೈದರಾಬಾದ್‌ನಲ್ಲಿನ ಕೊರೊನಾವೈರಸ್‌ ಸೋಂಕು ಪೀಡಿತ ವ್ಯಕ್ತಿಯು ಬೆಂಗಳೂರಿನಿಂದ ತೆರಳಿದ್ದಾಗಿ ತಿಳಿದುಬಂದಿದೆ. ಆದ್ದರಿಂದ ಆ ವ್ಯಕ್ತಿಯ ಸ್ಥಳೀಯ ವಿಳಾಸದಲ್ಲಿ ನೆಲೆಸಿರುವ ಎಲ್ಲಾ ಸದಸ್ಯರನ್ನು ಈಗಾಗಲೇ ಗುರುತಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಜತೆಗೆ, ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಬೆಳಗ್ಗೆ ನನ್ನ ಅಧಿಕೃತ ನಿವಾಸದಲ್ಲಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯ ದರ್ಶಿಗಳು, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಈಗಾಗಲೇ ತಿಳಿಸಿದಂತೆ ಸರ್ಕಾರವು ಸೋಂಕು ಹರಡದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ವಿದೇಶದಿಂದ ಬಂದಿದ್ದರೆ ಎಚ್ಚರ ವಹಿಸಿ: ಚೀನಾ ಸೇರಿದಂತೆ ಕೊರೊನಾ ಸೋಂಕು ಹೆಚ್ಚಿರುವ ದೇಶಗಳಿಗೆ ಭೇಟಿ ನೀಡಿದ ವ್ಯಕ್ತಿಗಳು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ತಪಾಸಣೆ ವೇಳೆ ಕಡ್ಡಾಯ ವಾಗಿ ಚೀನಾಗೆ ಭೇಟಿ ನೀಡಿರುವುದನ್ನು ವೈದ್ಯರಿಗೆ ತಿಳಿಸ  ಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಂಕಿ-ಅಂಶ (ಜನವರಿ 21 ರಿಂದ ಈವರೆಗೂ)
-39,391 ರೋಗಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೊಳಪಟ್ಟವರು.

-180 ಪ್ರಯಾಣಿಕರು ಚೀನಾ ವಿವಿಧ ನಗರಗಳಿಂದ ಬಂದವರು.

-3 ಪ್ರಯಾಣಿಕರು ವುಹಾನ್‌ ಸಿಟಿಯಿಂದ ಬಂದವರು.

-1,984 ಪ್ರಯಾಣಿಕರು ಕೊರೊನಾ ಸೋಂಕು ಕಾಣಿಸಿಕೊಂಡ ದೇಶದಿಂದ ಬಂದವರು.

-245 ಮಂದಿಗೆ ರಕ್ತ ಮಾದರಿ ಪರೀಕ್ಷೆ.

-468 ಮಂದಿ ನಿಗಾವಹಿಸಲು ನೋಂದಣಿಯಾದ ಶಂಕಿತರು.

Advertisement

Udayavani is now on Telegram. Click here to join our channel and stay updated with the latest news.

Next