Advertisement

ಅಂಗಡಿಗಳ ಮೇಲೆ ನಿಗಾ; ದೂರು ಬಂದರೆ ತತ್‌ಕ್ಷಣ ಕಾರ್ಯಾಚರಣೆ

11:22 PM Sep 21, 2019 | mahesh |

ಮಹಾನಗರ: ಕೇಂದ್ರ ಸರಕಾರವು ದೇಶದೆಲ್ಲೆಡೆ ಇ-ಸಿಗರೇಟ್‌ ನಿಷೇಧಗೊಳಿಸಿದ ಬೆನ್ನಲ್ಲೇ ಇದೀಗ ಮಂಗಳೂರು ನಗರದಲ್ಲಿಯೂ ಪೊಲೀಸ್‌ ಮತ್ತು ಆರೋಗ್ಯ ಇಲಾಖೆಯು ಇ-ಸಿಗರೇಟ್‌ ಮಾರಾಟ-ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿದೆ.

Advertisement

ಆ ಮೂಲಕ ಇ-ಸಿಗರೇಟ್‌ ಮಾರಾಟ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಸಹಕಾರದೊಂದಿಗೆ ತತ್‌ಕ್ಷಣದ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಇದಕ್ಕೆ ಕಡಿವಾಣ ಹಾಕಲು ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ನಿರ್ಧರಿಸಿದೆ.

ಇ-ಸಿಗರೇಟ್‌ ವ್ಯಸನಕಾರಿಯಾಗಿದ್ದು, ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿ ಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ ಕಾರವು ಕೆಲವು ದಿನಗಳ ಹಿಂದಷ್ಟೇ ಇ- ಸಿಗರೇಟ್‌ ಮಾರಾಟಕ್ಕೆ ನಿಷೇಧ ಹೇರಿ ಆದೇಶಿಸಿತ್ತು. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇ-ಸಿಗರೇಟ್‌ ಮಾರಾಟ ಕಡಿಮೆ ಇದೆ. ಆದಾಗ್ಯೂ ಕೆಲವೊಂದು ಶಿಕ್ಷಣ ಸಂಸ್ಥೆಗಳು ಹೆಚ್ಚಿರುವ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಇ-ಸಿಗರೇಟ್‌ ಸಿಗುತ್ತಿದೆ.

ಮಂಗಳೂರಿನಲ್ಲಿಯೂ ಇ-ಸಿಗರೇಟ್‌ ಮಾರಾಟ ಶೇ.90ರಷ್ಟು ಇಲ್ಲವಾದರೂ ವಿದ್ಯಾರ್ಥಿಗಳಿಗೆ ಕೆಲವೊಂದು ಕಡೆಗಳಲ್ಲಿ ಸುಲಭವಾಗಿ ಕೈಗೆಟಕುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿವೆ. ಏಕೆಂದರೆ ನಗರದಲ್ಲಿ ಗಾಂಜಾ ಸಹಿತ ಮಾದಕ ವಸ್ತುಗಳ ಜಾಲ ವ್ಯಾಪಕವಾಗಿರುವ ಕಾರಣ ಇ-ಸಿಗರೇಟ್‌ ಕೂಡ ಮಾರಾಟ ಹೆಚ್ಚಾಗಿ ಇರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆರು ತಿಂಗಳ ಹಿಂದೆ ಲಾಲ್‌ಬಾಗ್‌ನಲ್ಲಿ ವಿದ್ಯಾರ್ಥಿಯೋರ್ವ ಇ-ಸಿಗರೇಟ್‌ ಸೇದು ತ್ತಿ ರುವುದು ಕಂಡು ಬಂದಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿತ್ತು. ದೇರಳಕಟ್ಟೆಯಲ್ಲಿ ಒಂದೆರಡು ಅಂಗಡಿಗಳಲ್ಲಿ ಇ-ಸಿಗರೇಟ್‌ ಮಾರುತ್ತಿದ್ದವರು ಈಗ ಅದನ್ನು ನಿಲ್ಲಿಸಿದ್ದಾರೆ.

ಬೆರಳೆಣಿಕೆಯ ಅಂಗಡಿಗಳಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿರುವ ಬಗ್ಗೆ ಅನುಮಾನವಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಡಾ| ಪ್ರೀತಾ ತಿಳಿಸಿದ್ದಾರೆ.

Advertisement

ಎಫ್‌ಐಆರ್‌ ದಾಖಲು
ಇನ್ನು ಮುಂದೆ ದಾಳಿ ವೇಳೆ ಇ-ಸಿಗರೇಟ್‌ ಮಾರಾಟ ಕಂಡು ಬಂದರೆ, ಅಂತಹ ಅಂಗಡಿ ಮಾಲಕರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿ, ಅದನ್ನು ಮುಟ್ಟುಗೋಲು ಹಾಕಲಾಗುವುದು. ಉಳಿದಂತೆ ಶಿಕ್ಷೆಯ ಪ್ರಮಾಣವನ್ನು ಸರಕಾರದ ನಿರ್ದೇಶದ ಪ್ರಕಾರ ವಿಧಿಸಲಾಗುವುದು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಬಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ 1 ಲಕ್ಷ ರೂ. ಗಳವರೆಗೆ ದಂಡ ಅಥವಾ 1 ವರ್ಷ ಜೈಲು, ಎರಡನೇ ಬಾರಿ ಉಲ್ಲಂಘನೆ ಮಾಡಿದವರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು.

ಏನಿದು ಇ-ಸಿಗರೇಟ್‌?
ಸಾಮಾನ್ಯ ಸಿಗರೇಟ್‌ಗಿಂತ ದುಬಾರಿಯಾದ ಇ-ಸಿಗರೇಟ್‌ ಸಾಮಾನ್ಯವಾಗಿ ಪೆನ್‌ ಮಾದರಿಯಲ್ಲಿರುತ್ತದೆ. ರೀಚಾರ್ಜ್‌ ವ್ಯವಸ್ಥೆ ಇರುವುದರಿಂದ ಒಂದು ಸಿಗರೇಟ್‌ ಹಲವಾರು ಮಂದಿ ಬಳಕೆ ಮಾಡುತ್ತಾರೆ. ನಿಕೋಟಿನ್‌ ಅಂಶ ಇದರಲ್ಲಿದ್ದು, ಹೊಗೆ ಕೂಡ ಉತ್ಪತ್ತಿಯಾಗುತ್ತದೆ. ಮೋಜು ಮಸ್ತಿಗಾಗಿ ಇ-ಸಿಗರೇಟ್‌ನ್ನು ವಿದ್ಯಾರ್ಥಿಗಳು ಸಹಿತ ಯುವ ಸಮುದಾಯ ಹೆಚ್ಚಾಗಿ ಬಳಕೆ ಮಾಡುತ್ತಿದೆ.

ಹಾನಿಕಾರಕ ಇ-ಸಿಗರೇಟ್‌
ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಬಿಡುಗಡೆ ಮಾಡಿದ ವರದಿಯಲ್ಲಿ ಇ- ಸಿಗರೇಟ್‌ನ ದುಷ್ಪರಿಣಾಮಗಳ ಬಗ್ಗೆ ಉಲ್ಲೇಖೀಸಲಾಗಿದೆ. ಡಿಎನ್‌ಎಗೆ ಹಾನಿ, ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು, ಉಸಿರಾಟ, ಹೃದಯ ಸಂಬಂಧಿ ಸಮಸ್ಯೆಗಳು, ನರ ಸಂಬಂಧಿ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿದೆ.

ಮಾಹಿತಿಯನ್ನಾಧರಿಸಿ ದಾಳಿ
ಮಂಗಳೂರಿನಲ್ಲಿ ಇ-ಸಿಗರೇಟು ಮಾರಾಟ ಇಲ್ಲ. ಒಂದು ವೇಳೆ ಅಲ್ಲೊಂದು ಇಲ್ಲೊಂದು ಮಾರಾಟ ಪ್ರಕರಣ ಕಂಡು ಬಂದರೆ ತತ್‌ಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸಾರ್ವಜನಿಕರು ಮಾಹಿತಿ ನೀಡಿದ್ದಲ್ಲಿ ಆ ಮಾಹಿತಿಯನ್ನಾಧರಿಸಿ ದಾಳಿ ನಡೆಸಿ ಮಾರಾಟ ಮಾಡುತ್ತಿರುವುದು ನಿಜವಾದಲ್ಲಿ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು.
 - ಲಕ್ಷ್ಮೀಗಣೇಶ್‌, ಡಿಸಿಪಿ, ಅಪರಾಧ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next