ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ದುರಂತದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲೂ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.
ಈ ಸಂಬಂಧ ನಗರದ ಹೋಟೆಲ್ಗಳ ಸಿಬ್ಬಂದಿ, ಪ್ರಾರ್ಥನಾ ಮಂದಿರಗಳು ಮತ್ತು ಮಾಲ್ಗಳ ಸಿಬ್ಬಂದಿ ಸೇರಿದಂತೆ ಸಾವಿರಾರು ಜನರ ಜತೆ ಗುರುವಾರ ನಗರ ಪೊಲೀಸ್ ಆಯುಕ್ತರು, ಹಿರಿಯ ಅಧಿಕಾರಿಗಳು ಸಭೆ ನಡೆಸಿದರು.
ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ನಗರದಲ್ಲಿ ಎಲ್ಲಾ ಕಡೆ ಆಗಂತುಕರ ಮೇಲೆ ಪೊಲೀಸರೇ ಕಣ್ಣಿಡುವುದು ಕಷ್ಟ. ಹೀಗಾಗಿ, ನಗರದಲ್ಲಿ ಒಂದು ಕೋಟಿಗೂ ಹೆಚ್ಚು ಜನರಿದ್ದು, ಅವರ ಎರಡೂ ಕಣ್ಣುಗಳು ‘ಪೊಲೀಸ್ ಕಣ್ಣಾಗಬೇಕು’. ಈ ಮೂಲಕ ನಗರದ ಸುರಕ್ಷತೆಗೆ ಪೊಲೀಸರ ಜತೆ ನಾಗರಿಕರು ಕೈ ಜೋಡಿಸಬೇಕು ಎಂದರು.
ಬೆಂಗಳೂರಿಗೆ ಬೆದರಿಕೆಯಿಲ್ಲ: ಬೆಂಗಳೂರಿನಲ್ಲಿ ಉಗ್ರರ ದಾಳಿ ಸಂಬಂಧ ಯಾವುದೇ ಬೆದರಿಕೆಯಿಲ್ಲ. ಬೆದರಿಕೆ ಕರೆಗಳೂ ಬಂದಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಭದ್ರತಾ ಕ್ರಮಗಳು ಹೇಗಿರಬೇಕು, ನಾಗರಿಕರು ಪೊಲೀಸ್ ಇಲಾಖೆ ಜತೆ ಹೇಗೆ ಕೈಜೋಡಿಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಕೆಲವು ಸೂಚನೆಗಳನ್ನು ನೀಡಲಾಗಿದೆ. ಪ್ರಮುಖವಾಗಿ ದೇವಾಲಯ, ಚರ್ಚ್, ಮಸೀದಿಗಳು ಮಾಲ್ಗಳು ಸೇರಿದಂತೆ 500ಕ್ಕೂ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮೆಟಲ್ ಡಿಟೆಕ್ಟರ್ ಇನ್ನಿತರೆ ಸ್ಕ್ಯಾನರ್‌ಗಳು, ಸಿಸಿ ಕ್ಯಾಮೆರಾ ಅಳವಡಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
Advertisement
ನಗರಕ್ಕೆ ಯಾವುದೇ ಹಂತದಲ್ಲೂ ಉಗ್ರರ ದಾಳಿಯ ಬೆದರಿಕೆ ಇಲ್ಲ. ಬೆದರಿಕೆ ಕರೆಗಳು ಕೂಡ ಬಂದಿಲ್ಲ. ಆದರೂ, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಭದ್ರತಾ ಮುನ್ನೆಚ್ಚರಿಕೆ ಕೈಗೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
Related Articles
Advertisement
ಖಾಸಗಿ ಸೆಕ್ಯೂರಿಟಿ: ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸ ಬೇಕು. ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಹೋಟೆಲ್ಗಳಲ್ಲಿ ತಂಗುವವರ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ಪಡೆದು ಕೊಳ್ಳಬೇಕು. ಜತೆಗೆ, ಪ್ರಾರ್ಥನಾ ಮಂದಿರಗಳು ಮಾಲ್ಗಳು, ಜನನಿಬಿಡ ಪ್ರದೇಶಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು.ಅಥವಾ ಖಾಸಗಿ ಸೆಕ್ಯೂರಿಟಿಯನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಶ್ರೀಲಂಕಾದಿಂದ ವಾಪಸ್ ಬಂದವರು, ಪ್ರಾರ್ಥನಾ ಮಂದಿರಗಳ ಟ್ರಸ್ಟಿಗಳು, ಮಾಲ್ ಸಿಬ್ಬಂದಿ ಸೇರಿ ಸಾವಿರಾರು ಮಂದಿ ಜತೆ ಸಭೆ ನಡೆಸಲಾಗಿದೆ. ಹಲವರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಜತೆಗೆ, ಹೇಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸಹಕಾರ ಪಡೆಯಿರಿ ಎಂದಿದ್ದೇವೆ. ಶಾಶ್ವಾತ ಪರಿಹಾರ ಕಂಡುಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.
ಸರ್ಕಾರ ಒಪ್ಪಿದರೆ ಉಗ್ರ ನಿಗ್ರಹ ಪಡೆ ಸ್ಥಾಪನೆ
ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳ ಮೇಲೆ ನಿಗಾವಹಿಸಲು ಪ್ರತ್ಯೇಕವಾಗಿ ಉಗ್ರ ನಿಗ್ರಹ ದಳ (ಎಟಿಸಿ) ಸ್ಥಾಪಿಸುವ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದೆ. ಸರ್ಕಾರದ ಒಪ್ಪಿಗೆ ಸಿಕ್ಕ ಬಳಿಕ ಎಟಿಸಿ ಸ್ಥಾಪನೆಯಾಗಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದರು.
ಚರ್ಚ್‌ಗಳಿಗೆ ಭದ್ರತೆ
ಶ್ರೀಲಂಕಾದ ಕೊಲಂಬೋದಲ್ಲಿ ಚರ್ಚ್‌ಗಳನ್ನು ಗುರಿಯಾಗಿಸಿಕೊಂಡು ಉಗ್ರಗಾಮಿಗಳು ಬಾಂಬ್ ಸ್ಫೋಟಿಸಿದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಚರ್ಚ್‌ಗಳಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಚಾಮರಾಜಪೇಟೆಯ ಸೇಂಟ್ ಲೂಕೆಸ್ ಚರ್ಚ್, ಶಿವಾಜಿನಗರದ ಸೇಂಟ್ ಮೇರೀಸ್ ಬಾಸಲಿಕ ಚರ್ಚ್ ಸೇರಿದಂತೆ ಕ್ರೈಸ್ತ ಧರ್ಮದ ಹಲವು ಪ್ರಾರ್ಥನಾ ಕೇಂದ್ರಗಳ ಸುತ್ತ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ಇಲಾಖೆ ನಿಯೋಜಿಸಿದೆ.
ಅಗತ್ಯ ಭದ್ರತಾ ಕ್ರಮ
ಸಭೆಯಲ್ಲಿ ಪಾಲ್ಗೊಂಡಿದ್ದ ಪಂಚತಾರಾ ಹೋಟೆಲ್ ಸಿಬ್ಬಂದಿಯೊಬ್ಬರು ಮಾತನಾಡಿ, ‘ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟ ಘಟನೆ ಬೆನ್ನಲ್ಲೇ ಬಹಳಷ್ಟು ಎಚ್ಚೆತ್ತುಕೊಂಡಿದ್ದೇವೆ. ಭದ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಜತೆಗೆ, ಅಹಿತಕರ ಘಟನೆಗಳು ನಡೆದರೆ ಪರಿಸ್ಥಿತಿ ನಿಭಾಯಿಸಲು ಗೊತ್ತಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದೇವೆ. ಸಭೆಯಲ್ಲಿ ಕೂಡ ಈ ವಿಷಯಗಳು ಪ್ರಸ್ತಾಪವಾಗಿದ್ದು, ಪೊಲೀಸರ ಸಲಹೆ ಸೂಚನೆಗಳನ್ನು ಪಾಲಿಸುತ್ತೇವೆ,’ ಎಂದರು.