ಮಲ್ಪೆ: ಮಳೆಗಾಲ ಆರಂಭವಾಗುತ್ತಿದ್ದಂತೆ ನಗರ ಮತ್ತು ಗ್ರಾಮೀಣ ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ರಾಶಿ ಬಿದ್ದ ತ್ಯಾಜ್ಯಗಳು ವಿಲೇವಾರಿಯಾಗದೆ ಮಳೆ ನೀರಿಗೆ ಕೊಳೆತು ಮಾರಕ ರೋಗಗಳನ್ನು ಹರಡುವ ಸೊಳ್ಳೆಗಳ ಉತ್ಪತ್ತಿಗಳ ಕೇಂದ್ರವಾಗಿ ರೂಪಗೊಳ್ಳುತ್ತಿದೆ.
ಸಂಬಂಧಪಟ್ಟ ಆಡಳಿತ ಕಸ ತೆರವುಗೊಳಿಸಿದರೂ ಮಾರನೇ ದಿನ ಅಷೇr ರಾಶಿ ಬೀಳುತ್ತಿರುವುದು ಆಡಳಿತಕ್ಕೂ ತಲೆನೋವಾಗಿ ಪರಿಣಮಿಸಿದೆ.
ಕರಾವಳಿಯ ತೀರದ ಉಡುಪಿ ನಗರಸಭಾ ವ್ಯಾಪ್ತಿಯ ಕೊಡವೂರು, ಮಲ್ಪೆ ಸೆಂಟ್ರಲ್, ಗ್ರಾಮ ಪಂಚಾಯತ್‌ಗಳಾದ ತೆಂಕನಿಡಿಯೂರು, ಅಂಬಲಪಾಡಿ, ತೋನ್ಸೆ, ಕಲ್ಯಾಣಪುರ, ವ್ಯಾಪ್ತಿಯಲ್ಲಿ ರಸ್ತೆಯ ಬದಿಯಲ್ಲಿ ತ್ಯಾಜ್ಯರಾಶಿಗಳು ತುಂಬಿಕೊಂಡಿದ್ದು ತ್ಯಾಜ್ಯಗಳು ಮಳೆಗೆ ಕೊಳೆತು ಹೋಗಿ ರೋಗವನ್ನು ಹರಡುವ ಭೀತಿ ಹೆಚ್ಚಾಗುತ್ತಿದೆ. ಬಡಾನಿಡಿಯೂರು, ಕಡೆಕಾರು ಗ್ರಾಮದಲ್ಲಿ ಈಗ ಸಮಸ್ಯೆ ಕಡಿಮೆಯಾಗಿದೆ.
ಮುಖ್ಯವಾಗಿ ರಸ್ತೆ ಬದಿಯಲ್ಲಿ ಕಸವನ್ನು ಎಸೆಯಲಾಗುತ್ತದೆ. ಕೆಲವೆಡೆ ಮಳೆಗಾಲಕ್ಕೂ ಮೊದಲೇ ಬಿದ್ದಂತಹ ಕಸ ತ್ಯಾಜ್ಯಗಳು ಇನ್ನೂ ಹಾಗೆಯೇ ಉಳಿದುಕೊಂಡಿದೆ. ಪ್ರಮುಖ್ಯವಾಗಿ ಕಸ ವಿಲೇವಾರಿಗೆ ನಗರಸಭೆಯಲ್ಲಿ ಪೌರ ಕಾರ್ಮಿಕರ ಕೊರೆತೆಯಾದರೆ, ಪಂಚಾಯತ್‌ಗಳಲ್ಲಿ ಸೂಕ್ತವಾದ ವ್ಯವಸ್ಥೆಗಳೇ ಇಲ್ಲ ಎನ್ನಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಅಪರಾಧ ಎಂಬುದು ತಿಳಿದಿದ್ದರೂ, ಮನೆಯಲ್ಲಿ ಉತ್ಪತ್ತಿಯಾದ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ತುಂಬಿ ಸಾರ್ವಜನಿಕ ಪ್ರದೇಶದಲ್ಲಿ ಎಸೆಯುವುದು ನಿರಂತರವಾಗಿ ನಡೆದಿದೆ ಕೆಲವರು ರಾಜಾರೋಷವಾಗಿ ರಸ್ತೆಯ ಬದಿಯಲ್ಲಿ ಎಸೆದು ಹೋಗಿ ಕಸದ ರಾಶಿಯಾಗಿದ್ದು, ಮಳೆಗಾಲದಲ್ಲಿ ಕೊಳೆತು ಸಾಂಕ್ರಮಿಕ ರೋಗ ಉತ್ಪತ್ತಿ ತಾಣವಾಗುತ್ತಿದೆ.