Advertisement

ಕರಾವಳಿಯಲ್ಲಿ ಕಾಡುತ್ತಿದೆ ಸಮುದ್ರ ಮಾಲಿನ್ಯ

06:00 AM Jun 23, 2018 | Team Udayavani |

ವಿಶೇಷ ವರದಿ- ತೆಕ್ಕಟ್ಟೆ : ಮಹಾನಗರಗಳಿಗೆ ಸೀಮಿತವಾಗಿದ್ದ ಪ್ಲಾಸ್ಟಿಕ್‌ ಮಾಲಿನ್ಯಗಳು ಗ್ರಾಮೀಣ ಜನತೆಗೆ ಕಾಡತೊಡಗಿದ್ದು ಕುಂಭಾಸಿ ಗ್ರಾ.ಪಂ.ವ್ಯಾಪ್ತಿಯ ನಿಸರ್ಗ ರಮಣೀಯವಾದ ಕೊರವಡಿ ಸಮುದ್ರ ತೀರದಲ್ಲಿ  ಪ್ಲಾಸ್ಟಿಕ್‌ ತ್ಯಾಜ್ಯಗಳು ಕಡಲ ಒಡಲು ಸೇರುತ್ತಿದ್ದು ಕರಾವಳಿ ಮೀನುಗಾರರಿಗೆ ಆತಂಕ ಎದುರಾಗಿದೆ.

Advertisement

ಕುಂದಾಪುರ ತಾಲೂಕಿನ ಕೋಟೇಶ್ವರ, ಕುಂಭಾಸಿ, ತೆಕ್ಕಟ್ಟೆ  ಪ್ರಮುಖ ಭಾಗದ ಮಳೆ ನೀರು ಹಾಗೂ ತ್ಯಾಜ್ಯಗಳು ನೇರವಾಗಿ ಸಮುದ್ರ ತೀರವನ್ನು ಸೇರುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆಯಲ್ಲಿ ಪ್ರವಾಸಿ ತಾಣಗಳು, ಬೀಚ್‌ಗಳಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ಬಳಸಿ ಎಸೆಯಲ್ಪಡುವ ನೀರಿನ ಪ್ಲಾಸ್ಟಿಕ್‌ ಬಾಟಲ್‌, ಖಾಲಿಯಾದ ಆಹಾರ ಪೊಟ್ಟಣಗಳು  ರಾಶಿ ರಾಶಿಯಾಗಿ ಸಮುದ್ರ ತೀರದ ತೋಡುಗಳಲ್ಲಿ ಬೀಳುತ್ತಿದ್ದು ಸಂಪೂರ್ಣ ಮಲೀನಗೊಳ್ಳುತ್ತಿದೆ.


ಬಲೆಗೆ ಬೀಳುತ್ತಿವೆ ಪ್ಲಾಸ್ಟಿಕ್‌ ರಾಶಿ 
ಕಡಲಿನಲ್ಲಿ ಮೀನುಗಾರಿಕೆ ನಡೆಸುವಾಗ ಎಷ್ಟೋ ಬಾರಿ ಮೀನಿನ ಜತೆ ರಾಶಿ ರಾಶಿ ಪ್ಲಾಸ್ಟಿಕ್‌ ತ್ಯಾಜ್ಯಗಳು ಕಡಲ ಒಡಲನ್ನು ಸೇರುತ್ತಿದೆ .ಪರಿಣಾಮವಾಗಿ ಸಮುದ್ರದಲ್ಲಿನ ಸೂಕ್ಷ್ಮ ಜೀವಿಗಳು ಖನಿಜಾಂಶವನ್ನು ಬಳಸಿ ಪಾಚಿ ತಯಾರಿಸುವ ಪ್ರಮಾಣ ಹೆಚ್ಚಾಗಿ ನೀರು ಹಸಿರಾಗಿಕಾಣುವುದು . ಅಲೆಗಳ ಅಬ್ಬರಕ್ಕೆ ಪಾಚಿಗಳು ದಡ ಸೇರುತ್ತವೆ ಎಂದು ಸ್ಥಳೀಯ ಮೀನುಗಾರ ವಿಶ್ವನಾಥ ಕೊರವಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಾಲಿನ್ಯ ತಡೆಯಿರಿ
ಹಿಂದೆ  ಸಮುದ್ರ ಮೀನುಗಾರಿಕೆ ಮಾಡುವಾಗ ಕಡಲು ಸ್ವತ್ಛವಾಗಿರುತ್ತಿದ್ದವು ಆದರೆ ಈಗ ನಗರ ತ್ಯಾಜ್ಯಗಳು ಸಮುದ್ರವನ್ನು ಸೇರುತ್ತಿದೆ. ಅದೆಷ್ಟೋ ಮೀನುಗಾರರು ಹೊಟ್ಟೆ ಪಾಡಿಗಾಗಿ ಸಮುದ್ರದಲ್ಲಿ ದುಡಿಯುತ್ತಿದ್ದಾರೆ. ಇಂತಹ  ಮಾಲಿನ್ಯ ತಡೆಯಲು ಸರಕಾರ ಕ್ರಮ ಕೈಗೊಳ್ಳಬೇಕು
– ಬೆರ್ಮು ಸದಿಯ ಮರಕಾಲ 
ಹಿರಿಯ ಸಾಂಪ್ರದಾಯಿಕ ಮೀನುಗಾರರು.

 ಸೂಕ್ತ ಕ್ರಮ
ಎಸ್‌ಎಲ್‌ಆರ್‌ಎಂ ಅಡಿಯಲ್ಲಿ  ತ್ಯಾಜ್ಯವನ್ನು  ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದ್ದು, ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಲಾಗುತ್ತದೆ. ಇದರಿಂದ ತ್ಯಾಜ್ಯಗಳು ಸಮುದ್ರ ಸೇರುವುದನ್ನು ತಡೆಗಟ್ಟಬಹುದು.
– ಮಹಾಬಲೇಶ್ವರ ಆಚಾರ್‌, ಉಪಾಧ್ಯಕ್ಷರು, ಗ್ರಾ.ಪಂ.ಕುಂಭಾಸಿ .

Advertisement

Udayavani is now on Telegram. Click here to join our channel and stay updated with the latest news.

Next