Advertisement

ರಾ.ಹೆದ್ದಾರಿ 66ರಲ್ಲಿ ಅನುಷ್ಠಾನಗೊಂಡಿಲ್ಲ ಮಳೆಕೊಯ್ಲು ವ್ಯವಸ್ಥೆ

12:39 AM Oct 05, 2019 | Team Udayavani |

ಉಡುಪಿ: ಅಂತರ್ಜಲ ಮಟ್ಟ ಸುಧಾರಿಸಲು ಮತ್ತು ಹೆಚ್ಚುವರಿ ನೀರು ಸಂಗ್ರಹಿಸಿ ಅಗತ್ಯಕ್ಕೆ ದೊರಕುವಂತೆ ಮಾಡುವುದಕ್ಕಾಗಿ ಕೇಂದ್ರ ಸರಕಾರ ಮಳೆ ಕೊಯ್ಲಿನ ಸುತ್ತೋಲೆ ಹೊರಡಿಸಿದೆ. ಆದರೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾತ್ರ ಇದು ಅನುಷ್ಠಾನಗೊಂಡಿಲ್ಲ.

Advertisement

ಚತುಷ್ಪಥ, ಅಷ್ಟಪಥ ಹೆದ್ದಾರಿಗಳ ಭಾಗವಾಗಿ ಅಭಿವೃದ್ಧಿ ಪಡಿಸಲಾಗುವ ಟೋಲ್‌ ಪ್ಲಾಜಾ ಕಟ್ಟಡ, ಹೆದ್ದಾರಿ ಬದಿಯ ಸೌಲಭ್ಯಗಳು, ಕಟ್ಟಡಗಳು ಸೇರಿದಂತೆ ಎಲ್ಲ ಕಡೆ ಮಳೆ ಕೊಯ್ಲು ಮತ್ತು ಜಲ ಮರುಪೂರಣ ವ್ಯವಸ್ಥೆಯನ್ನು ಅಳವಡಿಸಬೇಕು. ಆದರೆ ಈ ನಿಯಮವನ್ನು ಹೆದ್ದಾರಿ ಇಲಾಖೆ ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ.

ಈ ಸೂಚನೆಗಳನ್ನು ಅನುಷ್ಠಾನಗೊಳಿಸದ ಕಡೆಗಳಲ್ಲಿ ಸಾಮಾನ್ಯ ನಿಯಮದಂತೆ ಉಪ ರಸ್ತೆಯ ಚರಂಡಿಗಳ ನೀರು ನಿಲ್ಲುವ ಮತ್ತು ಅತ್ಯಂತ ಕೆಳಮಟ್ಟದ ಪ್ರದೇಶದಲ್ಲಿ ಪ್ರತಿ ಕಿ.ಮೀ.ನಲ್ಲಿ 0.5 ಮೀ. ವ್ಯಾಸ-10ರಿಂದ 15 ಮೀ. ಆಳದ ಜಲ ಮರುಪೂರಣ ಹೊಂಡಗಳನ್ನು ನಿರ್ಮಿಸಬೇಕಿದೆ. ಇದರ ಪಾಲನೆಯೂ ರಾ.ಹೆ.66ರಲ್ಲಿ ಕಂಡುಬರುತ್ತಿಲ್ಲ.

ಅನುಷ್ಠಾನ ಕಷ್ಟ
ಹೆದ್ದಾರಿ ಇಲಾಖೆ ವ್ಯಾಪ್ತಿಯಲ್ಲಿ ಜಲಮರುಪೂರಣ ಹೊಂಡಗಳನ್ನು ಅಳವಡಿಸಿದರೆ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆಯುಂಟಾಗಬಹುದು ಎಂಬುದು ಇಲಾಖೆಯ ಅಧಿಕಾರಿಗಳ ಸಮಜಾಯಿಷಿ. ಆದರೆ ಇಂತಹ ಅಡೆತಡೆಗಳನ್ನು ನಿವಾರಿಸಿ ಸೂಕ್ತ ರೀತಿಯಲ್ಲಿ ಹೆದ್ದಾರಿ ಬದಿಗಳಲ್ಲಿ ಈ ವ್ಯವಸ್ಥೆ ಮಾಡಬಹುದು ಎಂಬುದರಲ್ಲಿ ಅನುಮಾನವಿಲ್ಲ.

2013ರಲ್ಲೇ ಮಾರ್ಗಸೂಚಿ
ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಮಳೆ ನೀರು ಕೊಯ್ಲು ನಿರ್ಮಾಣಕ್ಕೆ ಸಚಿವಾಲಯ 2013ರ ಸೆ. 5ರಂದು ಸುತ್ತೋಲೆ ಹೊರಡಿಸಿದ್ದು, ರಾ.ಹೆ.ಯುದ್ದಕ್ಕೂ ಮಳೆ ನೀರು ಕೊಯ್ಲು ಮತ್ತು ಜಲ ಮರುಪೂರಣ ಸ್ಥಳಗಳನ್ನು ಸಮಾಲೋಚಕರು ಗುರುತಿಸಿ ಇದನ್ನು ಕರಡು ಅಥವಾ ಡಿಪಿಆರ್‌ನ ಭಾಗದಲ್ಲಿ ಸೇರಿಸಬೇಕು. ಗುತ್ತಿಗೆದಾರರು ಮಳೆ ನೀರು ಕೊಯ್ಲು ಮತ್ತು ಕೃತಕ ಮರು ಪೂರಣ ವ್ಯವಸ್ಥೆಯನ್ನು ನಿರ್ಮಿಸಿವೆ ಮತ್ತು ಇವುಗಳು ಕಾರ್ಯಾಚರಿಸುತ್ತಿವೆ ಎಂದು ಖಾತರಿಪಡಿಸಿದ ಅನಂತರವೇ ಸಂಬಂಧಿತ ಕಾರ್ಯಕಾರಿ ಸಂಸ್ಥೆಗಳು ಸಂಪೂರ್ಣಗೊಂಡ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ.

Advertisement

ಸಮರ್ಪಕ ನಿರ್ವಹಣೆ ಅಗತ್ಯ
ರಸ್ತೆ ನಿರ್ಮಾಣದಿಂದ ನೀರಿನ ಮೇಲ್ಮೆ„ ಹರಿವು ದೊಡ್ಡ ಪ್ರಮಾಣದಲ್ಲಿರುತ್ತದೆ. ದೇಶದಲ್ಲಿ ವ್ಯಾಪಕ ರಸ್ತೆಗಳ ನಿರ್ಮಾಣದಿಂದಾಗಿ ಇದು ಇನ್ನಷ್ಟು ಹೆಚ್ಚುತ್ತದೆ. ಈ ಮೇಲ್ಮೆ„ ಹರಿವನ್ನು ಸಮರ್ಪಕವಾಗಿ ನಿರ್ವಹಿಸಬೇಕಾದ ಅಗತ್ಯ ಇದೆ. ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ನೀರಿನ ಬಳಕೆ ಹೆಚ್ಚುತ್ತಿರುವುದರಿಂದ ಕ್ಷೀಣಿಸುತ್ತಿರುವ ಅಂತರ್ಜಲಕ್ಕೆ ಮರುಪೂರಣಗೊಳಿಸಲು ಈ ನೀರನ್ನು ಬಳಸಬಹುದು.

ದೇಶದಲ್ಲಿ ವಾರ್ಷಿಕ ಸರಾಸರಿ ಸುಮಾರು 1,100 ಎಂ.ಎಂ. ಮಳೆ ಬೀಳುತ್ತದೆ. 1 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗೆ ಮೇಲ್ಮೆ„ ಹರಿವಿನ ಒಟ್ಟು ಪ್ರಮಾಣ ಶೇ. 80 ಎಂದು ಪರಿ
ಗಣಿಸಿದರೂ ಸಾವಿರ ಮೀ.ಗೆ 61,60,000 ಲೀಟರ್ ಗಳಾಗುತ್ತವೆ. ಹೆದ್ದಾರಿಗಳಲ್ಲೂ ಮಳೆಕೊಯ್ಲಿನಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ನೀರಿನ ಬವಣೆ ನಿವಾ
ರಣೆಯಾಗಬಹುದು ಎಂಬ ಯೋಚನೆ ಸರಕಾರದ್ದು.

ಒರತೆ ಇರುವ ಕಾರಣ ಅಳವಡಿಸಿಲ್ಲ
ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಮಳೆನೀರು ಕೊಯ್ಲು ಅಳವಡಿಸುವ ನಿಯಮ ಇದೆ. ಆದರೆ ಕರಾವಳಿಯಲ್ಲಿ ನೀರಿನ ಒರತೆ ಅಧಿಕವಿರುವ ಕಾರಣ ಅನುಷ್ಠಾನಗೊಳಿಸಿಲ್ಲ. ಉತ್ತರ ಕರ್ನಾಟಕ, ಆಂಧ್ರ ಪ್ರದೇಶ ಸಹಿತ ಉತ್ತರ ಭಾರತದ ಕಡೆಗಳಲ್ಲಿ ಭೂಮಿಯಲ್ಲಿ ನೀರಿನ ಸಾಂದ್ರತೆ ತೀರಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಇದನ್ನು ಅನುಷ್ಠಾನಗೊಳಿಸಲಾಗಿದೆ.
-ರಾಘವೇಂದ್ರ ವ್ಯವಸ್ಥಾಪಕರು, ನವಯುಗ ಕನ್‌ಸ್ಟ್ರಕ್ಷನ್ಸ್‌ ಪ್ರೈ.ಲಿ.

- ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next