Advertisement

ಗ್ರಾಮದಲ್ಲಿ ಕೊಳಚೆ ನೀರಿನ ಸಮಸ್ಯೆ ನಿರ್ವಹಣೆ ಅಗತ್ಯ 

08:31 PM Sep 30, 2021 | Team Udayavani |

ಮುನ್ನೂರು ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ನಿರ್ವಹಣೆ ಮಾಡುವುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ. ಅಲ್ಲದೇ ವಿದ್ಯುತ್‌ ಕಂಬಗಳು ಹಳೆಯದಾಗಿದ್ದು ಇವುಗಳನ್ನು ಬದಲಾಯಿಸಬೇಕೆಂಬ ಮನವಿಯಿದೆ. ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ ಒಂದು ಊರು-ಹಲವು ದೂರು ಅಭಿಯಾನದ ಮೂಲಕ  ಪ್ರಯತ್ನಿಸಲಾಗಿದೆ.

Advertisement

ಮುನ್ನೂರು: ಮಂಗಳೂರು ತಾ| ಕೇಂದ್ರದಿಂದ ಸುಮಾರು 12 ಕಿ.ಮೀ. ದೂರದ ಮುನ್ನೂರು ಗ್ರಾ.ಪಂ. ಮಂಗಳೂರು ಬಿ. ಹೋಬಳಿ ಉಳ್ಳಾಲದ ಕಂದಾಯ ಗ್ರಾಮವಾಗಿದೆ. ಗ್ರಾಮದ ಕುತ್ತಾರಿನಿಂದ ದೇರಳಕಟ್ಟೆಯ ವಿವಿಧ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಗೆ ಪ್ರತೀ ದಿನ ಕೊಳಚೆ ನೀರು ಹರಿದು ಬರುತ್ತಿದ್ದು, ಮಳೆಗಾಲದಲ್ಲಿ ಇಲ್ಲಿನ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಮಳೆ ನೀರಿನೊಂದಿಗೆ ಡ್ರೈನೇಜ್‌ ನೀರು ಸೇರಿಕೊಂಡು ಕುತ್ತಾರು ಜಂಕ್ಷನ್‌ ಅರ್ಧ ಮುಳುಗಡೆಯಾದರೆ, ಇದರಿಂದ ಕುತ್ತಾರು ಸ.ಹಿ. ಪ್ರಾಥಮಿಕ ಶಾಲೆಯ ಒಳಗೂ ಡ್ರೈನೇಜ್‌ ನೀರು ಹರಿದು ಕೃತಕ ನೆರೆಯಾಗುತ್ತಿದೆ. ಪ್ರಮುಖ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ವಾಹನ ಸಂಚಾರಕ್ಕೂ ತಡೆಯಾಗುತ್ತಿದೆ.

ದ್ವಿಚಕ್ರ ವಾಹನ ಚಾಲಕರು ಇಲ್ಲಿ ಸಂಚಾರ ನಡೆಸುವುದೇ ದುಸ್ತರ. ಪ್ರಮುಖವಾಗಿ ಕುತ್ತಾರು ಜಂಕ್ಷನ್‌ನಲ್ಲಿ ನಿರ್ಮಾಣವಾಗಿರುವ ಬಹುಮಹಡಿ ಕಟ್ಟಡಗಳ ತ್ಯಾಜ್ಯ ನೀರು ಕುತ್ತಾರ್‌ ಜಂಕ್ಷನ್‌ಗೆ ಹರಿಯುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಈ ತ್ಯಾಜ್ಯ ನೀರು ಸೋಮೇಶ್ವರ ಪುರಸಭೆ ವ್ಯಾಪ್ತಿಯ ರಸ್ತೆ ಬದಿಯ ತೋಡುಗಳಲ್ಲಿ ಶೇಖರಣೆಗೊಂಡು ಸೊಳ್ಳೆ ಉತ್ಪಾದನೆ ಕೇಂದ್ರವಾಗಿ ಮಾರ್ಪಾಡಾಗುತ್ತದೆ.

ಕುತ್ತಾರು ಜಂಕ್ಷನ್‌ನಲ್ಲಿ ತ್ಯಾಜ್ಯ ನೀರನ್ನು ಸಮರ್ಪಕವಾಗಿ ನಿರ್ವಹಣೆ ಅಗತ್ಯವಾಗಿದೆ. ಈ ಗ್ರಾಮದಲ್ಲಿ ಘನತ್ಯಾಜ್ಯ ಘಟಕವಿದ್ದರೂ ಈಗಿರುವ ಘಟಕದಲ್ಲಿ ನಿರ್ವಹಣೆ ಕಷ್ಟವಾಗುತ್ತಿದ್ದು ಘಟಕಕ್ಕೆ ಹೆಚ್ಚುವರಿ ಜಾಗದಲ್ಲಿ ನಿರ್ವಹಣೆಯಾಗಬೇಕಾಗಿದೆ. ಹೊರಗಿನಿಂದ ರಸ್ತೆ ಬದಿಯಲ್ಲಿ ಸುರಿಯುವ ಘನತ್ಯಾಜ್ಯ ನಿರ್ವಹಣೆಗೆ ಈಗಾಗಲೇ ಸಿಸಿಟಿವಿ ಅಳವಡಿಸಿ ಕಾರ್ಯ ನಡೆಸಲಾಗುತ್ತಿದೆ. ಸಂತೋಷ ನಗರದಲ್ಲಿ ದ್ರವತ್ಯಾಜ್ಯದ ಸಮಸ್ಯೆ ಹೆಚ್ಚಾಗಿದ್ದು, ಮದಿನಿ ನಗರ ಮತ್ತು ಸಂತೋಷ್‌ ನಗರದಲ್ಲಿ ದ್ರವತ್ಯಾಜ್ಯ ಗುಂಡಿಗೆ ಗ್ರಾ.ಪಂ. ಪ್ರೋತ್ಸಾಹ ನೀಡುತ್ತಿದ್ದು ಶೇ.60 ದ್ರವತ್ಯಾಜ್ಯ ನಿರ್ವಹಣೆಗೆ ದೊಡ್ಡಮಟ್ಟದಲ್ಲಿ ದ್ರವತ್ಯಾಜ್ಯ ಗುಂಡಿ ನಿರ್ಮಾಣವಾಗಬೇಕಾಗಿದೆ.

ಇತರ ಸಮಸ್ಯೆ ಗಳೇನು?:

  • ಜ ಕುತ್ತಾರು ಜಂಕ್ಷನ್‌ ಸಹಿತ ಒಳರಸ್ತೆಗಳಿಗೆ ಬೀದಿ ದೀಪ ಅಳವಡಿಕೆಯಾಗಬೇಕಾಗಿದೆ.
  • ಉಳಿಯದಲ್ಲಿ ರಸ್ತೆ ಆಭಿವೃದ್ಧಿ, ಕುತ್ತಾರಿನಿಂದ ಸಲಾತ್‌ ನಗರ ಸಂಪರ್ಕಿಸುವ ರಸ್ತೆ, ಸಂತೋಷ್‌ ನಗರ ದೆಕ್ಕಾಡು ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ಪಂಚಾಯತ್‌ ಅನುದಾನದೊಂದಿಗೆ ಹೆಚ್ಚುವರಿ ಅನುದಾನ ಮಂಜೂರಾದರೆ ಮಾತ್ರ ಈ ರಸ್ತೆ ಅಭಿವೃದ್ಧಿಯಾಗಲು ಸಾಧ್ಯ
  • ಬೋರ್‌ವೆಲ್‌ ಸಹಿತ ನೀರಿನ ಸ್ಥಾವರಗಳಲ್ಲಿ ವಿದ್ಯುತ್‌ ವೆಚ್ಚ ಹೆಚ್ಚಾಗುತ್ತಿರುವುದರಿಂದ ಸಂಪೂರ್ಣ ಸೋಲಾರ್‌ ವ್ಯವಸ್ಥೆಗೆ ಪಂಚಾಯತ್‌ ಯೋಜನೆ ರೂಪಿಸಿದ್ದು ಇದಕ್ಕೆ ಅನುದಾನದ ಅಗತ್ಯವಿದೆ.
  • ಮುನ್ನೂರು ಪಂಚಾಯತ್‌ನಲ್ಲಿ ಉಳ್ಳಾಲ ಹೋಬಳಿಯ ಪ್ರಥಮ ಘನ ತ್ಯಾಜ್ಯ ಘಟಕವಿದ್ದರೂ ಅದು ಕೇವಲ 20 ಸೆಂಟ್ಸ್‌ ಜಾಗದಲ್ಲಿದ್ದು ಸ್ಥಳದ ಅಭಾವವಿದ್ದು ಸುಸಜ್ಜಿತ ಘಟಕ ನಿರ್ಮಾಣವಾಗಬೇಕಿದೆ.
  • ಗ್ರಾಮದಲ್ಲಿ ಅರ್ಧದಷ್ಟು ಪ್ರದೇಶದಲ್ಲಿ ಮೆಸ್ಕಾಂಗೆ ಸೇರಿದ ಹಳೆ ಕಂಬಗಳಿದ್ದು ಕಂಬಗಳ ಬದಲಾವಣೆಯಾಗಬೇಕಿದೆ.
  • ಭಂಡಾರ ಬೈಲು, ಹೊಗೆ ಕೋಡಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಆಗಬೇಕಿದೆ.
  • ಭಂಡಾರಬೈಲು ಪ್ರದೇಶದಲ್ಲಿ ಸಾರ್ವಕಾಲಿಕ ರಸ್ತೆ ಅಗತ್ಯವಿದೆ. ಇಲ್ಲಿ ಹಿರಿಯ ನಾಗರಿಕರು ರಸ್ತೆ ಸಮಸ್ಯೆಯಿಂದ ಸಂಚರಿಸುವುದು ದುಸ್ತರವಾಗಿದೆ. ಹೊಗೆಕೋಡಿ ಇಳಿಜಾರು ಪ್ರದೇಶದಲ್ಲಿ ಭೂಕುಸಿತ ಸಮಸ್ಯೆ ಪರಿಹಾರವಾಗಬೇಕಾಗಿದೆ. ಈ ಪ್ರದೇಶದಲ್ಲಿ ಘನತ್ಯಾಜ್ಯಕ್ಕೆ ವಾಹನ ಬಂದರೂ ಜನರು ತ್ಯಾಜ್ಯಗಳನ್ನು ನೀರು ಹರಿದು ಹೋಗುವ ತೋಡುಗಳಿಗೆ ಬಿಸಾಡುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ.
Advertisement

 –ವಸಂತ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next