Advertisement

ತ್ಯಾಜ್ಯ ನೀರು ಬಿಡುವವರ್ಯಾರು; ಮಿಲಿಯನ್‌ ಡಾಲರ್‌ ಪ್ರಶ್ನೆ ಅಲ್ಲ!

11:59 PM Feb 15, 2020 | Sriram |

ಮಗುವಿಗೊಂದು ಚಿತ್ರದ ಹತ್ತು ತುಂಡುಗಳನ್ನು ಕೊಟ್ಟು ಇದನ್ನು ಸೇರಿಸಿದರೆ ಸಿಗುವ ಪ್ರಾಣಿ ಯಾವುದೆಂದು ಹೇಳು ಎಂದು ಹೇಳಿದರು ಶಿಕ್ಷಕರು. ಮಗು ಒಂದು ತುಂಡನ್ನು ಕೈಯಲ್ಲಿ ಎತ್ತಿ ಹಿಡಿದು ಕಂಡು, ಓತಿಕ್ಯಾತ ಎಂದಿತು. ಶಿಕ್ಷಕರು ಅಲ್ಲ ಎಂದು ತಲೆಯಾಡಿಸಿದರು. ಮತ್ತೂಂದು ತುಂಡು ಹಿಡಿದು ಹಲ್ಲಿ ಎಂದಿತು ಮಗು. ಅದಕ್ಕೂ ಶಿಕ್ಷಕರು ಅಲ್ಲ ಎಂದರು. ಕೊನೆಗೆ ಹತ್ತೂ ತುಂಡುಗಳನ್ನು ಜೋಡಿಸಿದಾಗ ಸಿಕ್ಕ ಪ್ರಾಣಿಯೇ ಡೈನೋಸರ್‌. ಅದರಂತೆಯೇ ಇಂದ್ರಾಣಿ ತೀರ್ಥ ನದಿ ಹಾಳಾಗಿರುವ ಕಥೆ. ನಾವೂ ಸಹ ಕೈಗೆ ಸಿಕ್ಕ ತುಂಡುಗಳನ್ನು ಜೋಡಿಸಿ ಯಾರು ಇದಕ್ಕೆ ಕಾರಣವೆಂದು ಹುಡುಕಬೇಕಾದ ಸ್ಥಿತಿ.

Advertisement

ಕಂಬಳ ಕಟ್ಟ: ಇಂದ್ರಾಣಿ ತೀರ್ಥ ನದಿಯಲ್ಲಿ ಇಷ್ಟೆಲ್ಲಾ ಅವಾಂತರ ಹೇಗಾಗುತ್ತಿದೆ? ಯಾರು ಎಲ್ಲಿಂದ ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಾರೆ? ನಗರಸಭೆಯಂಥ ಭವ್ಯ ಆಡಳಿತ ವ್ಯವಸ್ಥೆ ಇದ್ದರೂ ಏಕೆ ಹೀಗೆ? ಯಾರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ನಮ್ಮಲ್ಲಿ ತ್ಯಾಜ್ಯ ನೀರನ್ನು ನಿರ್ವಹಿಸಲು ಸಮರ್ಪಕ ವ್ಯವಸ್ಥೆ ಇಲ್ಲವೇ?

ಇಂಥ ಹತ್ತಾರು ಪ್ರಶ್ನೆಗಳೊಂದಿಗೆ ಇಂದ್ರಾಣಿ ನದಿ ಹರಿದು ಹೋಗಿ ಸಮುದ್ರ ಸೇರುವಲ್ಲಿಗೂ ಸುದಿನ ಅಧ್ಯಯನ ತಂಡ ಭೇಟಿ ನೀಡಿತ್ತು. ವಿಚಿತ್ರವೆಂದರೆ ಈ ಸಮಸ್ಯೆ ಕುರಿತು ಜನರಲ್ಲಿರುವಂತೆಯೇ ಹಲವು ಗೊಂದಲದ ಉತ್ತರಗಳೇ ಸಿಕ್ಕವು. ಒಂದೊಂದುಕಡೆ ಒಂದು ಚಿತ್ರದ ಒಂದು ಭಾಗವಷ್ಟೇ ಸಿಗುತ್ತಿತ್ತು. ಅದನ್ನು ಜೋಡಿಸಿ ನೋಡಿದಾಗ ಸಿಕ್ಕ ಚಿತ್ರವೇ ಬೇರೆ.

ಶಾರದಾ ನಗರದ ಬಳಿ ಹೋದಾಗ, ಈ ಸಮಸ್ಯೆ ಅಲ್ಲೆಲ್ಲಿಂದಲೋ (ಪಣಿಯಾಡಿ ಕಡೆ ತೋರಿಸುತ್ತಾ) ಶುರುವಾಗುತ್ತದೆ. ಜನರು, ಫ್ಲ್ಯಾಟ್‌ಗಳೆಲ್ಲಾ ನದಿಗೇ ತ್ಯಾಜ್ಯ ನೀರನ್ನು ಬಿಡುತ್ತಾರೆ ಎಂದರು. ಅಲ್ಲಿಂದ ಪಣಿಯಾಡಿ ಯಲ್ಲಿಗೆ ಬಂದರೆ ಸ್ಥಿತಿ ಬೇರೆ. ಅದಾದ ಬಳಿಕ ಕಲ್ಸಂಕ ಬಳಿ ಬಂದರೆ ಅದೇ ಕಥೆ. ಇಲ್ಲಿಗಿಂತ ಮುಂದೆ ಹೋಗಿ ನೋಡಿ, ಎಷ್ಟು ಹಾಳಾಗಿದೆ ಎಂದರು ಕೆಲವರು ನಾಗರಿಕರು. ಅದರಂತೆ ಮೂಡನಿಡಂಬೂರು ಗರಡಿ-ನಿಟ್ಟೂರು ಬಳಿ ಹೋದರೆ, ಯಾರೂ ಹೇಳಬೇಕಿಲ್ಲ. ಯಾಕೆಂದರೆ, ನದಿ ತುಂಬಾ ಬರೀ ಕಪ್ಪು ಬಣ್ಣದ ಕೊಳಚೆ ನೀರು. ಅಲ್ಲಿಂದ ನಿಟ್ಟೂರು ಬಳಿ ಹೋದಾಗ, ನಿಜದ ಬಣ್ಣ ಬಯಲಾಯಿತು.

ಅವರೇ ಮಾಡುವುದು, ಇನ್ಯಾರು?
ನಿಟ್ಟೂರಿನಿಂದ ಕಂಬಳಕಟ್ಟ, ಕಲ್ಮಾಡಿ ಕಟ್ಟದ ವರೆಗೆ ಹೋದಾಗ ಸಿಕ್ಕ ಉತ್ತರ ಒಂದೇ. ಇಷ್ಟೊಂದು ಸಮಸ್ಯೆಯಾಗುವುದಕ್ಕೆ ನಗರಸಭೆಯೇ ಕಾರಣ.

Advertisement

ನಿಟ್ಟೂರು ಬಳಿ ಇರುವ ಶುದ್ಧೀಕರಣ ಘಟಕದಿಂದ ರಾತ್ರಿ ಹೊತ್ತಿಗೆ ವಿವಿಧ ವೆಟ್‌ವೆಲ್‌ಗ‌ಳಿಂದ ಬಂದ ತ್ಯಾಜ್ಯ ನೀರನ್ನು ಶುದ್ಧೀಕರಿಸದೇ ನೇರವಾಗಿ ಸಮೀಪದಲ್ಲೇ ನದಿ ಸೇರುವ ಜಾಗದಲ್ಲಿ ಬಿಟ್ಟುಬಿಡುತ್ತಾರೆ. ಅದರ ದುರ್ನಾತ ಹೇಳತೀರದು. ರಾತ್ರಿ ಹೊತ್ತಿನಲ್ಲಿ ಇಲ್ಲಿ ಸಂಚರಿಸುವುದೇ ಕಷ್ಟ. ಹತ್ತಿರವಿರುವ ಮನೆ ಗಳಲ್ಲಂತೂ ಇರಲು ಸಾಧ್ಯವೇ ಇಲ್ಲ. ಇಡೀ ರಾತ್ರಿ ನಿದ್ದೆ ಮಾಡದೆ ಕಳೆಯಬೇಕು ಎನ್ನುತ್ತಾರೆ ಸ್ಥಳೀಯರು.

ಈ ದೂರು ಒಬ್ಬರಿಂದ ಬಂದಿಲ್ಲ. ಈ ಪ್ರದೇಶದುದ್ದಕ್ಕೂ ಸುಮಾರು 30ಕ್ಕೂ ಹೆಚ್ಚು ಮಂದಿಯನ್ನು ಮಾತನಾಡಿಸಿ ದಲ್ಲೆಲ್ಲ ಕೇಳಿಬಂದದ್ದು ಒಂದೇ ದೂರು- ಯಾರಿಗೆಂದು ಬುದ್ಧಿ ಹೇಳ್ಳೋದು? ನಗರ ಸಭೆಯವರೇ ವೆಟ್‌ವೆಲ್‌ಗ‌ಳಿಂದ, ಶುದ್ಧೀ ಕರಣ ಘಟಕದಿಂದ ಬಿಟ್ಟು ಬಿಡುತ್ತಾರೆ. ಹೀಗಿರುವಾಗ ಏನು ಮಾಡುವುದು?’ ಎಂದು ಅಸಹಾಯಕರಾಗಿ ಉತ್ತರಿಸಿದರು.

ಸ್ವತ್ಛಗೊಳಿಸುವುದೇ ಇಲ್ಲ
ಮೊದಲೇ ಬೆಂಕಿಗೆ ಬಿದ್ದ ಸ್ಥಿತಿ. ಅದರಲ್ಲಿ ಬಾಣಲೆಗೆ ಹಾಕಿದರೆ ಹೇಗಾಗಬೇಡ? ಅದೇ ಸ್ಥಿತಿ ಹಲವರಿಗೆ. ಮೂಡ ನಿಡಂಬೂರು ಬಳಿ ನಾವು ಹೋದಾಗ ಕಂಡು ಬಂದದ್ದೇನೆಂದರೆ ನದಿಯನ್ನು ಸ್ವತ್ಛಗೊಳಿಸದೇ ವರ್ಷಗಳೇ ಆಗಿರಬಹುದೆಂಬ ಸತ್ಯ.

ನದಿಯ ಎರಡೂ ಬದಿಯಲ್ಲಿನ ಬಿದಿರು,ಮರಗಳು ಬಿದ್ದು ನೀರಿನ ಹರಿವಿಗೆ ಅಡ್ಡಿ ಯಾಗಿದ್ದರೆ, ಅಲ್ಲೇ ನಿಂತ ಕೊಳಚೆ ನೀರಿನಲ್ಲಿ ಎಲ್ಲೆಲ್ಲಿಂದಲೋ ಹರಿದು ಬಂದ ಪ್ಲಾಸ್ಟಿಕ್‌ ಬಾಟಲಿಗಳು, ಕವರ್‌, ಮತ್ತಿತರಕಸಗಳೆಲ್ಲ ನಿಂತು ವಾಕರಿಕೆ ಹುಟ್ಟಿಸು ವಂತಿತ್ತು. ಅದರ ಪಕ್ಕದಲ್ಲೇ ಮನೆಗಳು. ಈ ದುರ್ವಾಸನೆ ಮತ್ತು ಕೆಟ್ಟ ಪರಿಸರದ ಮಧ್ಯೆ ಬದುಕು ನಡೆಸಬೇಕಾದ ಅನಿವಾರ್ಯತೆ ಹಲವರದ್ದು.

ಮತ್ತೂಂದು ಬದಿಗೆ ಹೋದರೂ ಇದೇ ಸಮಸ್ಯೆ. ಇಂಡೋನೇಷ್ಯಾದ ನದಿ ಸಿಟ್ರಂನ್ನು ನೆನಪಿಸುತ್ತಿತ್ತು. ಸಿಟ್ರಂ ನದಿ ಜಗತ್ತಿನಲ್ಲೇ ಅತ್ಯಂತ ಕಲುಷಿತವಾದ ನದಿ. ಎಲ್ಲಿ ಕಂಡರೂ ಪ್ಲಾಸ್ಟಿಕ್‌. ನಮ್ಮ ಇಂದ್ರಾಣಿ ನದಿಯೂ ಅದೇ ಸ್ಥಿತಿಯಲ್ಲಿದೆಯೇ ಎಂಬ ಆತಂಕ ಹುಟ್ಟಿಸಿತು.

ಒಂದಕ್ಕೊಂದು ತಾಳೆ
ನಗರದ ಹಲವೆಡೆ ಒಳಚರಂಡಿ ವ್ಯವಸ್ಥೆ ಇನ್ನೂ ಆಗಿಲ್ಲ. ಆದರೆ ವಸತಿ, ವಾಣಿಜ್ಯ ಕಟ್ಟಡಗಳಿಗೆ ಪರವಾನಿಗೆ ನೀಡುವುದು ಅಂದಿನಿಂದಲೂ ನಡೆದೇ ಇದೆ ಎಂಬುದು ನಗರ ಸಭೆಯ ಮೇಲೆ ಇರುವ ಆರೋಪ. ಕೆಲವು ಅಧಿಕಾರಿಗಳು ಇಂದ್ರಾಣಿ ನದಿಗೆ ತ್ಯಾಜ್ಯ ನೀರು ಹರಿಸಲು ಅಕ್ರಮ ಸಂಪರ್ಕ ಕೊಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಈಗಿನ ಸ್ಥಿತಿ ನೋಡಿದರೆ ಒಂದಕ್ಕೊಂದು ತಾಳೆ ಹೊಂದುವಂತಿದೆ. ಯಾಕೆಂದರೆ 45 ವರ್ಷಗಳಲ್ಲಿ ಎರಡು ಹಂತಗಳಲ್ಲಿ ಒಳಚರಂಡಿ ನಿರ್ಮಾಣವಾದರೂ ವ್ಯವಸ್ಥೆ ಒಂದಿನಿತೂ ಸರಿಯಾಗಿಲ್ಲ. ಅದರ ಪರಿಣಾಮವೇ ಈ ಅವ್ಯವಸ್ಥೆ.

ಶುದ್ಧೀಕರಣ ಘಟಕ ಇಲ್ಲವೇ?
ಹಾಗೆ ಇಲ್ಲ ಎಂದು ಹೇಳಿ ಮೂಗು ಮುರಿದು ಬಿಡುವಂತಿಲ್ಲ. ಇದೆ. ಆದರೆ ಸಂಪೂರ್ಣ ಕಾರ್ಯ ನಿರ್ವಹಿಸುತ್ತದೆಯೇ ಎಂದು ಕೇಳುವಂತಿಲ್ಲ. ಈ ಪ್ರಶ್ನೆ ನಗರಸಭೆ ಅಧಿಕಾರಿಗಳಿಂದ ಹಿಡಿದು ಹಲವರಿಗೆ ಸಿಟ್ಟು ತರಿಸಬಹುದು. ಯಾಕೆಂದರೆ, ಅದು ಸರಿಯಾಗಿ ಅಲ್ಲ ; ನಗರದ ಅಗತ್ಯಕ್ಕೆ ಹೊಂದುತ್ತಲೇ ಇಲ್ಲ. ಇರುವ ಎಲ್ಲ ಘಟಕಗಳನ್ನು ಮುಚ್ಚಿಕೊಂಡು, ನಾಮ್‌ಕೇವಾಸ್ಥೆ ಅಸ್ತಿತ್ವದಲ್ಲಿದೆ, ಅದರ ಅವಾಂತರವೇ ಇದು.

ಮಾಹಿತಿ ಕೊಡಲಿಕ್ಕೆ
ಹಲವು ಸಬೂಬು
ಉಡುಪಿ ನಗರದ ಪ್ರಸಿದ್ಧಿಗೇ ಕುತ್ತು ತರುತ್ತಿದೆ ಈ ಇಂದ್ರಾಣಿ ನದಿಗೆ ತ್ಯಾಜ್ಯ ನೀರು ಬಿಡುತ್ತಿರುವ ಸಮಸ್ಯೆ. ಸ್ವತ್ಛತಾ ಜಿಲ್ಲೆ ಎಂಬ ಅಭಿದಾನಕ್ಕೂ ಪಾತ್ರವಾಗಿರುವ ಜಿಲ್ಲೆ ನಮ್ಮದು. ಜತೆಗೆ ಧಾರ್ಮಿಕ ಕ್ಷೇತ್ರ. ಲಕ್ಷಾಂತರ ಮಂದಿ ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗಾಗಿ ಪ್ರವಾಸೋದ್ಯಮ ಕ್ಷೇತ್ರವಾದ ಉಡುಪಿಯ ಭವಿಷ್ಯದ ಆರ್ಥಿಕತೆ ದೃಷ್ಟಿಯಿಂದಲೂ ಇದು ಸ್ವತ್ಛಗೊಳ್ಳುವುದು ತೀರಾ ಅವಶ್ಯ. ಈ ದೃಷ್ಟಿಯಿಂದಲೇ ರಚನಾತ್ಮಕವಾಗಿ ಸಮಸ್ಯೆಯ ಆಳರಿವನ್ನು ಜನರ ಎದುರು ಇಡುತ್ತಾ ಪರಿಹಾರಕ್ಕಾಗಿ ಪ್ರಯತ್ನಿಸೋಣ ಎಂದು ಈ ಸರಣಿ ಆರಂಭಿಸಲಾಗಿದೆ. ಇದು ಚಿಕಿತ್ಸಕ ನೆಲೆಯ ಸರಣಿ. ಹಾಗಾಗಿ ಹಲವು ಬಾರಿ ನಗರಸಭೆಗೆ ಸಾಕಷ್ಟು ಮಾಹಿತಿ ಕೋರಿ ಹೋದೆವು. ಕೆಲವು ಹಿರಿಯರು ಸ್ಪಂದಿಸಿದರು. ಇನ್ನು ಕೆಲವರು, ಸಂಜೆ ಐದಕ್ಕೆ ಬನ್ನಿ. ನಾಳೆ ಬೆಳಗ್ಗೆ ಬನ್ನಿ ಎಂದರು. ಓರ್ವ ಸಿಬಂದಿಯಂತೂ, “ಏನ್ರೀ ನೀವು ಇನ್ನೊಂದು ನಗರ ಸಭೆ ಮಾಡ್ತೀರಾ?’ ಎಂದು ಉಡಾಫೆಯಿಂದ ಪ್ರಶ್ನಿಸಿ ದರು. 22 ವರ್ಷಗಳಿಂದ ಇರುವ ಈ ಸಮಸ್ಯೆ ತೀವ್ರ ಸ್ವರೂಪ ಪಡೆಯಲು ಇಂತಹ ಕೆಲವರ ನಿರ್ಲಕ್ಷ್ಯವೇ ಕಾರಣವಾಯಿತೇ ಎಂಬುದು ಯಕ್ಷಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next