Advertisement

ನಿರುಪಯುಕ್ತ ಜಾಗ ಈಗ ಉದ್ಯಾನ

11:18 AM May 15, 2019 | Team Udayavani |

ತೇರದಾಳ: ಪಟ್ಟಣದ ಬಸ್‌ ನಿಲ್ದಾಣ ಬಳಿಯ ಮಹಾತ್ಮ ಗಾಂಧಿ ಕ್ರೀಡಾಂಗಣದ ಕಾಂಪೌಂಡ್‌ಗೆ ಹೊಂದಿಕೊಂಡಿದ್ದ ನಿರುಪಯುಕ್ತ ಜಾಗ ಈಗ ಉದ್ಯಾನವನವಾಗಿ ಮಾರ್ಪಟ್ಟಿದೆ.

Advertisement

ಖಾಸಗಿ ವಾಹನಗಳ ಚಾಲಕರು ಉದ್ಯಾನವನ ನಿರ್ಮಿಸಿ ಸಾಮಾಜಿಕ ಕಾರ್ಯ ಕೈಗೊಂಡಿದ್ದಾರೆ. ಮೂತ್ರವಿಸರ್ಜನೆ, ಸತ್ತ ಪ್ರಾಣಿ ಸೇರಿದಂತೆ ಗಲೀಜು ತಂದು ಹಾಕಿ ಜಾಗವನ್ನು ದುರುಪಯೋಗ ಪಡಿಸಿಕೊಳ್ಳಲಾಗಿತ್ತು. ಇದನ್ನು ಕಂಡ ಆಟೋ ರಿಕ್ಷಾ, ಮ್ಯಾಕ್ಸಿಕ್ಯಾಬ್‌ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘದವರು ಪರಿಸರ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ತಮ್ಮ ಸ್ವಂತ ಹಣದಲ್ಲಿಯೇ ಸುಮಾರು ಅರ್ಧ ಕಿ.ಮೀ ದೂರದವರೆಗೆ ಪೈಪ್‌ಲೈನ್‌ ಅಳವಡಿಸಿ ನೀರಿನ ಅನುಕೂಲ ಮಾಡಿಕೊಂಡ ಚಾಲಕರು ಹಾಗೂ ಮಾಲೀಕರು ಶ್ರಮದಾನದಿಂದ ಸ್ಥಳ ಶುಚಿಗೊಳಿಸಿದರು. ಸಸಿ ನೆಡಲು ಗುಂಡಿತೋಡಿ, ಗೊಬ್ಬರ ಹಾಕಿ ಭೂಮಿ ಸಿದ್ಧಪಡಿಸಿಕೊಂಡರು. ಗೋವಾ, ಬೆಂಗಳೂರು, ಸಾಂಗಲಿ ಸೇರಿದಂತೆ ವಿವಿಧ ಕಡೆಗಳಿಂದ ಮಾವು, ತೆಂಗು, ತುಳಸಿ, ಬೇವು, ಬದಾಮ, ಸಾಗವಾನಿ, ವಿವಿಧ ತೆರನಾದ ಹೂ-ಬಳ್ಳಿ ಸೇರಿದಂತೆ ಅನೇಕ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ದಿನಂಪ್ರತಿ ಎಲ್ಲರೂ ಸರದಿಯಂತೆ ನೀರುಣಿಸಿದ್ದಾರೆ. ಬೇಸಿಗೆಯಾಗಿದ್ದರಿಂದ ಕೆರೆಯಿಂದ ನೀರು ತಂದು ಹಾಕಿ, ಸಸಿಗಳ ರಕ್ಷಣೆಗೆ ಸ್ವಂತ ಖರ್ಚಿನಿಂದ ತಂತಿ ಜಾಳಿಗೆ ಅಳವಡಿಸಿ ಪೋಷಣೆ ಮಾಡುತ್ತಿದ್ದಾರೆ. ಆಗಾಗ್ಗೆ ಕಳೆ-ಕಸ ತೆಗೆದು ಸ್ವಚ್ಛ ಕಾರ್ಯ ಕೈಗೊಂಡಿದ್ದಾರೆ. ಅನೇಕ ಹೂ, ಗಿಡ, ಬಳ್ಳಿಗಳು ಬೆಳೆದು ನೋಡುಗರನ್ನು ಕೈಬೀಸಿ ಕರೆಯುತ್ತಿವೆ. ಕಲ್ಲಿನ ಆಸನ ನಿರ್ಮಿಸಿದ್ದು, ಬಿಸಿಲಿನ ತಾಪಕ್ಕೆ ಬಸವಳಿದವರಿಗೆ ವಿಶ್ರಾಂತಿಗೆ ಆಹ್ವಾನಿಸುವ ಸುಂದರ ತಾಣವಾಗಿದೆ.

ಚಾಲಕರು ಹಾಗೂ ಮಾಲೀಕರು ಪುರಸಭೆಯವರಿಂದ ನಲ್ಲಿ ಜೋಡಣೆ ಪಡೆ‌ದು ವಿವಿಧ ಕಡೆ ಹೋಗಿ ಅನೇಕ ಸಸಿಗಳನ್ನು ಹಾಗೂ ಮಾರ್ಗದರ್ಶನ ಪಡೆದು ಕೈ ದೋಟ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next